ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಆಯ–ವ್ಯಯಕ್ಕೆ ಬಿಬಿಎಂಪಿ ಸಜ್ಜು: ಘೋಷಣೆ ಜೋರು, ಅನುಷ್ಠಾನ ಚೂರು–ಪಾರು

ನಗರ ಕಾಣದ ಅಭಿವೃದ್ಧಿ– ಬಿಬಿಎಂಪಿಯಿಂದ ಮತ್ತೊಂದು ಆಯ–ವ್ಯಯಕ್ಕೆ ಸಿದ್ಧತೆ; ಕಾರ್ಯಗತವಾಗದ ಹಿಂದಿನ ಭರವಸೆಗಳು; ಚುನಾವಣೆಗಳ ನೀತಿಸಂಹಿತೆ ನಡುವೆ ನಿರ್ಲಕ್ಷ್ಯಕ್ಕೊಳಗಾದ ಅಭಿವೃದ್ಧಿ 
Published 24 ಜನವರಿ 2024, 1:00 IST
Last Updated 24 ಜನವರಿ 2024, 1:00 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತೊಂದು ಬಜೆಟ್‌ಗೆ ಸಿದ್ಧಗೊಳ್ಳುತ್ತಿದೆ.ಆದರೆ, 2023–24ನೇ ಸಾಲಿನ ಬಜೆಟ್‌ ಘೋಷಣೆಗಳು, ಯೋಜನೆಗಳು ‌ಪುಸ್ತಕದಲ್ಲಿಯೇ ಉಳಿದುಕೊಂಡಿವೆ. ಬಜೆಟ್‌ನ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಪ್ರಾಥಮಿಕ ಪ್ರಕ್ರಿಯೆಗಳೇ ನಡೆದಿಲ್ಲ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆಯಾಗಿದ್ದ ಬಜೆಟ್‌, ಹೊಸ ಸರ್ಕಾರ ಬಂದಮೇಲೆ ಒಂದಷ್ಟು ಬದಲಾವಣೆ ಕಂಡಿತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ, ಹೊಸ ಸರ್ಕಾರ ರಚನೆ, ರಾಜ್ಯ ಬಜೆಟ್‌ ಮಂಡನೆ... ಹೀಗೆ ಮೂರು ತಿಂಗಳು ಯಾವುದೇ ಕಾಮಗಾರಿಗಳು ಆರಂಭವಾಗಲಿಲ್ಲ. ಪೂರ್ಣಗೊಂಡ ಕಾಮಗಾರಿಗಳಿಗೂ ಬಿಲ್‌ ಪಾವತಿಯನ್ನು ನಿಲ್ಲಿಸಿದ್ದರಿಂದ ನಡೆಯುತ್ತಿದ್ದ ಕಾಮಗಾರಿಗಳನ್ನೂ ಗುತ್ತಿಗೆದಾರರು ಸ್ಥಗಿತಗೊಳಿಸಿದರು. ಇದರಿಂದಾಗಿ, ಅರ್ಧಕ್ಕೇ ನಿಂತ ಸಾಕಷ್ಟು ಕಾಮಗಾರಿಗಳು ನಗರದೆಲ್ಲೆಡೆ ಕಾಣಸಿಗುತ್ತವೆ.

ಜನವರಿ ಆರಂಭದಿಂದ ನಿರ್ವಹಣೆಯ ಟೆಂಡರ್‌ಗಳನ್ನು ಕರೆಯಲಾಗುತ್ತಿದೆ. ಆದರೆ ಎಲ್ಲ ಪ್ರಕ್ರಿಯೆಗಳು ಅಂತಿಮಗೊಂಡು, ಈ ಕಾಮಗಾರಿಗಳು ಆರಂಭವಾಗುವ ಮುನ್ನ ಲೋಕಸಭೆ ಚುನಾವಣೆಯ ನೀತಿಸಂಹಿತೆಯೂ ಜಾರಿಯಾಗುವ ಸಂಭವ ಇದೆ. ಹೀಗಾದರೆ, ಮತ್ತೆ ಮೂರು ತಿಂಗಳು ಯಾವುದೇ ಕೆಲಸಗಳು ಆರಂಭವಾಗುವುದಿಲ್ಲ. ಆದರೂ ಇವೆಲ್ಲದರ ನಡುವೆ ಮತ್ತೊಂದು ಬಜೆಟ್‌ ಕೂಡ ಮಂಡನೆಯಾಗಲೇಬೇಕಿದೆ.

ಬಿಬಿಎಂಪಿ ಪ್ರತಿ ಬಜೆಟ್‌ ಮಂಡನೆಯಾದ ಕೂಡಲೇ ಕನಿಷ್ಠ ನಿರ್ವಹಣೆ ಕಾಮಗಾರಿಗಳು ಆರಂಭವಾಗುತ್ತಿದ್ದವು. ವಾರ್ಡ್‌ಗಳಲ್ಲಿ ರಸ್ತೆ ಗುಂಡಿ ಮುಚ್ಚುವುದು, ಚರಂಡಿ ಹೂಳೆತ್ತುವುದು, ಪಾದಚಾರಿ ಮಾರ್ಗಗಳ ದುರಸ್ತಿ ಕಾಮಗಾರಿಗಳು ನಡೆಯುತ್ತಿದ್ದವು. ಈ ಬಾರಿ ಜನವರಿ ಮುಗಿಯುತ್ತಿದ್ದರೂ ಈ ಕಾಮಗಾರಿಗಳು ಇನ್ನೂ ಟೆಂಡರ್‌ ಹಂತದಲ್ಲಿಯೇ ಇವೆ. ಈ ಕಾಮಗಾರಿಗಳಲ್ಲದೆ ಪ್ರತಿ ವಾರ್ಡ್‌ಗೆ ನಿರ್ವಹಣೆ ಕೆಲಸಕ್ಕಾಗಿಯೇ ತಲಾ ₹75 ಲಕ್ಷ ಮೀಸಲಿಡಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ನಡೆಸಲು ಪ್ರತಿ ವಾರ್ಡ್‌ಗೆ ಒಟ್ಟಾರೆ ₹1.45 ಕೋಟಿ ಬಜೆಟ್‌ನಲ್ಲಿ ನೀಡಲಾಗಿದೆ. ಇದಲ್ಲದೆ, ವಾರ್ಡ್‌ ಕಾಮಗಾರಿಗೆ ₹1.5 ಕೋಟಿ, ವಿದ್ಯುತ್‌ ಫಿಟ್ಟಿಂಗ್‌ಗಳಿಗೆ ತಲಾ ₹10 ಲಕ್ಷ ಒದಗಿಸಲಾಗಿದೆ.

‘ವಾರ್ಡ್‌ಗಳ ಅಭಿವೃದ್ಧಿಗೆ ಇಷ್ಟೆಲ್ಲ ಹಣ ಹಂಚಿಕೆ ಬಜೆಟ್‌ನಲ್ಲಾಗಿದ್ದರೂ, ಜನರಿಗೆ ಅಗತ್ಯವಾಗಿ ಬೇಕಾದ ಕೆಲಸಗಳು ನಡೆದಿಲ್ಲ. ಕನಿಷ್ಠ ಗುಂಡಿ ಮುಚ್ಚುವ, ಡಾಂಬರು ಹಾಕುವ ಕೆಲಸಗಳೂ ಆಗಿಲ್ಲ. ವಿಧಾನಸಭೆ ಚುನಾವಣೆಗೆ ಮುನ್ನ ಮುಖ್ಯರಸ್ತೆಗಳಲ್ಲಿ ಮಾತ್ರ ಡಾಂಬರು ಕಾರ್ಯ ನಡೆಯಿತು. ಅದರ ಲೆಕ್ಕ ಹಿಂದಿನ ವರ್ಷಕ್ಕೆ ಸೇರಿಕೊಂಡಿತು. ಈ ಆರ್ಥಿಕ ವರ್ಷದಲ್ಲಿ ಗುಂಡಿಗಳನ್ನೂ ಮುಚ್ಚಿಲ್ಲ’ ಎಂಬುದು ಎಲ್ಲ ವಾರ್ಡ್‌ಗಳ ನಾಗರಿಕರ ದೂರು.

‘ಸಮಾಜ ಕಲ್ಯಾಣ ವಿಭಾಗ ಕಾರ್ಯಕ್ರಮಗಳಿಗೆ ಫಲಾನುಭವಿಗಳನ್ನು ಗುರುತಿಸಿ, ಅರ್ಜಿಗಳನ್ನು ಉಪ ವಿಭಾಗದ ಮಟ್ಟದಿಂದ ಕೇಂದ್ರ ಕಚೇರಿಗೆ ಕಳುಹಿಸಿಕೊಟ್ಟರೂ ಯೋಜನೆಯ ಫಲ ಅರ್ಹರಿಗೆ ಸಿಕ್ಕಿಲ್ಲ’ ಎಂಬುದು ವಲಯ ಅಧಿಕಾರಿಗಳ ದೂರು. ‘ಹಣಕಾಸು ವಿಭಾಗದಿಂದ ಹಣ ಬಿಡುಗಡೆ ಆಗದಿರುವುದರಿಂದ ಫಲಾನುಭವಿಗಳಿಗೆ ಮೊತ್ತ ಅಥವಾ ಕಾರ್ಯಕ್ರಮಗಳು ತಲುಪಿಲ್ಲ’ ಎಂಬುದು ಸಮಾಜ ಕಲ್ಯಾಣ ವಿಭಾಗದ ಅಧಿಕಾರಿಗಳ ಮಾತು.

ವಿದ್ಯಾರ್ಥಿಗಳಿಗೆ ಶೂ ಸಿಕ್ಕಿಲ್ಲ!

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದರೂ ಬಿಬಿಎಂಪಿ ಶಾಲೆಯ ಮಕ್ಕಳಿಗೆ ಶೂಗಳನ್ನು ವಿತರಿಸಿಲ್ಲ. ಕೆಲವು ಶಾಲೆ–ಕಾಲೇಜುಗಳಿಗೆ ವಿತರಣೆ ಮಾಡಲಾಗಿದ್ದರೂ, ಅಳತೆಯಲ್ಲಿ ಸಾಕಷ್ಟು ಗೊಂದಲವಾಗಿದ್ದು ಅವುಗಳು ಶಾಲೆ ಕೊಠಡಿಯಲ್ಲೇ ಉಳಿದಿವೆ. ಪ್ರಯೋಗಾಲಯಗಳಿಗೆ ಅಗತ್ಯವಾದ ಪರಿಕರಗಳನ್ನು ಇನ್ನೂ ಒದಗಿಸಿಲ್ಲ. ಶಾಲಾ ಕಾಲೇಜುಗಳಿಗೆ ಆಟೋಪಕರಣಗಳನ್ನು ಒದಗಿಸುವ ಪ್ರಕ್ರಿಯೆ ಇನ್ನೂ ಟೆಂಡರ್‌ ಹಂತದಲ್ಲೇ ಉಳಿದಿದೆ.

‘ಶೈಕ್ಷಣಿಕ ವರ್ಷ ಆರಂಭಕ್ಕೆ ಮುನ್ನ ವಿದ್ಯಾರ್ಥಿಗಳಿಗೆ ಅಗತ್ಯವಾದ ಸಮವಸ್ತ್ರ, ಪರಿಕರಗಳನ್ನು ಒದಗಿಸಲು ಯೋಜಿಸಿ, ಅದರಂತೆ ಕಾರ್ಯನಿರತರಾಗಬೇಕು. ಆದರೆ, ಅಧಿಕಾರಿಗಳ ಉದಾಸೀನದಿಂದ ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿದ್ದರೂ ಬಜೆಟ್‌ನ ಘೋಷಣೆಯ ಸೌಲಭ್ಯಗಳು ವಿದ್ಯಾರ್ಥಿಗಳನ್ನು ತಲುಪಿಲ್ಲ’ ಎಂದು ಶಿಕ್ಷಕರು ದೂರುತ್ತಾರೆ.

‘ಕಲ್ಯಾಣ’ ಕಾರ್ಯಕ್ರಮಗಳಿಗೂ ಹಣ ಬಿಡುಗಡೆ ಆಗಿಲ್ಲ!

ಬಜೆಟ್‌ನಲ್ಲಿ ಘೋಷಿಸಿರುವಂತೆ ‘ಸಮಾಜ ಕಲ್ಯಾಣ’ ವಿಭಾಗದ ಕಾರ್ಯಕ್ರಮಗಳು, ಯೋಜನೆಗಳು ಫಲಾನುಭವಿಗಳಿಗೆ ವಿಳಂಬವಾಗದಂತೆ ತಲುಪಬೇಕು. ಪ್ರಸ್ತುತ ಬಜೆಟ್‌ನ ಘೋಷಣೆಯೂ ಸೇರಿದಂತೆ ಕೋವಿಡ್‌ ನಂತರದ ವರ್ಷಗಳಲ್ಲಿ ಒಂಟಿ ಮನೆ, ಅಂಗವಿಕಲರಿಗೆ ದ್ವಿಚಕ್ರ ವಾಹನ, ಸ್ಮಾರ್ಟ್‌ ಸ್ಟಿಕ್‌, ಹಿರಿಯ ನಾಗರಿಕರಿಗೆ ವೀಲ್‌ ಚೇರ್‌, ವೃತ್ತಿನಿರತ ಮಹಿಳೆಯರಿಗೆ ದ್ವಿಚಕ್ರ ವಾಹನ, ಹೊಲಿಗೆ ಯಂತ್ರಗಳನ್ನೂ ವಿತರಿಸಿಲ್ಲ.

2022–23ನೇ ‌ಸಾಲಿಗೆ ಒಂಟಿ ಮನೆಗಾಗಿ 6,139 ಅರ್ಜಿಗಳು ಬಂದಿದ್ದವು. ಅದರಲ್ಲಿ 1,145 ಅರ್ಜಿಗಳು ಅರ್ಹವಾಗಿದ್ದವು. ಹಿಂದಿನ ಬಾಕಿ ಸೇರಿದಂತೆ 2022–23ನೇ ಸಾಲಿನಲ್ಲಿ 3,259 ಒಂಟಿ ಮನೆ ಹಾಗೂ ಅಮೃತ ಮಹೋತ್ಸವ ಮನೆಗಳನ್ನು ವಿತರಿಸಲು ಗುರಿ ಹೊಂದಲಾಗಿತ್ತು. ಆದರೆ, 593 ಮನೆಗಳನ್ನು ಮಾತ್ರ ವಿತರಿಸಲಾಗಿದೆ.

ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ 2023–24ನೇ ಸಾಲಿನ ಬಜೆಟ್‌ನಲ್ಲಿ ₹513 ಕೋಟಿ ಹಂಚಿಕೆ ಮಾಡಲಾಗಿದ್ದರೂ, ₹318.60 ಕೋಟಿ ಮೌಲ್ಯದ ಕ್ರಿಯಾಯೋಜನೆಗೆ 2023ರ ನವೆಂಬರ್‌ 3ರಂದು ಅನುಮೋದನೆ ನೀಡಲಾಗಿದೆ. ಇದರ ಅನುಷ್ಠಾನದ ಪ್ರಕ್ರಿಯೆ ಇನ್ನೂ ಆರಂಭವೇ ಆಗಿಲ್ಲ.

ಪರಿಶಿಷ್ಟ ಜಾತಿ, ಪಂಗಡದ ಪೌರಕಾರ್ಮಿಕರು, ವರ್ಗದವರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ವರ್ಗದವರು, ಅಂಗವಿಕಲರು, ಮಹಿಳೆಯರು, ಹಿರಿಯ ನಾಗರಿಕರು, ಬೀದಿ ಬದಿ ವ್ಯಾಪಾರಿಗಳು, ಸಾಮಾನ್ಯ ವರ್ಗದ ಕಲ್ಯಾಣ ಕಾರ್ಯಕ್ರಮಗಳು ಮತ್ತು ರಾತ್ರಿ ತಂಗುದಾಣದ ನಿರ್ಮಾಣ ಮತ್ತು ನಿರ್ವಹಣೆಯ ಕೆಲಸಗಳು ಘೋಷಣೆಯಾಗೇ ಉಳಿದಿವೆ.

ರಾಜಕಾಲುವೆಗಳ ದುಃಸ್ಥಿತಿ ಮುಂದುವರಿಕೆ!

ನಗರದಲ್ಲಿರುವ ಬೃಹತ್‌ ನೀರುಗಾಲುವೆಗಳನ್ನು ಮಳೆಗಾಲದೊಳಗೆ ನಿರ್ವಹಣೆ ಮಾಡಲು ₹70.20 ಕೋಟಿ ವೆಚ್ಚ ಮಾಡಲು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ‘ಈ ಕೆಲಸ ಆಗಿದೆ’ ಎಂದು ಹೇಳಲಾಗುತ್ತಿದ್ದರೂ ವಾಸ್ತವದಲ್ಲಿ ರಾಜಕಾಲುವೆಗಳು ಹೂಳಿನಿಂದ ತುಂಬಿಕೊಂಡಿವೆ. ಜೊತೆಗೆ, ಮಳೆಗಾಲದಲ್ಲಿ ತುರ್ತು ಕಾಮಗಾರಿಗಳಿಗೆ ₹15 ಕೋಟಿ ವೆಚ್ಚವಾಗಿರುವ ಕುರುಹು ಕಾಣುತ್ತಿಲ್ಲ. ₹45 ಕೋಟಿ ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳಿಗೆ ಇನ್ನೂ ಆಸಕ್ತಿ ಬಂದಿಲ್ಲ. ಟೆಂಡರ್‌ ಆಹ್ವಾನಿಸುವ ಪ್ರಕ್ರಿಯೆಗಳೂ ನಡೆಯದೆ, ನಗರದ ಹಲವು ಭಾಗಗಳಲ್ಲಿ ರಾಜಕಾಲುವೆಗಳ ‘ಮಣ್ಣಿನ ಗೋಡೆ’ಗಳು ಕುಸಿಯುತ್ತಿವೆ.

ರಾಜಕಾಲುವೆ ಒತ್ತುವರಿ ತೆರವು ಮಾಡಲು ಪ್ರತಿ ವಲಯಕ್ಕೆ ತಲಾ ₹1 ಕೋಟಿ ಹಣ ನೀಡಲಾಗಿದೆ. ಆದರೆ, ರಾಜಕಾಲುವೆ– ಕೆರೆಗಳ ಒತ್ತುವರಿ ತೆರವು ಆರಂಭವೇ ಆಗಿಲ್ಲ. ಕೆರೆಗಳ ಅಭಿವೃದ್ಧಿಗೆ ₹45 ಕೋಟಿ ಮೀಸಲಿಟ್ಟರೂ ಹೊಸದಾಗಿ ಒಂದು ಕಾಮಗಾರಿ ಪ್ರಾರಂಭಿಸಿಲ್ಲ.

ಉದ್ಯಾನಗಳ ಅಭಿವೃದ್ಧಿ ನಿರ್ಲಕ್ಷ್ಯ!

ತೋಟಗಾರಿಕೆ ವಿಭಾಗಕ್ಕೆ ₹129 ಕೋಟಿ ಹಣವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಿದ್ದರೂ, ಉದ್ಯಾನಗಳಲ್ಲಿ ಮೂಲಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಗಿಡಗಳು ಒಣಗಿರುವುದು, ನಿರ್ವಹಣೆ ಕೊರತೆ, ಸ್ವಚ್ಛತೆ ಬಗೆಗಿನ ನಿರ್ಲಕ್ಷ್ಯದ ಬಗ್ಗೆ ಪ್ರತಿ ದಿನವೂ ನಾಗರಿಕರ ದೂರು ಇದ್ದೇ ಇರುತ್ತದೆ. ಸಮಯಕ್ಕೆ ಸರಿಯಾಗಿ ಗುತ್ತಿಗೆಯನ್ನು ನವೀಕರಿಸದಿರುವುದು, ಹೊಸ ಗುತ್ತಿಗೆ ಟೆಂಡರ್‌ ಆಹ್ವಾನಿಸದಿರುವುದರಿಂದ ಸಮಸ್ಯೆಗಳು ಹೆಚ್ಚಾಗಿವೆ. ಜನವರಿಯಲ್ಲಿ ಉದ್ಯಾನಗಳ ನಿರ್ವಹಣೆ, ಭದ್ರತೆ ಸಿಬ್ಬಂದಿಗಾಗಿ ಟೆಂಡರ್‌ ಆಹ್ವಾನಿಸುತ್ತಿರುವುದು ಇದೆಲ್ಲ ವೈಫಲ್ಯಕ್ಕೂ ಹಿಡಿದ ಕನ್ನಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT