ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರಸ್ತೆ ಗುಂಡಿ ಮುಚ್ಚಲು ‘ವಲಯ ಕಾರ್ಯಪಡೆ’

ಬಿಬಿಎಂಪಿ ವಲಯ ಆಯುಕ್ತರ ಮಟ್ಟದಲ್ಲಿ ಸಮಿತಿ; ಬಿಲ್‌ ಪಾವತಿಗೂ ಅಧಿಕಾರ
Published 27 ಮೇ 2024, 15:10 IST
Last Updated 27 ಮೇ 2024, 15:10 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು, ಮೇಲ್ವಿಚಾರಣೆ ನಡೆಸಲು ಹಾಗೂ ಕಾಮಗಾರಿ ಅನುಷ್ಠಾನಕ್ಕಾಗಿ ವಲಯ ಮಟ್ಟದಲ್ಲಿ ‘ಕಾರ್ಯಪಡೆ’ಗಳನ್ನು ರಚಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 12,878 ಕಿ.ಮೀ ರಸ್ತೆ ಜಾಲವಿದ್ದು, ಈ ರಸ್ತೆಗಳ ಪೈಕಿ 1,344.84 ಕಿ.ಮೀ ಉದ್ದದ ರಸ್ತೆಗಳನ್ನು ಮುಖ್ಯ ಮತ್ತು ಉಪ ಮುಖ್ಯರಸ್ತೆಗಳೆಂದು ಪರಿಗಣಿಸಲಾಗಿದೆ. ಈ ರಸ್ತೆಗಳನ್ನು ರಸ್ತೆ ಮೂಲಸೌಕರ್ಯ ಶಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಉಳಿಕೆ 11,533.16 ಕಿ.ಮೀ ರಸ್ತೆಗಳನ್ನು ವಲಯ ಮಟ್ಟದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ.

ರಸ್ತೆಗಳಲ್ಲಾಗಿರುವ ಗುಂಡಿಗಳನ್ನು ಮತ್ತು ನಿಗದಿತ ಅವಧಿಯಲ್ಲಿ ನಿರ್ವಹಣೆ ಮಾಡಲು ‘ವಲಯವಾರು ಕಾರ್ಯಪಡೆ’ ರಚನೆ ಮಾಡುವುದು ಸೂಕ್ತವೆಂದು ತೀರ್ಮಾನಿಸಿ, ವಲಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಮೇ 27ರಂದು ಆದೇಶ ಹೊರಡಿಸಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಲಭ್ಯವಾಗುವ ಅನುದಾನದ ಅನುಮೋದನೆ, ಟೆಂಡರ್‌ ಅನುಮೋದನೆಯ ಅಧಿಕಾರವನ್ನು ಕಾರ್ಯಪಡೆಗೆ ನೀಡಲಾಗಿದೆ. ಕಾರ್ಯಪಡೆಯು ರಸ್ತೆ ಗುಂಡಿಗಳನ್ನು ಗುರುತಿಸುವ ಜೊತೆಗೆ, ಸಂಚಾರ ಪೊಲೀಸರು ಮತ್ತು ಸಾರ್ವಜನಿಕರಿಂದ ಬರುವ ದೂರನ್ನು ಆಧರಿಸಿ ಗುಂಡಿಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿ ಮುಚ್ಚುವ ಗುತ್ತಿಗೆದಾರರ ಬಿಲ್‌ ಪಾವತಿಯ ಅಧಿಕಾರವನ್ನೂ ಕಾರ್ಯಪಡೆಯ ವಲಯ ಆಯುಕ್ತರಿಗೆ ನೀಡಲಾಗಿದೆ.

ಕಟ್ಟುನಿಟ್ಟಿನ ಸೂಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಕಾಲಮಿತಿಯೊಳಗಾಗಿ ಮುಚ್ಚಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕೆ ಮತ್ತಷ್ಟು ಚುರುಕು ನೀಡಬೇಕು. ವಾರ್ಡ್ ಎಂಜಿನಿಯರ್‌ಗಳು ರಸ್ತೆ ಗುಂಡಿಗಳನ್ನು ಪತ್ತೆಮಾಡಿ ಮುಚ್ಚಬೇಕು. ಎಲ್ಲಿಯೂ ರಸ್ತೆ ಗುಂಡಿಗಳಿರುವ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಮೂಲಕ ಹಗಲು- ರಾತ್ರಿ ರಸ್ತೆಗುಂಡಿಗಳನ್ನು ಮುಚ್ಚಬೇಕೆಂದು ಸೂಚಿಸಿದರು.

ಪ್ರಥಮ, ದ್ವಿತೀಯ ರಾಜಕಾಲುವೆಗಳಲ್ಲಿ ಸಕ್ರಿಯವಾಗಿ ಹೂಳೆತ್ತುವ ಕೆಲಸ ನಡೆಯಬೇಕು‌. ರಾಜಕಾಲುವೆಗೆ ತ್ಯಾಜ್ಯ ಬಿಸಾಡದಂತೆ ಸೂಕ್ತ ಕ್ರಮ ವಹಿಸಬೇಕು. ಎಲ್ಲಾ ಕಡೆ ಸ್ವಚ್ಛತೆ ಕಾಪಾಡಿ ಎಲ್ಲಿಯೂ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದರು

ಪರಿಶೀಲನೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬರೆದ ಪತ್ರದಂತೆ ನಗರದಲ್ಲಿರುವ ಪ್ರತಿಷ್ಠಿತ ಮಾಲ್‌ಗಳು, ಮನರಂಜನಾ ಕೇಂದ್ರಗಳು ಹಾಗೂ ಇವಿ ಚಾರ್ಚಿಂಗ್ ಸ್ಟೇಷನ್‌ಗಳಲ್ಲಿ ಅಗ್ನಿ ದುರಂತ ಸೇರಿದಂತೆ ಇನ್ನಿತರೆ ಅನಾಹುತ ತಪ್ಪಿಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT