ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ಆರ್.ಆರ್. ನಗರ ವಲಯ: ಇಬ್ಬರು ಕಂದಾಯ ಅಧಿಕಾರಿಗಳ ಅಮಾನತು

ಬಸವರಾಜ್‌ ಮಗ್ಗಿ ಬಂಧನ, ದೇವರಾಜ್‌ ನಾಪತ್ತೆ
Published 5 ಮಾರ್ಚ್ 2024, 23:30 IST
Last Updated 5 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ತಿಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಕಂದಾಯ ಅಧಿಕಾರಿ ಬಸವರಾಜ್‌ ಮಗ್ಗಿ ಅವರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ಎಚ್‌. ದೇವರಾಜ್‌ ನಾಪತ್ತೆಯಾಗಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ, ಸ್ಕ್ಯಾನಿಂಗ್‌ ಮಾಡಿ ಅಪ್‌ಲೋಡ್‌ ಮಾಡಿರುವ ಕೆಂಗೇರಿ ವಿಭಾಗದ ಮೌಲ್ಯಮಾಪಕ ಹಾಗೂ ಹೆಚ್ಚುವರಿ ಸಹಾಯಕ ಕಂದಾಯ ಅಧಿಕಾರಿ ಎಚ್‌. ದೇವರಾಜ್‌ ಹಾಗೂ ಹೆಚ್ಚುವರಿ ಕಂದಾಯ ಅಧಿಕಾರಿ ಬಸವರಾಜ್‌ ಮಗ್ಗಿ ಅವರ ವಿರುದ್ಧ ರಾಜರಾಜೇಶ್ವರಿ ನಗರ ವಲಯದ ಜಂಟಿ ಆಯುಕ್ತ ವಿ. ಅಜಯ್‌ ಅವರು ಮಾರ್ಚ್‌ 4ರಂದು ದೂರು ದಾಖಲಿಸಿದ್ದರು.

ದೂರಿನ ಅನ್ವಯ ಪರಿಶೀಲನೆ ನಡೆಸಿದ ಪೊಲೀಸರು ಬಸವರಾಜ್‌ ಮಗ್ಗಿ ಅವರನ್ನು ಮಾರ್ಚ್‌ 5ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೊದಲ ಆರೋಪಿಯಾಗಿರುವ ಎಚ್‌. ದೇವರಾಜ್‌ ಅವರು ನಾಪತ್ತೆಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಪಟ್ಟಣಗೆರೆ ಗ್ರಾಮದ ಅಸೆಸ್‌ಮೆಂಟ್‌ ಭಾಗ–3 ಮತ್ತು ಸಂಬಂಧಪಟ್ಟ ದಾಖಲೆಗಳಲ್ಲಿ, ವಹಿ ಹಾಗೂ ಸ್ಕ್ಯಾನಿಂಗ್‌ ಸಾಫ್ಟ್‌ ಕಾಪಿಯಲ್ಲಿ ಹೊಂದಾಣಿಕೆ ಇಲ್ಲ. ರಿಜಿಸ್ಟರ್‌ಗಳಲ್ಲಿ ಹಿಂದಿನ ಸಹಾಯಕ ಕಂದಾಯ ಅಧಿಕಾರಿ ವೆಂಕಟಪ್ಪ ಅವರ ಸಹಿ ಬದಲು ಎಆರ್‌ಒ ಎಚ್‌. ದೇವರಾಜ್‌ ಸಹಿ ಹಾಗೂ ಸೀಲ್‌ ಇದೆ.

ಎ ವಹಿಯಲ್ಲಿ 1ರಿಂದ 202 ಪುಟಗಳಿದ್ದು, 1ರಿಂದ 40 ಪುಟಗಳು ಮಾತ್ರ ಬಳಕೆಯಾಗಿವೆ. ಆದರೆ, ದೇವರಾಜ್ 202 ಪುಟಗಳನ್ನೂ ದೃಢೀಕರಿಸಿ ಸಹಿ ಮಾಡಿದ್ದಾರೆ. ಪಟ್ಟಣಗೆರೆ ಸರ್ವೆ ನಂ. 10ರಲ್ಲಿ ಹಿಂದಿನ ನಗರಸಭೆ ಖಾತಾ ತೆಗೆದು ಅರ್ಜಿದಾರರಿಗೆ ಖಾತಾ ವರ್ಗಾಯಿಸಲಾಗಿದೆ ಎಂದು ದೇವರಾಜ್‌ ಸಹಿ ಮಾಡಿದ್ದಾರೆ. ವಿಷಯ ನಿರ್ವಾಹಕರು, ಕಚೇರಿ ವ್ಯವಸ್ಥಾಪಕರ ಸಹಿ ಇಲ್ಲ.72 ಖಾತೆಗಳನ್ನು ಮುನಿಯಪ್ಪ ಅವರ ಹೆಸರಿನಿಂದ ಪುಟ್ಟಮ್ಮ ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿದ್ದು, ಕಂದಾಯ, ಸುಧಾರಣೆ ವೆಚ್ಚ ಪಾವತಿಸಿರುವ ಮಾಹಿತಿ ಇಲ್ಲ.

ವಾಜರಹಳ್ಳಿ ಗ್ರಾಮದ ಸರ್ವೆ ನಂ. 9ರಲ್ಲಿ 2 ಎಕರೆ 25 ಗುಂಟೆಯನ್ನು ಎ ವಹಿಯಲ್ಲಿ ಪ್ರದೀಪ್‌ ಕೃಷ್ಣಪ್ಪ ಹೆಸರಲ್ಲಿ ದಾಖಲಿಸಲಾಗಿದೆ. 1 ಎಕರೆ 3 ಗುಂಟೆ ಯನ್ನು ಜಯಮ್ಮ ಬಿನ್‌ ಕೃಷ್ಣಪ್ಪ ಅವರ ಹೆಸರಿನಲ್ಲಿ ದಾಖಲಾಗಿದೆ. ಯು.ಎಂ. ಕಾವಲ್‌ ಸರ್ವೆ ನಂ. 98/1ರಲ್ಲಿ 30 ಬಿಡಿ ನಿವೇಶನಗಳಿಗೆ ಕ್ರಮ ಸಂಖ್ಯೆ 73ರಿಂದ 102ರವರೆಗೆ ಗಂಗಾಧರ್‌ ಹೆಸರಿನಲ್ಲಿ ಖಾತಾ ದಾಖಲಿಸಲಾಗಿದೆ. ಹೆಮ್ಮಿಗೆಪುರದಲ್ಲಿ 96 ಬಿಡಿ ನಿವೇಶನಗಳಿಗೆ ಅಕ್ರಮವಾಗಿ ಖಾತಾ ನೀಡಲಾಗಿದೆ.

ಈ ಪ್ರಕರಣಗಳು ಎಚ್‌. ದೇವರಾಜ್‌ ಹಾಗೂ ಬಸವರಾಜ್‌ ಮಗ್ಗಿ ಅವರ ಅವಧಿಯಲ್ಲಿ ನಡೆದಿವೆ. ಅಕ್ರಮವಾಗಿ ಬಿ ಖಾತಾ ವಹಿಯನ್ನು ಎ ಖಾತಾ ವಹಿಯನ್ನಾಗಿ ಮಾರ್ಪಡಿಸಲಾಗಿದೆ. ಖಾತಾ ನೋಂದಣಿಯಲ್ಲಿ ಗಂಭೀರ ಆರೋ‍‍ಪ ಎಸಗಿದ್ದು, ಪಾಲಿಕೆಗೆ ಆರ್ಥಿಕ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಇವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತರು, ವಲಯ ಆಯುಕ್ತ ಹಾಗೂ ಕಂದಾಯ ವಿಭಾಗದ ವಿಶೇಷ ಆಯುಕ್ತರು ಶಿಫಾರಸು ವರದಿಯನ್ನು ಮುಖ್ಯ ಆಯುಕ್ತರಿಗೆ ಸಲ್ಲಿಸಿದ್ದರು.

ಈ ವರದಿಯಂತೆ ಎಚ್. ದೇವರಾಜ್‌ ಅವರನ್ನು ಅಮಾನತುಗೊಳಿಸಿ ಆಡಳಿತ ವಿಭಾಗದ ಉಪ ಆಯುಕ್ತರು ಮಾರ್ಚ್‌ 4ರಂದು ಆದೇಶಿಸಿದ್ದರು. ಬಸವರಾಜ್‌ ಮಗ್ಗಿಯನ್ನು ಅಮಾನತು ಮಾಡಲು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಶಿಫಾರಸು ಮಾಡಿದ್ದರು.

ದೂರು: ‘ಬಿಬಿಎಂಪಿಯ ಎಲ್ಲಾ ನಿಯಮಗಳನ್ನೂ ಮೀರಿ 200ಕ್ಕೂ ಹೆಚ್ಚು ಸ್ವತ್ತುಗಳಿಗೆ ಫೆಬ್ರುವರಿ ಒಂದೇ ತಿಂಗಳಲ್ಲಿ ‘ಎ’ ಖಾತಾಗಳನ್ನು ಮಾಡಿಕೊಡಲಾಗಿದೆ.  ಪಾಲಿಕೆಗೆ ಐದಾರು ಕೋಟಿ ರೂಪಾಯಿಯಷ್ಟು ನಷ್ಟ ಉಂಟು ಮಾಡಿರುವ ಕಂದಾಯ ಅಧಿಕಾರಿ ಬಸವರಾಜ ಮಗ್ಗಿ,  ಸಹಾಯಕ ಕಂದಾಯ ಅಧಿಕಾರಿ ಎಚ್‌. ದೇವರಾಜ್ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಆಡಳಿತಗಾರರು, ಮುಖ್ಯ ಆಯುಕ್ತರು, ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್‌ ಎನ್‌.ಆರ್‌. ಅವರು ಮಾರ್ಚ್‌ 4ರಂದು ದೂರು ನೀಡಿದ್ದರು.

ಎಚ್‌. ದೇವರಾಜ್‌
ಎಚ್‌. ದೇವರಾಜ್‌

ಅಪ್‌ಲೋಡ್‌ ಡಿಲೀಟ್‌! ‘ಕೆಂಗೇರಿ ಉಪ ವಿಭಾಗದ ಎಲ್ಲ ‘ಎ’ ಮತ್ತು ‘ಬಿ’ ವಹಿಗಳನ್ನು ಮೇರು ಇನ್‌ಫೋ ಸಲ್ಯೂಷನ್‌ ಅವರು ಸ್ಕ್ಯಾನಿಂಗ್‌ ಮಾಡಿ 2023ರ ನವೆಂಬರ್‌ 25ರಿಂದ ಡಿಸೆಂಬರ್‌ 3ರವರೆಗೆ ಅಪ್‌ಲೋಡ್‌ ಮಾಡಿದ್ದಾರೆ. ಆದರೆ ಪಟ್ಟಣಗೆರೆ ಗ್ರಾಮದ ಭಾಗ–3 ವಹಿಯನ್ನು ಮಾತ್ರ 2024ರ ಫೆಬ್ರುವರಿ 19ರಂದು ಅಪ್‌ಲೋಡ್‌ ಮಾಡಲಾಗಿದ್ದು ಇದು ಡಿಲೀಟ್‌ ಆಗಿ ಫೆಬ್ರುವರಿ 22ರಂದು ಪುನಃ ಅಪ್‌ಲೋಡ್‌ ಮಾಡಲಾಗಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT