ಗುರುವಾರ , ಡಿಸೆಂಬರ್ 5, 2019
21 °C
ಪ್ರತಿ 1 ಕಿ.ಮೀ ರಸ್ತೆಗೆ ₹14 ಕೋಟಿ ವೆಚ್ಚ l ಬಿಜೆಪಿ ನಾಯಕರ ಜಾಣ ಮೌನ

ಸ್ಮಾರ್ಟ್‌ ಸಿಟಿ ಯೋಜನೆ: ವೈಟ್‌ಟಾಪಿಂಗ್‌ಗಿಂತ ಡಾಂಬರೀಕರಣ ದುಬಾರಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿಜೆಪಿ ಸರ್ಕಾರ ನಗರದಲ್ಲಿ ಅಭಿವೃದ್ಧಿಪಡಿಸುತ್ತಿರುವ ಪ್ರತಿ ಕಿ.ಮೀ ರಸ್ತೆಗೆ ಸರಾಸರಿ ₹ 14.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಯೋಜನೆಯಡಿ ರಸ್ತೆಗಳನ್ನು ವೈಟ್‌ಟಾಪಿಂಗ್‌ ಕೂಡಾ ಮಾಡುತ್ತಿಲ್ಲ, ಬದಲು ಡಾಂಬರೀಕರಣ ಮಾಡಲಾಗುತ್ತಿದೆ.

ವೈಟ್‌ಟಾಪಿಂಗ್‌ ಕಾಮಗಾರಿಗೆ ಹೋಲಿಸಿದರೆ ಡಾಂಬರೀಕರಣಕ್ಕೆ ಶೇ 25ರಿಂದ ಶೇ40ರಷ್ಟು ಕಡಿಮೆ ಹಣ ಸಾಕು ಎನ್ನುತ್ತಾರೆ ತಜ್ಞರು. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಳ್ಳುತ್ತಿರುವ ಡಾಂಬರೀಕರಣಕ್ಕೆ ವೈಟ್‌ಟಾಪಿಂಗ್‌ಗಿಂತಲೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಈ ದುಬಾರಿ ವೆಚ್ಚ ಸಂದೇಹಕ್ಕೆ ಕಾರಣವಾಗಿದೆ.

ಈ ಯೋಜನೆ ಅಡಿ ಒಟ್ಟು 36 ರಸ್ತೆಗಳ (29.49 ಕಿ.ಮೀ) ಅಭಿವೃದ್ಧಿ ಕಾಮಗಾರಿಗೆ ₹ 434.88 ಕೋಟಿ ವ್ಯಯಿಸಲಾಗುತ್ತಿದೆ. ಒಟ್ಟು 13 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಗುತ್ತಿಗೆ ನೀಡಿದ್ದು, ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 12 ತಿಂಗಳುಗಳಿಂದ 15 ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ.

‘ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡ ವೈಟ್‌ ಟಾಪಿಂಗ್‌ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ಇದಕ್ಕೆ ದುಬಾರಿ ವೆಚ್ಚ ಮಾಡಲಾಗಿದೆ. ಗುತ್ತಿಗೆಯಲ್ಲೂ ಅವ್ಯವಹಾರ ನಡೆದಿದೆ’ ಎಂಬ ಬಿಜೆಪಿ ಮುಖಂಡರ ದೂರಿನ ಆಧಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆ ಕಾಮಗಾರಿಗಳ ಬಗ್ಗೆ ಕೇಂದ್ರ ಸರ್ಕಾರದ ಗುಣಮಟ್ಟ ನಿಯಂತ್ರಣ ಘಟಕದ ನಿವೃತ್ತ ಅಧಿಕಾರಿ ಕ್ಯಾ.ಆರ್‌.ಆರ್‌.ದೊಡ್ಡಿಹಾಳ್‌ ನೇತೃತ್ವದ ಸಮಿತಿಯಿಂದ ತನಿಖೆ ಮಾಡಿಸಿದ್ದರು. ಆದರೆ, ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ಹಾಗೂ ಗುತ್ತಿಗೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಸಮಿತಿ ವರದಿ ನೀಡಿತ್ತು. ಈಗ ಸ್ವತಃ ಯಡಿಯೂರಪ್ಪ ಅವರೇ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿದ್ದರು.

ಬಿಜೆಪಿ ಮುಖಂಡರ ಮೌನ: ‘ವೈಟ್‌ಟಾಪಿಂಗ್‌ ಕಾಮಗಾರಿ ಮೂಲಕ ಜನರ ದುಡ್ಡು ಲೂಟಿ ಮಾಡಲಾಗುತ್ತಿದೆ’ ಎಂದು ಆರೋಪ ಮಾಡುತ್ತಿದ್ದ ಬಿಜೆಪಿ ನಾಯಕರೊಬ್ಬರೂ ಸ್ಮಾರ್ಟ್‌ ಸಿಟಿ ಅಡಿ ಕೈಗೆತ್ತಿಕೊಳ್ಳುವ ರಸ್ತೆಗಳ ದುಬಾರಿ ವೆಚ್ಚದ ಬಗ್ಗೆ ಸೊಲ್ಲೆತ್ತಿಲ್ಲ. ಈ ಹಿಂದೆ ವೈಟ್‌ಟಾಪಿಂಗ್‌ ಅವ್ಯವಹಾರದ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಿದ್ದ ಬಿಜೆಪಿ ನಗರ ‌ಘಟಕದ ವಕ್ತಾರ ಎನ್‌.ಆರ್‌.ರಮೇಶ್‌ ಅವರೂ ಈ ಕಾಮಗಾರಿಗಳ ಬಗ್ಗೆ ದೂರು ನೀಡಿಲ್ಲ.

‘ಸಮಗ್ರವಾಗಿ ಅಭಿವೃದ್ಧಿ ಪಡಿಸುತ್ತೇವೆ’
ಸ್ಮಾರ್ಟ್‌ ಸಿಟಿ ಅಡಿ ಕೈಗೆತ್ತಿಕೊಳ್ಳುವ ರಸ್ತೆಗೆ ಇಷ್ಟೊಂದು ದುಬಾರಿ ವೆಚ್ಚವೇಕೆ ಎಂಬ ಪ್ರಶ್ನೆಗೆ ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್‌ ಶಿವಯೋಗಿ ಹಿರೇಮಠ, ‘ನಾವು ಈ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತೇವೆ. ಮೂಲಸೌಕರ್ಯ ಸ್ಥಳಾಂತರ ಮಾಡಲಿದ್ದೇವೆ. ಹೊಸ ಒಳಚರಂಡಿಗೆ 300 ಮಿ.ಮೀ ಸುತ್ತಳತೆಯ ಕಾಂಕ್ರೀಟ್‌ ಪೈಪ್‌ಲೈನ್, ರಾಜಕಾಲುವೆ ನಿರ್ಮಾಣಕ್ಕೆ 900 ಮಿ.ಮೀ ಸುತ್ತಳತೆಯ ಕೊಳವೆ ಅಳವಡಿಸಲಿದ್ದೇವೆ. ನೆಲದಡಿ ಕೇಬಲ್‌ಗಳ ಅಳವಡಿಕೆಗೆ ಪ್ರತ್ಯೇಕ ಕೊಳವೆ ಮಾರ್ಗ ನಿರ್ಮಿಸಲಿದ್ದೇವೆ. ಹಾಗಾಗಿ ಇದಕ್ಕೆ ಟೆಂಡರ್‌ ಶ್ಯೂರ್‌ ಕಾಮಗಾರಿಗಿಂತ ಹೆಚ್ಚು ವೆಚ್ಚವಾಗುತ್ತದೆ’ ಎಂದರು.

ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲೂ ರಾಜಕಾಲುವೆ ಕೊಳವೆ ಮಾರ್ಗ ಹೊರತಾಗಿ ಸ್ಮಾರ್ಟ್‌ ರಸ್ತೆಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳೆಲ್ಲವೂ ಸೇರಿದ್ದವು. ಕಾಟನ್‌ಪೇಟೆಯಲ್ಲಿ ಗೂಡ್‌ಶೆಡ್‌ ರಸ್ತೆಯಿಂದ ಮೈಸೂರು ರಸ್ತೆವರೆಗಿನ ಟೆಂಡರ್‌ಶ್ಯೂರ್‌ ಕಾಮಗಾರಿಯಲ್ಲಿ ರಾಜಕಾಲುವೆಗೆ ಪ್ರತ್ಯೇಕ ಕೊಳವೆ ಅಳವಡಿಸಲಾಗುತ್ತಿದೆ. ಈ ಕಾಮಗಾರಿಗೆ ಪ್ರತಿ ಕಿ.ಮೀಗೆ ₹ 10. 18 ಕೋಟಿಯಷ್ಟೇ ವೆಚ್ಚ ಮಾಡಲಾಗುತ್ತಿದೆ.

ಕಾರಣಾಂತರದಿಂದ ದೂರು ನೀಡಿಲ್ಲ’
‘ವೈಟ್‌ಟಾಪಿಂಗ್‌ಗಿಂತ ಡಾಂಬರೀಕರಣ ಕಾಮಗಾರಿಯನ್ನು ಶೇ 20ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಕಾರಣಾಂತರಗಳಿಂದ ಈ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಲು ಆಗಿರಲಿಲ್ಲ. ಶೀಘ್ರವೇ ದೂರು ನೀಡುತ್ತೇನೆ’ ಎಂದು ಎನ್‌.ಆರ್‌.ರಮೇಶ್‌ ತಿಳಿಸಿದರು.

ಯಾವ ಕಾಮಗಾರಿಗೆ ಎಷ್ಟು ಖರ್ಚು?
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಎನ್‌ಸಿಸಿ ಕಂಪನಿಗೆ 39.80 ಕಿ.ಮೀ ಉದ್ದದ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ₹ 374 ಕೋಟಿ ವೆಚ್ಚಕ್ಕೆ ಗುತ್ತಿಗೆಗೆ ನೀಡಲಾಗಿತ್ತು. ಪ್ರತಿ ಕಿ.ಮೀ. ರಸ್ತೆಯನ್ನು ಈ ಕಂಪನಿ ಸರಾಸರಿ ₹ 9.39 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ. ಒಟ್ಟು 53.67 ಕಿ.ಮೀ ಉದ್ದದ ( 24 ರಸ್ತೆಗಳು) ರಸ್ತೆಗಳ ವೈಟ್‌ಟಾಪಿಂಗ್‌ ಕಾಮಗಾರಿಯ ಇನ್ನೊಂದು ಪ್ಯಾಕೇಜನ್ನು ಮಧುಕಾನ್‌ ಪ್ರಾಜೆಕ್ಟ್ಸ್‌ ಕಂಪನಿಗೆ ₹ 598.69 ಕೋಟಿಗೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿ ಪ್ರತಿ ಕಿ.ಮೀ. ರಸ್ತೆಯನ್ನು ₹ 11.15 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದೆ.

 ‘ಕಾರಣಾಂತರದಿಂದ ದೂರು ನೀಡಿಲ್ಲ’
‘ವೈಟ್‌ಟಾಪಿಂಗ್‌ಗಿಂತ ಡಾಂಬರೀಕರಣ ಕಾಮಗಾರಿಯನ್ನು ಶೇ 20ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಿಸಬಹುದಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಅಗತ್ಯಕ್ಕಿಂತ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಕಾರಣಾಂತರಗಳಿಂದ ಈ ಬಗ್ಗೆ ಮುಖ್ಯಮಂತ್ರಿಗೆ ದೂರು ನೀಡಲು ಆಗಿರಲಿಲ್ಲ. ಶೀಘ್ರವೇ ದೂರು ನೀಡುತ್ತೇನೆ’ ಎಂದು ಎನ್‌.ಆರ್‌.ರಮೇಶ್‌ ತಿಳಿಸಿದರು.

‘ಬಿಜೆಪಿ ಹಗರಣ ಮಾಡುತ್ತಿದೆ’
‘ನಾವು ಪ್ರತಿ ಕಿ.ಮೀ. ರಸ್ತೆಗೆ ₹ 10 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್‌ ಮಾಡಿದ್ದೆವು.  ಪ್ರತಿ ಕಿ.ಮೀ ರಸ್ತೆ ಅಭಿವೃದ್ಧಿಗೆ ಅಗತ್ಯಕ್ಕಿಂತ ₹ 2 ಕೋಟಿ ಹೆಚ್ಚು ಖರ್ಚು ಮಾಡಲಾಗುತ್ತಿದೆ ಎಂದು ಆಗ ಬಿಜೆಪಿಯವರು ಆರೋಪ ಮಾಡಿದ್ದರು. ಈಗ ಅವರು ರಸ್ತೆ ಡಾಂಬರೀಕರಣಕ್ಕೆ ಪ್ರತಿ. ಕಿ.ಮೀಗೆ ಸರಾಸರಿ ₹ 14 ಕೋಟಿ ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಹಗರಣ ಮಾಡುವವರು ಯಾರು ಎಂಬುದು ಜನರಿಗೆ ಅರ್ಥವಾಗುತ್ತದೆ’ ಎಂದು ಪಾಲಿಕೆಯ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹೇಳಿದರು.

‘ವೈಟ್‌ಟಾಪಿಂಗ್‌ ರಸ್ತೆ ಕನಿಷ್ಠ 30 ವರ್ಷ ಬಾಳಿಕೆ ಬರುತ್ತದೆ. ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಳ್ಳುವುದಿಲ್ಲ. ಗುಂಡಿ ಮುಚ್ಚುವ ಸಮಸ್ಯೆ ಇಲ್ಲದ ಕಾರಣ ವೈಟ್‌ಟಾಪಿಂಗ್‌ ರಸ್ತೆ ನಿರ್ಮಿಸಲು ವೆಚ್ಚ ಮಾಡುವ ಹಣ ಒಂದೆರಡು ವರ್ಷದಲ್ಲಿ ಮತ್ತೆ ವಸೂಲಿ ಆಗುತ್ತದೆ. ರಸ್ತೆಗೆ ಡಾಂಬರೀಕರಣ ಮಾಡಿದರೆ ವರ್ಷದಲ್ಲೇ ಅದು ಮತ್ತೆ ಕಿತ್ತು ಹೋಗಬಹುದು. ಮತ್ತೆ ಮತ್ತೆ ದುರಸ್ತಿ ಮಾಡಬೇಕಾಗುತ್ತದೆ’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು