ಶುಕ್ರವಾರ, ಜೂನ್ 25, 2021
29 °C
ಜೂನ್‌–ಜುಲೈ ವೇತನದ ನಿರೀಕ್ಷೆಯಲ್ಲಿ ಬೋಧಕರು

ವರ್ಷವಾದರೂ ಬಂದಿಲ್ಲ ವೇತನ: ಬಿಬಿಎಂಪಿ ಶಾಲೆಗಳ ಗುತ್ತಿಗೆ ಶಿಕ್ಷಕರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರು–ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಕಳೆದ ವರ್ಷದ ಜೂನ್‌–ಜುಲೈ ತಿಂಗಳ ವೇತನವನ್ನೂ ಈವರೆಗೆ ಪಾವತಿಸಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.

’ಕಳೆದ ವರ್ಷ ಕೋವಿಡ್‌ ಕರ್ತವ್ಯ ಮಾಡಿದವರಿಗೆ ಮಾತ್ರ ಜೂನ್‌–ಜುಲೈ ತಿಂಗಳ ವೇತನ ಪಾವತಿಸಲಾಗುವುದು ಎಂದಿದ್ದರು. ನಾವು ಶಾಲೆಗಳಿಗೆ ಹೋಗಿ ಕೆಲಸ ಮಾಡಿದ್ದೆವು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯ ನಿರ್ವಹಿಸಿದ್ದೆವು. ನಮ್ಮನ್ನು ಹೊರಗುತ್ತಿಗೆ ಪಡೆದಿರುವ ಕ್ರಿಸ್ಟಲ್‌ ಸಂಸ್ಥೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆವು. ವೇತನ ನೀಡಲು ಒಪ್ಪಿದ್ದರು. ಆದರೆ, ಈವರೆಗೂ ಜೂನ್‌–ಜುಲೈ ತಿಂಗಳ ವೇತನ ನೀಡಿಲ್ಲ‘ ಎಂದು ಹೆಸರು ಬಹಿರಂಗಪಡಿಸಲು ಬಯಸದ ಶಿಕ್ಷಕರೊಬ್ಬರು ಹೇಳಿದರು.

’ವಾರದಲ್ಲಿ, 15 ದಿನಗಳಲ್ಲಿ ಈ ವೇತನ ಹಾಕಲಾಗುವುದು ಎಂದು ಹೇಳುತ್ತಾರೆ. ಅದು ಕಾರ್ಯರೂಪಕ್ಕೆ ಮಾತ್ರ ಬರುವುದಿಲ್ಲ. ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರಿಗೂ ಈ ಬಗ್ಗೆ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

’ಈ ವರ್ಷದ ಮಾರ್ಚ್‌, ಏಪ್ರಿಲ್‌ ತಿಂಗಳ ವೇತನವನ್ನು ಈವರೆಗೂ ನೀಡಿಲ್ಲ. ನಾವು ಜೀವನ ನಡೆಸುವುದು ಹೇಗೆ‘ ಎಂದು ಮತ್ತೊಬ್ಬ ಶಿಕ್ಷಕರು ಅಳಲು ತೋಡಿಕೊಂಡರು.

’ಕೋವಿಡ್‌ ಕರ್ತವ್ಯಕ್ಕೆ ನಮ್ಮನ್ನು ನಿಯೋಜಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಮಗೆ ಈ ಕರ್ತವ್ಯ ನಿರ್ವಹಿಸಲು ಅಭ್ಯ‌ಂತರವಿಲ್ಲ. ಆದರೆ, ಬಿಬಿಎಂಪಿಯು ನಮಗೆ ಆರ್ಥಿಕ ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು‘ ಎಂದು ಅವರು ಒತ್ತಾಯಿಸಿದರು.

ಪಾವತಿಗೆ ಕ್ರಮ: 

’ಕೋವಿಡ್‌ ಕರ್ತವ್ಯ ನಿರ್ವಹಿಸಿದ ಮತ್ತು ಶಾಲೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ಹಾಜರಾತಿ ವಿವರ ನೀಡಿದ ಶಿಕ್ಷಕರ ಪೈಕಿ ಕಳೆದ ಜೂನ್‌ನಲ್ಲಿ 104 ಮತ್ತು ಜುಲೈನಲ್ಲಿ 130 ಜನರಿಗೆ ವೇತನ ಪಾವತಿಸಲಾಗಿದೆ. ತಡವಾಗಿ ಹಾಜರಾತಿ ವಿವರ ನೀಡಿದವರಿಗೆ ವೇತನ ನೀಡಲು ಆಗಿಲ್ಲ. ಈ ಪ್ರಕ್ರಿಯೆ ಚಾಲ್ತಿಯಲ್ಲಿತ್ತು. ಆದರೆ, ಮತ್ತೆ ಲಾಕ್‌ಡೌನ್‌ ಆಗಿದ್ದರಿಂದ ವಿಳಂಬವಾಗಿದೆ. ಬಿಬಿಎಂಪಿಯಿಂದ ಮತ್ತೆ ಸೂಚನೆ ಬಂದ ಕೂಡಲೇ ಈ ಎರಡು ತಿಂಗಳ ವೇತನ ನೀಡಲಾಗುವುದು‘ ಎಂದು ‘ಕ್ರಿಸ್ಟಲ್‌’ ಏಜೆನ್ಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

’ಮಾರ್ಚ್‌ ತಿಂಗಳ ವೇತನ ಒಂದು ವಾರದಲ್ಲಿ ಪಾವತಿಸಲಾಗುತ್ತದೆ. ಏಪ್ರಿಲ್‌ ತಿಂಗಳ ಹಾಜರಾತಿ ವಿವರವನ್ನು ಸಂಗ್ರಹಿಸಲು ಇನ್ನೂ ಸಾಧ್ಯವಾಗಿಲ್ಲ. ಇನ್ನು, ಯಾವಾಗಲೂ ಮೇ ತಿಂಗಳಲ್ಲಿ ರಜೆ ಇರುತ್ತಿದ್ದುದರಿಂದ ಈ ತಿಂಗಳ ವೇತನವನ್ನು ಈವರೆಗೆ ಶಿಕ್ಷಕರಿಗೆ ನೀಡುತ್ತಿರಲಿಲ್ಲ. ಆದರೆ, ಈ ಬಾರಿ ಶಿಕ್ಷಕರು ಮೇ ತಿಂಗಳಲ್ಲಿಯೂ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ತಿಂಗಳ ವೇತನವನ್ನೂ ಪಾವತಿಸಲು ಅನುಮತಿ ಕೋರಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ‘ ಎಂದೂ ಅವರು ಮಾಹಿತಿ ನೀಡಿದರು. 

ಈ ಬಗ್ಗೆ ಪ್ರತಿಕ್ರಿಯೆಗೆ ಬಿಬಿಎಂಪಿ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ನಾಗೇಂದ್ರ ನಾಯ್ಕ್ ಅವರಿಗೆ ಕರೆ ಮಾಡಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು