ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಆಸ್ತಿ ತೆರಿಗೆ: ದಂಡ ಕೈಬಿಡಲು, ಬಡ್ಡಿ ಪರಿಷ್ಕರಣೆಗೆ ಪ್ರಸ್ತಾವ ಸಿದ್ಧ

ಆಸ್ತಿ ತೆರಿಗೆ ಪಾವತಿ ವೇಳೆ ವಲಯ ತಪ್ಪಾಗಿ ನಮೂದು * ₹ 333.26 ಕೋಟಿ ಕಳೆದುಕೊಳ್ಳಲಿದೆ ಬಿಬಿಎಂಪಿ?
Last Updated 1 ಡಿಸೆಂಬರ್ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ದತಿಯಡಿ ತೆರಿಗೆ ಪಾವತಿಸುವಾಗ ವಲಯವನ್ನು ತಪ್ಪಾಗಿ ಘೋಷಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸುವುದನ್ನು ಕೈಬಿಡಲು ಹಾಗೂ ಬಾಕಿ ತೆರಿಗೆಗೆ ವಿಧಿಸುವ ಬಡ್ಡಿಯನ್ನು ಪರಿಷ್ಕರಿಸಲು ಸಿದ್ಧತೆ ನಡೆದಿದೆ.

ತೆರಿಗೆ ಮೊತ್ತ ವ್ಯತ್ಯಾಸವನ್ನು ವರ್ಷದೊಳಗೆ ಪತ್ತೆ ಹಚ್ಚಿ ಬಾಕಿ ವಸೂಲಿ ಮಾಡಲು ಬಿಬಿಎಂಪಿ ಕಂದಾಯ ವಿಭಾಗವು ವಿಫಲವಾಗಿರುವುದರಿಂದ ತೆರಿಗೆಯ ವ್ಯತ್ಯಾಸದ ಮೊತ್ತಕ್ಕೆ ದಂಡ ಮತ್ತು ಬಡ್ಡಿ ಸೇರಿಸಿ ವಸೂಲಿ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ದಂಡ ಹಾಗೂ ಬಡ್ಡಿ ಎರಡನ್ನೂ ಕೈಬಿಟ್ಟಿದ್ದೇ ಆದಲ್ಲಿ ಪಾಲಿಕೆ ಸುಮಾರು ₹333.26 ಕೋಟಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 2008-09ರಿಂದ ಸ್ವಯಂಘೋಷಣೆ ಆಸ್ತಿತೆರಿಗೆ ಪದ್ದತಿಯನ್ನು ಜಾರಿಗೊಳಿಸಲಾಗಿತ್ತು. ತೆರಿಗೆ ಪರಿಷ್ಕರಣೆಗೊಂಡ ಬಳಿಕ ತೆರಿಗೆದಾರರು ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು2016-17ರಿಂದ ಅವಕಾಶ ಕಲ್ಪಿಸಲಾಗಿದೆ. ತಮ್ಮ ಸ್ವತ್ತುಗಳ ವಿವರಗಳನ್ನು ಹಾಗೂ ಅನ್ವಯವಾಗುವ ವಲಯ ವರ್ಗೀಕರಣವನ್ನು ಅಧಿಸೂಚನೆಯಲ್ಲಿ ಪರಿಶೀಲಿಸಿಕೊಂಡು ಘೋಷಣೆಯಲ್ಲಿ ನಮೂದಿಸಲು ತೆರಿಗೆದಾರರಿಗೆ ಅವಕಾಶ ಕಲ್ಪಿಸಲಾಗಿತ್ತು.

ತೆರಿಗೆದಾರರು ತಂತ್ರಾಂಶದಲ್ಲಿ ವಲಯ ವರ್ಗೀಕರಣದ ವಿವರಗಳನ್ನು ತಪ್ಪಾಗಿ ನಮೂದಿಸಿದ 78,254 ಪ್ರಕರಣಗಳನ್ನು ಬಿಬಿಎಂಪಿ ಪತ್ತೆ ಹಚ್ಚಿತ್ತು. ವ್ಯತ್ಯಾಸದ ಮೊತ್ತವನ್ನು ದುಪ್ಪಟ್ಟು ದಂಡ ಮತ್ತು ವಾರ್ಷಿಕ ಶೇ 24ರಂತೆ ಬಡ್ಡಿಯೊಂದಿಗೆ ಪಾವತಿಸುವಂತೆ ಮಾಲೀಕರಿಗೆ ಸೂಚನೆ ನೀಡಲು 78,254 ನೋಟಿಸ್‌ಗಳನ್ನು ಸಿದ್ಧಪಡಿಸಿತ್ತು. ಅದರಲ್ಲಿ 11,725 ನೋಟಿಸ್‌ಗಳನ್ನು ಜಾರಿ ಮಾಡಿತ್ತು.

ಆಸ್ತಿ ಮಾಲೀಕರು 2016-17ರಲ್ಲಿ ತೆರಿಗೆ ಮೊತ್ತವನ್ನು ತಪ್ಪಾಗಿ ಘೋಷಿಸಿಕೊಂಡಿದ್ದಲ್ಲಿ, ಆಸ್ತಿ ತೆರಿಗೆ ಪರಿಷ್ಕೃತ ಮೊತ್ತ ಪಾವತಿಸುವಂತೆ 2017-18ರ ಒಳಗೆ ನೋಟಿಸ್ ಜಾರಿ ಮಾಡಬೇಕಾಗಿತ್ತು. ತೆರಿಗೆ ಪಾವತಿಸಿದ ಐದು ವರ್ಷಗಳ ಬಳಿಕ ನೋಟಿಸ್‌ ಜಾರಿ ಮಾಡಿ ದಂಡ ವಿಧಿಸಲು ಅವಕಾಶ ಇಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು. ಹಳೆ ಬಾಕಿಯನ್ನು ದಂಡ ಹಾಗೂ ಬಡ್ಡಿ ಸಮೇತ ವಸೂಲಿ ಮಾಡುವುದನ್ನು ವಿರೋಧಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಭಟನೆಯೂ ನಡೆದಿತ್ತು.

ಈ ಬಗ್ಗೆ ಸರ್ಕಾರದ ಹಂತದಲ್ಲೇ ತೀರ್ಮಾನ ಕೈಗೊಳ್ಳಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಪಾಲಿಕೆಯ ಮುಖ್ಯ ಆಯುಕ್ತರು ಸರ್ಕಾರಕ್ಕೆ ಈ ಬಗ್ಗೆ ವಿಸ್ತೃತ ಪ್ರಸ್ತಾವ ಸಲ್ಲಿಸಿದ್ದರು.

ಬಡ್ಡಿ ಅಥವಾ ದಂಡವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿದಲ್ಲಿ ಬಿಬಿಎಂಪಿಗೆ ಆರ್ಥಿಕ ನಷ್ಟ ಉಂಟಾಗಲಿದ್ದು, ಇದಕ್ಕೆ ಲೆಕ್ಕಪರಿಶೋಧನೆ ವೇಳೆ ಆಕ್ಷೇಪಣೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಲೋಪಕ್ಕೆ ಆಸ್ತಿ ತೆರಿಗೆ ಪಾವತಿದಾರರನ್ನೇ ಸಂಪೂರ್ಣ ಜವಾಬ್ದಾರಿಯನ್ನಾಗಿ ಮಾಡಿದರೆ, ಅದರಿಂದ ಕಾನೂನು ತೊಡಕು ಎದುರಾಗಬಹುದು. ಹಾಗಾಗಿ ಪಾವತಿ ಮಾಡಬೇಕಾದ ಆಸ್ತಿ ತೆರಿಗೆಯ ವ್ಯತ್ಯಾಸದ ಮೊತ್ತಕ್ಕೆ ಬ್ಯಾಂಕ್‌ಗಳು ವಿಧಿಸುವಷ್ಟು ಬಡ್ಡಿ ವಿಧಿಸಬಹುದು ಎಂದು ಶಿಫಾರಸು ಮಾಡಲಾಗಿದೆ ಎಂದು ಗೊತ್ತಾಗಿದೆ.

ದುಪ್ಪಟ್ಟು ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡಿ ವ್ಯತ್ಯಾಸದ ಮೊತ್ತವನ್ನು ಮಾತ್ರ ಸಂಗ್ರಹಿಸುವ ಅಥವಾ ದುಪ್ಪಟ್ಟು ಹಣವನ್ನು ಮನ್ನಾ ಮಾಡಿ ವ್ಯತ್ಯಾಸದ ಮೊತ್ತ ಮತ್ತು ಅದಕ್ಕೆ ಬಡ್ಡಿಯನ್ನು ಸಂಗ್ರಹಿಸುವ ಪ್ರಸ್ತಾವವಿದೆ. ಒಂದು ವೇಳೆ ವಲಯ ವರ್ಗೀಕರಣದ ವಿವರಗಳನ್ನು ಆಸ್ತಿ ತೆರಿಗೆ ತಂತ್ರಾಂಶದಲ್ಲಿ ನಮೂದಿಸಿ, ಕಂಪ್ಯೂಟರೀಕರಣಗೊಳಿಸುವಾಗ ಬಿಬಿಎಂಪಿಯಿಂದ ವಲಯದ ವಿವರ ತಪ್ಪಾಗಿ ನಮೂದಾಗಿದ್ದರೆ, ಅವುಗಳನ್ನು ರದ್ದುಪಡಿಸುವ ಪ್ರಸ್ತಾವವೂ ಸರ್ಕಾರದ ಮುಂದಿದೆ.

ಬಿಬಿಎಂಪಿಯದೇ ಲೋಪ: ಆರ್ಥಿಕ ಇಲಾಖೆ

ಬಾಕಿ ಮೊತ್ತಕ್ಕೆ ದಂಡ ಕೈಬಿಡುವ ಹಾಗೂ ಬಡ್ಡಿ ಪರಿಷ್ಕರಿಸುವ ಪ್ರಸ್ತಾವವನ್ನು ಆರ್ಥಿಕ ಇಲಾಖೆಯೂ ಕೂಲಂಕಷವಾಗಿ ಪರಿಶೀಲಿಸಿದೆ. ವರ್ಗೀಕೃತ ತೆರಿಗೆ ವಲಯವನ್ನು ತಪ್ಪಾಗಿ ನಮೂದಿಸಿದ ಬಗ್ಗೆ ಹಾಗೂ ತೆರಿಗೆಯ ಪರಿಷ್ಕೃತ ಮೊತ್ತದ ಬಗ್ಗೆ ಆಸ್ತಿ ಮಾಲೀಕರಿಗೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡದಿರುವುದು ಬಿಬಿಎಂಪಿಯ ಲೋಪ. ಬಿಬಿಎಂಪಿ ಈಗಲೂ ಬಾಕಿ ಮೊತ್ತ ಸಂಗ್ರಹಿಸಬಹುದು. ಆದರೆ, ದಂಡವನ್ನು ಕೈಬಿಡಬಹುದು. ತೆರಿಗೆಯ ಬಾಕಿ ಮೊತ್ತಕ್ಕೆ ವಾರ್ಷಿಕ ಶೇ 24ರಷ್ಟು ಬಡ್ಡಿ ವಿಧಿಸುವ ಬದಲು, ಬಡ್ಡಿಯನ್ನು ಕಡಿತಗೊಳಿಸಬಹುದು ಎಂದು ಆರ್ಥಿಕ ಇಲಾಖೆ ಶಿಫಾರಸು ಮಾಡಿದೆ.

ಇದರಿಂದ ಬಿಬಿಎಂಪಿಗೆ ಆಗುವ ನಷ್ಟಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಲು ಬರುವುದಿಲ್ಲ ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ.

ಸ್ವಯಂಘೋಷಿತ ಆಸ್ತಿ ತೆರಿಗೆಯ ವಿವರಗಳನ್ನು ಕಂದಾಯ ಅಧಿಕಾರಿಗಳಿಂದ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸುವ ವ್ಯವಸ್ಥೆಯನ್ನು ಬಿಬಿಎಂಪಿ ಬಲಪಡಿಸಬೇಕು ಎಂದೂ ಸಲಹೆ ನೀಡಿದೆ.

₹13.33 ಕೋಟಿ ಬಾಕಿ ವಸೂಲಿ

ವಲಯ ವರ್ಗೀಕರಣದ ವಿವರಗಳನ್ನು ತಪ್ಪಾಗಿ ನಮೂದಿಸಿದ ಆಸ್ತಿ ಮಾಲೀಕರಲ್ಲಿ 7,891 ಮಂದಿ ಈಗಾಗಲೇ ಬಾಕಿ ಮೊತ್ತವನ್ನು ದಂಡ ಸಮೇತ ಪಾವತಿಸಿದ್ದಾರೆ. ಇದರಿಂದ ಬಿಬಿಎಂಪಿ ಬೊಕ್ಕಸಕ್ಕೆ ₹ 13.33 ಕೋಟಿ ಸಂದಾಯವಾಗಿದೆ. ಇಂತಹ ಪ್ರಕರಣಗಳಲ್ಲಿ ಹೆಚ್ಚುವರಿ ಮೊತ್ತವನ್ನು ಮುಂಬರುವ ವರ್ಷಗಳ ತೆರಿಗೆಗೆ ಹೊಂದಾಣಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ.

ವಲಯ ವ್ಯತ್ಯಾಸ– ಆಸ್ತಿ ತೆರಿಗೆ ಬಾಕಿ ವಿವರ (₹ ಕೋಟಿಗಳಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT