ಬುಧವಾರ, ಆಗಸ್ಟ್ 17, 2022
25 °C
ಬಿಬಿಎಂಪಿ ಕಟ್ಟಡ ಉಪವಿಧಿ 2003ಕ್ಕೆ ತಿದ್ದುಪಡಿಗೆ ಸಿದ್ಧತೆ * ಅಕ್ರಮ ಹೆಚ್ಚಳ– ಸಾರ್ವಜನಿಕರ ಕಳವಳ

ಶೇ 15ರಷ್ಟು ಉಲ್ಲಂಘನೆಯಾದರೂ ಸ್ವಾಧೀನಾನುಭವ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯಿಂದ ಕಟ್ಟಡ ನಕ್ಷೆಗೆ ಅನುಮೋದನೆ ಪಡೆದು, ಬಳಿಕ ಶೇ 15ರಷ್ಟು ಉಲ್ಲಂಘನೆ ಮಾಡಿರುವ ಕಟ್ಟಡಗಳಿಗೂ ದಂಡ ವಿಧಿಸಿ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ನೀಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಈ ಸಂಬಂಧ 2003ರ ಬಿಬಿಎಂಪಿ ಕಟ್ಟಡ ಉಪವಿಧಿಯ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಬಿಬಿಎಂಪಿ ಪ್ರಸ್ತಾವ ಸಿದ್ಧಪಡಿಸಿದೆ. ನಗರ ಯೋಜನೆ ಅಭಿವೃದ್ಧಿ ಸ್ಥಾಯಿಸಮಿತಿಯ ಹಾಗೂ ಬಿಬಿಎಂಪಿ ಕೌನ್ಸಿಲ್‌ನ ಅಧಿಕಾರ ಹೊಂದಿರುವ ಆಡಳಿತಾಧಿಕಾರಿ ಆಡಳಿತಾಧಿಕಾರಿ ಗೌರವ ಗುಪ್ತ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಅನುಮೋದನೆಗಾಗಿ ಈ ಪ್ರಸ್ತಾವವನ್ನು ಬಿಬಿಎಂಪಿ ಸರ್ಕಾರಕ್ಕೆ ಕಳುಹಿಸಲಿದೆ.

ಇದುವರೆಗೆ, ಕಟ್ಟಡ ನಕ್ಷೆ ಪಡೆದ ಬಳಿಕ ಗರಿಷ್ಠ ಶೇ 5ರಷ್ಟು ಉಲ್ಲಂಘನೆ ಮಾಡಲು ಮಾತ್ರ ಅವಕಾಶವಿತ್ತು. ಶೇ 5ರವರೆಗಿನ ಉಲ್ಲಂಘನೆಗೆ ದಂಡನಾ ಶುಲ್ಕ ಪಾವತಿಸಿ, ಅದನ್ನು ಸಕ್ರಮಪಡಿಸಿಕೊಂಡು ಒ.ಸಿ ಪಡೆಯಬಹುದಿತ್ತು. 

‘ಕಟ್ಟಡ ನಕ್ಷೆಗೆ ಅನುಮೋದನೆ ಪಡೆದ ಬಳಿಕ ಶೇ 5ಕ್ಕಿಂತಲೂ ಹೆಚ್ಚು ಉಲ್ಲಂಘನೆ ಮಾಡುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಒ.ಸಿ ಪಡೆಯದ ಕಟ್ಟಡಗಳಿಗೆ ಬೆಸ್ಕಾಂ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ. ಇದರಿಂದ ನಗರದ ಅಭಿವೃದ್ಧಿಗೆ ತೊಡಕು ಉಂಟಾಗುತ್ತಿದೆ. ಪಾಲಿಕೆಯ ವರಮಾನಕ್ಕೂ ಧಕ್ಕೆ ಉಂಟಾಗುತ್ತಿದೆ. 2003 ಕಟ್ಟಡ ಉಪವಿಧಿಯ ಸೆಕ್ಷನ್‌ 6 (i)ಗೆ ತಿದ್ದುಪಡಿ ತಂದು ಉಲ್ಲಂಘನೆ ಪ್ರಮಾಣವನ್ನು ಶೇ 15ರವರೆಗೆ ಹೆಚ್ಚಿಸಿದರೆ ಬಿಬಿಎಂಪಿಗೆ ಹೆಚ್ಚಿನ ವರಮಾನ ಬರಲಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 

ಪಾಲಿಕೆಯ ಈ ನಡೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಅಕ್ರಮಗಳು ಮತ್ತಷ್ಟು ಹೆಚ್ಚಲಿವೆ ಎಂದು ಕಳವಳ ತೋಡಿಕೊಂಡಿದ್ದಾರೆ.

‘ಶೇ 5ರಷ್ಟು ಉಲ್ಲಂಘನೆಗೆ ಅವಕಾಶ ನೀಡುವುದೇ ತಪ್ಪು. ಈಗ ಉಲ್ಲಂಘನೆ ಪ್ರಮಾಣವನ್ನು ಮತ್ತೆ ಶೇ 15ಕ್ಕೆ ಹೆಚ್ಚಿಸುವುದು ಅಕ್ರಮ ನಡೆಸುವುದಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತೆ. ಪಾಲಿಕೆಯು ಕೇವಲ ವರಮಾನವನ್ನು ಮಾತ್ರ ನೋಡಬಾರದು. ನಗರವು ಆರೋಗ್ಯಕರವಾಗಿ ಬೆಳವಣಿಗೆ ಹೊಂದಬೇಕು ಎಂಬ ಕಾಳಜಿಯನ್ನೂ ಹೊಂದಿರಬೇಕು’ ಎಂದು ಜಯನಗರದ ಶಶಿಕುಮಾರ್‌ ಅಭಿಪ್ರಾಯಪಟ್ಟರು.

‘ಕಟ್ಟಡ ನಿಯಮಗಳನ್ನು ರೂಪಿಸಿರುವುದೇ ನಗರವು ವ್ಯವಸ್ಥಿತವಾಗಿ ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ. ಬಿಬಿಎಂಪಿಯೇ ಮಾಡಿಕೊಂಡಿರುವ ನಿಯಮಗಳನ್ನು ಸಡಿಲಿಕೆ ಮಾಡಿ ಮತ್ತಷ್ಟು ಅಕ್ರಮಗಳಿಗೆ ಅವಕಾಶ ಕಲ್ಪಿಸುವುದು ನಿಜಕ್ಕೂ ವಿಪರ್ಯಾಸ. ಶೇ 5ಕ್ಕಿಂತ ಹೆಚ್ಚಿನ ಉಲ್ಲಂಘನೆ ಮಾಡಿದ್ದರೆ ಅವುಗಳನ್ನು ತೆರವುಗೊಳಿಸುವ ಇಚ್ಛಾಶಕ್ತಿಯನ್ನು ಬಿಬಿಎಂಪಿ ಪ್ರದರ್ಶಿಸಬೇಕಿತ್ತು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು