ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬ್ರಹ್ಮಾಂಡ ಭ್ರಷ್ಟಾಚಾರ| ಪ್ರತಿ ಕಾಮಗಾರಿಗೂ ಜಿಐಎಸ್‌ ಕಡ್ಡಾಯವಾಗಲಿ

ಅಕ್ರಮ ತಡೆಯಲು ಸಮಿತಿಯ ಸಲಹೆ l ಪ್ರತಿ ರಸ್ತೆಗೂ ಪ್ರತ್ಯೇಕವಾಗಿ ವಿಶಿಷ್ಟ ಗುರುತುಸಂಖ್ಯೆ
Last Updated 18 ಸೆಪ್ಟೆಂಬರ್ 2019, 19:55 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಿಭಾಗಗಳಲ್ಲಿ 2008ರಿಂದ 2012ರ ನಡುವೆ ನಡೆದ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದಲ್ಲಿ ನಿಯಮ ಉಲ್ಲಂಘನೆ ಆಗಿರುವುದನ್ನು ಗಮನಿಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ, ವ್ಯವಸ್ಥೆಯ ಲೋಪ ಸರಿಪಡಿಸಲು ಕೆಲವು ಶಿಫಾರಸುಗಳನ್ನು ಮಾಡಿದೆ.

ಜಾಬ್‌ ಕೋಡ್‌ ನೀಡುವಾಗ ಅವ್ಯವಹಾರ ನಡೆ ದಿರುವುದು, ಯಾವುದೋ ಕಾಮಗಾರಿಯ ಅನುದಾನವನ್ನು ಬೇರಾವುದೋ ಕಾಮಗಾರಿಗೆ ಬಳಸಿರುವುದು ಮುಂತಾದ ಅಕ್ರಮ ತಪ್ಪಿಸುವ ಸಲುವಾಗಿ ಎಲ್ಲ ರಸ್ತೆಗಳು, ರಸ್ತೆ ದುರಸ್ತಿ ಕಾಮಗಾರಿಗಳು, ರಸ್ತೆ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಮ್ಯಾಪಿಂಗ್‌ ಮಾಡಬೇಕು. ಪ್ರತಿ ರಸ್ತೆಗೂ ಪ್ರತ್ಯೇಕವಾಗಿ ವಿಶಿಷ್ಟ ಗುರುತುಸಂಖ್ಯೆ ನೀಡಬೇಕು ಎಂದು ಸಲಹೆ ನೀಡಿದೆ.

ಕೆಲವು ನಿಯಮ ಉಲ್ಲಂಘನೆಗಳಿಗೆ ಅಧಿಕಾರಿಗಳಲ್ಲಿರುವ ಅಜ್ಞಾನವೂ ಕಾರಣ ಎಂದು ಸಮಿತಿ ತೀರ್ಮಾನಿಸಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಇತ್ತೀಚಿನ ಕಾಯ್ದೆಗಳು, ನಿಯಮಾವಳಿಗಳು, ತಿದ್ದುಪಡಿಗಳು, ನ್ಯಾಯಾಂಗದ ಟಿಪ್ಪಣಿಗಳು, ಸರ್ಕಾರಿ ಆದೇಶಗಳು ಹಾಗೂ ಅಧಿಸೂಚನೆಗಳ ಕುರಿತು ಅಧಿಕಾರಿಗಳಿಗೆ ಬೇರೆ ಬೇರೆ ಹಂತಗಳಲ್ಲಿ ಕಾಲಕಾಲಕ್ಕೆ ಮಾಹಿತಿ ಕಾರ್ಯಕ್ರಮಗಳನ್ನು ಏರ್ಪಡಿಸಲು ಪ್ರತ್ಯೇಕ ಹಾಗೂ ಸ್ವತಂತ್ರ ಇಲಾಖೆಯನ್ನು ರಚಿಸಬೇಕು ಎಂದೂ ಸಲಹೆ ನೀಡಿದೆ.

ಕಾಮಗಾರಿಗಳನ್ನು ಮುಖ್ಯ ರಸ್ತೆ, ಉಪಮುಖ್ಯ ರಸ್ತೆ ಹಾಗೂ ಪ್ರಾಂತೀಯ ಅಡ್ಡರಸ್ತೆಗಳೆಂದು ಸ್ಪಷ್ಟವಾಗಿ ವರ್ಗೀಕರಣ ಮಾಡಬೇಕು. ಮುಖ್ಯ ಎಂಜಿನಿಯರ್‌, ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಹಾಗೂ ಕಾರ್ಯಪಾಲಕ ಎಂಜಿನಿಯರ್‌ ಅವರಂತಹ ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಕಾಮಗಾರಿಗಳನ್ನು ಆಗಾಗ್ಗೆ ಪರಿಶೀಲನೆ ನಡೆಸಿ ಟಿಪ್ಪಣಿ ಸಿದ್ಧಪಡಿಸಬೇಕು. ಕಾಮಗಾರಿ ಅನುಷ್ಠಾನದ ಬಗ್ಗೆ ಆಗಾಗ್ಗೆ ಸಭೆ ನಡೆಸಬೇಕು ಎಂದು ಶಿಫಾರಸು ಮಾಡಿದೆ.

ಸಮಿತಿಯ ಪ್ರಮುಖ ಶಿಫಾರಸುಗಳು

l ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ತಪ್ಪು ಮರುಕಳಿಸದಂತೆ ತಡೆಯಲು ಅವರನ್ನು ತ್ವರಿತವಾಗಿ ಶಿಕ್ಷೆಗೆ ಒಳಪಡಿಸಬೇಕು

l ಸರ್ಕಾರಕ್ಕೆ ಆದ ನಷ್ಟಕ್ಕೆ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಬೇಕು.

l ತಾತ್ಕಾಲಿಕ ಟೆಂಡರ್‌ ಪ್ರೀಮಿಯಂ ಮೊತ್ತವನ್ನು (ರಸ್ತೆಗಳಿಗೆ ಶೇ 5ರಷ್ಟು ಹಾಗೂ ಕಟ್ಟಡಗಳಿಗೆ ಶೇ 10ರಷ್ಟು) ಮಂಜೂರಾದ ಅಂದಾಜು ವೆಚ್ಚಕ್ಕೆ ಸೇರ್ಪಡೆ ಮಾಡಬೇಕು. ಇದರಿಂದ ಪೂರಕ ಬಜೆಟ್‌ನಲ್ಲಿ ವ್ಯತ್ಯಯವಾಗುವುದನ್ನು ತಪ್ಪಿಸಬಹುದು.

l ಬಜೆಟ್‌ ಅಂದಾಜು, ಬಜೆಟ್‌ ಮಂಜೂರಾತಿ ಹಾಗೂ ಪ್ರತಿಯೊಂದು ಕಾಮಗಾರಿಗೆ ಬದ್ಧವಾಗಿರುವ ಮೂಲಕ ಆರ್ಥಿಕ ಶಿಸ್ತು ಕಾಪಾಡಬೇಕು. ಇದರಿಂದ ಬಜೆಟ್‌ ಅನುದಾನಕ್ಕಿಂತ ಹೆಚ್ಚು ಮೊತ್ತಕ್ಕೆ ಕಾಮಗಾರಿ ಸಂಖ್ಯೆ ನೀಡುವುದನ್ನು ತಪ್ಪಿಸಬಹುದು.

***

‘ಎರಡು ಕೈ ಸೇರಿದರೆ ಚಪ್ಪಾಳೆ’

ಪಾಲಿಕೆ ಭ್ರಷ್ಟಾಚಾರದ ವಿಷಯದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದೇ ನಾಣ್ಯದ ಎರಡು ಮುಖದಂತೆ. ಎಷ್ಟೋ ಗುತ್ತಿಗೆದಾರರು ಪಾಲಿಕೆ ಸದಸ್ಯರ ಆಪ್ತರೇ ಆಗಿರುತ್ತಾರೆ. ಇಬ್ಬರೂ ಒಳ ಒಪ್ಪಂದ ಮಾಡಿಕೊಂಡು ಹೊರಜಗತ್ತಿನ ಕಣ್ಣಿಗೆ ಮಣ್ಣೆರಚುತ್ತಾರೆ.

-ಅನಿಲ್‌ ಕುಮಾರ್‌, ಗಿರಿನಗರ

***

ವರದಿ ಬಹಿರಂಗವಾಗಲಿ

ಪಾಲಿಕೆ ಅಕ್ರಮಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ವರದಿ ಸಲ್ಲಿಸಿ ಒಂದು ವರ್ಷ ಕಳೆದರೂ ಹಿಂದಿನ ಸರ್ಕಾರ ಈ ವರದಿ ಮುಚ್ಚಿಟ್ಟಿತ್ತು. ಈಗಲಾದರೂ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಯಲಿ. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು.

-ರವಿಕೃಷ್ಣಾ ರೆಡ್ಡಿ, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ

***

ತನಿಖಾ ತಂಡ ರಚಿಸಿ

ಅಭಿವೃದ್ಧಿ ಹೆಸರಿನಲ್ಲಿ ನಡೆದ ಅಕ್ರಮ ಇನ್ನಷ್ಟು ಹೊರಗೆಳೆಯಲು ತನಿಖಾ ತಂಡ ರಚಿಸಬೇಕು. ಜನರ ಹಿತ ಕಾಯಬೇಕಾದವರನ್ನೇ ತನಿಖೆ ಮಾಡಬೇಕಾದದ್ದು ಪಾಲಿಕೆಯ ದುಸ್ಥಿತಿ

-ನಾಗರಾಜು, ವಿಜಯನಗರ

***

ಮೊಳಕೆಯಲ್ಲೇ ಸರಿಪಡಿಸಿ

ಪಾಲಿಕೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳು ಒಂದೊಂದಾಗಿ ಹೊರಬರುತ್ತಿದ್ದು, ಇದು ಬೇರೂರುವ ಮುನ್ನ ಚಿಗುರಿನಲ್ಲೇ ಚಿವುಟಿ ಹಾಕುವುದು ಉತ್ತಮ. ಇಲ್ಲದಿದ್ದರೆ ಹೆಮ್ಮರವಾಗಿ ಬೆಳೆದು ಉದ್ಯಾನನಗರವನ್ನು ಕೂಪಕ್ಕೆ ಸಿಲುಕಿಸುವುದರಲ್ಲಿ ಅನುಮಾನವಿಲ್ಲ.

-ವಿಶಾಲಾ ಆರಾಧ್ಯ, ಅನಂತನಗರ

***

ಪಾರದರ್ಶಕತೆ ತೋರಲಿ

ಕಾಮಗಾರಿಗಳ ಕುರಿತು ಪಾರದರ್ಶಕ ವಾಗಿ ಮಾಹಿತಿ ಸಿಗಬೇಕು. ಇಲ್ಲದಿದ್ದರೆ ಹದಗೆಟ್ಟ ರಸ್ತೆ ಸರಿಪಡಿಸದೇ, ಸರಿಯಾದ ರಸ್ತೆ ಮೇಲೆ ಡಾಂಬರು ಹಾಕಿ ಹಣ ಲೂಟಿ ಮಾಡುತ್ತಾರೆ.

-ಮಧುರಾ, ರಾಜಾಜಿನಗರ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT