ಗುರುವಾರ , ಜುಲೈ 16, 2020
24 °C
ಕೊರೊನಾ ನಡುವೆಯೂ ಜನರ ತಲುಪಲು ‘ಟ್ವಿಟರ್‌’ ಮೊರೆಹೋದ ಬಿಬಿಎಂಪಿ ವಿಶೇಷ ಆಯುಕ್ತ

ಕಸ ವಿಲೇವಾರಿ: ತರಹೇವಾರಿ ಗೊಂದಲ– ಟ್ವಿಟರ್‌ನಲ್ಲಿ ಪರಿಹಾರ

ಪ್ರವೀಣ್ ಕುಮಾರ್‌ ಪಿ.ವಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾತ್‌ರೂಮ್‌ನಲ್ಲಿ ಸಂಗ್ರಹವಾಗುವ ತಲೆಗೂದಲು ಸ್ಯಾನಿಟರಿ ಕಸವೇ? ತೆಂಗಿನ ಚಿಪ್ಪು, ಊಟದಲ್ಲಿ ಬಳಸಿದ ಪಲಾವ್‌ ಎಲೆ, ಹಾಳೆ ತಟ್ಟೆಯಂತಹ ವಸ್ತುಗಳ ವಿಲೇ ಹೇಗೆ? 

ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಕಸವನ್ನು ವಿಂಗಡಿಸಿ ನೀಡಿದ ಬಳಿಕವೂ ಅದನ್ನು ಕೊಂಡೊಯ್ಯಲು ಬರುವ ಬಿಬಿಎಂಪಿಯವರಿಗೆ ಪ್ರತ್ಯೇಕ ಶುಲ್ಕ ಪಾವತಿ ಮಾಡಬೇಕೇ?

ಕಸ ವಿಲೇವಾರಿ ಬಗ್ಗೆ ಜನರನ್ನು ನಿತ್ಯ ಕಾಡುತ್ತಿರುವ ಸಣ್ಣ ಪುಟ್ಟ ಸಂದೇಹಗಳಿವು. ಇಂತಹವುಗಳ ಕುರಿತು ಕಸ ವಿಲೇವಾರಿ ವ್ಯವಸ್ಥೆಯ ತಳಮಟ್ಟದ ಸಿಬ್ಬಂದಿಯ ಬಳಿಯೂ ಉತ್ತರ ಸಿಗದು. ಕೊರೊನಾ ನಿಯಂತ್ರಣಕ್ಕಾಗಿ ಹೇರಿದ ಲಾಕ್‌ಡೌನ್‌ ಸಂದರ್ಭದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ (ಕಸ ನಿರ್ವಹಣೆ) ಡಿ.ರಂದೀಪ್‌ ಕಂಡುಕೊಂಡ ಹೊಸ ಪರಿಕಲ್ಪನೆ, ಜನರ ತಲೆ ಕೊರೆಯುತ್ತಿದ್ದ ಇಂತಹ ಅನೇಕ ಗೊಂದಲಗಳ ನಿವಾರಣೆಗೆ ನೆರವಾಗಿದೆ. ಕಸ ವಿಲೇವಾರಿ ವಿಚಾರದಲ್ಲಿ ಇನ್ನಷ್ಟು ಪ್ರಾಯೋಗಿಕ ನಿರ್ಧಾರ ತಳೆಯುವುದಕ್ಕೆ ಬಿಬಿಎಂಪಿಗೂ ಈ ನಡೆ ಸಹಾಯಕವಾಗಿದೆ.

ರಂದೀಪ್‌ ಅವರು ಮಾಡಿದ್ದಿಷ್ಟೇ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲೂ ಜನರು ತಮ್ಮನ್ನು ಕಚೇರಿಯ ಸೇವೆ ಪಡೆಯುವಂತಾಗಬೇಕು ಎಂಬ ಉದ್ದೇಶದಿಂದ ಅವರು ವಾರದಲ್ಲಿ ಮೂರು ದಿನಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಟ್ವಿಟರ್‌ನಲ್ಲಿ ಜನರ ಪ್ರಶ್ನೆಗೆ ಉತ್ತರಿಸುವುದಾಗಿ ಪ್ರಕಟಿಸಿದರು. #AskYourSplCommBBMP ಹ್ಯಾಷ್‌ಟ್ಯಾಗ್‌ ಬಳಸಿ ತಮ್ಮ ಅಧಿಕೃತ ಟ್ವಿಟರ್‌ ಖಾತೆಗೆ (BBMP Solid Waste Mgmt Special Commissioner @BBMPSWMSplComm) ಟ್ಯಾಗ್‌ ಮಾಡುವಂತೆ ಸೂಚಿಸಿದರು. ಬಿಬಿಎಂಪಿ ಅಧಿಕಾರಿಗಳು ಊಹಿಸಿಯೇ ಇರದಂತಹ ಪ್ರಶ್ನೆಗಳೆಲ್ಲಾ ಟ್ವಿಟರ್‌ನಲ್ಲಿ ತೂರಿ ಬಂದವು. ಅವುಗಳಲ್ಲಿ ಬಹುತೇಕ ಪ್ರಶ್ನೆಗಳಿಗೆ ವಿಶೇಷ ಆಯುಕ್ತರು ಉತ್ತರಿಸಿದ್ದಾರೆ.

‘ಕಸ ವಿಲೇವಾರಿ ಕುರಿತು ಜನರಲ್ಲಿ ಏನೇನೆಲ್ಲ ಗೊಂದಲಗಳಿವೆ ಎಂಬುದು ಈ ಪ್ರಯತ್ನದಿಂದ ಮನದಟ್ಟಾಯಿತು. ಕೆಲವೊಂದು ಆಯಾಮದಲ್ಲಿ ನಾವು ಯೋಚಿಸಿಯೇ ಇರಲಿಲ್ಲ. ಜನರಿಗೆ ಮಾಹಿತಿ ನೀಡುವುದರ ಜೊತೆಗೆ ನಾವು ಇದರಿಂದ ಸಾಕಷ್ಟು ಕಲಿತೆವು’ ಎಂದು ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ವೀಟ್‌ ಮಾಡಿ ಪ್ರಶ್ನೆಗಳನ್ನು ಕೇಳಿದವರಲ್ಲಿ ಶೇ 20ರಷ್ಟು ಮಂದಿ ಕಸ ವಿಲೇವಾರಿ ವ್ಯವಸ್ಥೆಯ ಲೋಪಗಳ ಬಗ್ಗೆ ದೂರಿದ್ದಾರೆ. ನಮ್ಮ ಆಡಳಿತ ಯಂತ್ರವನ್ನು ಬಳಸಿ ಅಂತಹ ಲೋಪಗಳನ್ನು ಸರಿಪಡಿಸಿದ್ದೇವೆ. ಕಸ ವಿಲೇವಾರಿ ಕುರಿತ ಲೋಪಗಳನ್ನು ಜನ ನೇರವಾಗಿ ವಿಶೇಷ ಆಯುಕ್ತರ ಗಮನಕ್ಕೆ ತರುತ್ತಾರೆ ಎಂಬ ಭಯವೂ ಅಧಿಕಾರಿಗಳಲ್ಲಿ ಇರುತ್ತದೆ. ಹಾಗಾಗಿ ಇಂತಹ ಸಂವಾದ ವ್ಯವಸ್ಥೆಯ ಸುಧಾರಣೆಗೆ ಪೂರಕ’ ಎಂದರು.

‘ಇದುವರೆಗೆ ಟ್ವಟರ್‌ನಲ್ಲಿ ನಡೆಸಿದ ಚರ್ಚೆಯಲ್ಲಿ ಕಸ ವಿಲೇವಾರಿಯ ಸಮಗ್ರ ವಿಚಾರದ ಬಗ್ಗೆ ಗೊಂದಲ ನಿವಾರಣೆಗೆ ಅನುವು ಮಾಡಿಕೊಟ್ಟಿದ್ದೆವು. ಒಣ ಕಸ ಸಂಗ್ರಹ ಮತ್ತು ವಿಲೇವಾರಿ ಹೇಗೆ, ಪ್ಲಾಸ್ಟಿಕ್‌ ಪರಿಕರಗಳಿಗೆ ಪರ್ಯಾಯವಾಗಿ ಏನೇನು ಬಳಸಬಹುದು, ಮನೆಯಲ್ಲೇ ಪುಟ್ಟ ಪ್ರಮಾಣದಲ್ಲಿ ಕಾಂಪೋಸ್ಟ್‌ ತಯಾರಿಸುವ ಬಗೆ ಹೇಗೆ.. ಮುಂತಾದ ನಿರ್ದಿಷ್ಟ ವಿಚಾರಗಳ ಬಗ್ಗೆ ಟ್ವಿಟರ್‌ ಮೂಲಕ ಜೂನ್‌ ತಿಂಗಳಿನಿಂದ ವಾರದಲ್ಲಿ ಒಂದೊಂದು ದಿನ ಚರ್ಚೆ ನಡೆಸಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು. 

ಕನ್ನಡದಲ್ಲೂ ಪ್ರತಿಕ್ರಿಯಿಸಿ: ಜನರನ್ನು ತಲುಪಲು ಬಿಬಿಎಂಪಿ ವಿಶೇಷ ಆಯುಕ್ತರು ನಡೆಸಿರುವ ಪ್ರಯತ್ನ ಸ್ವಾಗತಾರ್ಹ. ಹೆಚ್ಚು ಕನ್ನಡದಲ್ಲಿ ಪ್ರತಿಕ್ರಿಯಿಸಿದರೆ ಇನ್ನಷ್ಟು ಹೆಚ್ಚು ಮಂದಿಯನ್ನು ತಲುಪಬಹುದು ಎಂದು ಕೆಲವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು