ನಿತ್ಯ 800 ಬೀದಿ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ

ಬೆಂಗಳೂರು: ರೇಬಿಸ್ ನಿರ್ಮೂಲನೆಗಾಗಿ ಪಣತೊಟ್ಟಿರುವ ಬಿಬಿಎಂಪಿ, ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಪಕ್ಷ ಶೇ 70ರಷ್ಟು ಬೀದಿನಾಯಿಗಳಿಗೆ ಪ್ರತಿವರ್ಷವೂ ರೇಬಿಸ್ ನಿರೋಧಕ ಲಸಿಕೆ ಹಾಕಲು ಮುಂದಾಗಿದೆ. ಪ್ರತಿದಿನ ಕನಿಷ್ಠ 800 ಬೀದಿನಾಯಿಗಳಿಗೆ ಲಸಿಕೆ ಹಾಕಲು ಬಿಬಿಎಂಪಿ ಕ್ರಮ ಕೈಗೊಂಡಿದೆ.
ಒಂದೂವರೆ ವರ್ಷಗಳಲ್ಲಿ ಪಾಲಿಕೆ ಒಟ್ಟು 89,098 ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿದೆ. ಬಿಬಿಎಂಪಿ ವ್ಯಾಪ್ತಿಯ 44 ವಾರ್ಡ್‌ಗಳಲ್ಲಿ ಬೀದಿ ನಾಯಿಗಳಿಗೆ ಲಸಿಕೆ ಹಾಕುವ ಕಾರ್ಯ ಪೂರ್ಣಗೊಂಡಿದೆ. ಇಷ್ಟರವರೆಗೆ ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಕಾರ್ಯಕ್ರಮ ಹಾಗೂ ರೇಬಿಸ್ ನಿರೋಧಕ ಲಸಿಕೆ ಕಾರ್ಯಕ್ರಮಗಳಿಗೆ ಪ್ರತ್ಯೇಕ ವಾಹನದ ವ್ಯವಸ್ಥೆ ಇರಲಿಲ್ಲ. ಇನ್ನು ಪ್ರತಿ ವಲಯಕ್ಕೊಂದು ವಾಹನವನ್ನು ಈ ಉದ್ದೇಶಕ್ಕಾಗಿ ಬಳಸುವ ಮೂಲಕ ಈ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ. ಪ್ರತಿ ವಾಹನದಲ್ಲೂ ಚಾಲಕ ಹಾಗೂ ನಾಯಿ ಹಿಡಿಯಲು ತಲಾ ಇಬ್ಬರು ನುರಿತ ಸಿಬ್ಬಂದಿ ಇರಲಿದ್ದಾರೆ.
ವಿಶ್ವ ಪ್ರಾಣಿಜನ್ಯ ರೋಗ ತಡೆ ದಿನಾಚರಣೆ ಅಂಗವಾಗಿ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ರೇಬಿಸ್ ನಿರೋಧಕ ಲಸಿಕೆ ಕಾರ್ಯಕ್ರಮಕ್ಕಾಗಿ ಸಜ್ಜಾದ ಎಂಟು ವಾಹನಗಳಿಗೆ ಮಂಗಳವಾರ ಚಾಲನೆ ನೀಡಿದರು. ‘ವಿವಿಧ ಪ್ರಾಣಿ ದಯಾ ಸಂಘಟನೆಗಳ ಸಹಕಾರದಿಂದ ರೇಬಿಸ್ ನಿರೋಧಕ ಲಸಿಕೆ ಕಾರ್ಯಕ್ರಮವನ್ನು ಬಿಬಿಎಂಪಿ ಯಶಸ್ವಿಯಾಗಿ ಜಾರಿಗೆ ತರಲಿದೆ’ ಎಂದು ಗೌರವ್ ಗುಪ್ತ ತಿಳಿಸಿದರು. ಬಿಬಿಎಂಪಿ ವಿಶೇಷ ಆಯುಕ್ತ (ಪಶುಸಂಗೋಪನೆ) ಡಿ.ರಂದೀಪ್ ಉಪಸ್ಥಿತರಿದ್ದರು.
‘ರೇಬಿಸ್ ಕುರಿತು ಮಾಹಿತಿ ನೀಡಲು ಬಿಬಿಎಂಪಿ 2020ರ ಆ. 15ರಂದು ಸಹಾಯವಾಣಿ (6364893322) ಆರಂಭಿಸಿದೆ. ರೇಬಿಸ್ ರೋಗ ಹೊಂದಿರುವ ಜಾನುವಾರುಗಳ ಬಗ್ಗೆ ಅಥವಾ ರೇಬಿಸ್‌ನ ಶಂಕೆ ಇರುವ ಜಾನುವಾರುಗಳ ಬಗ್ಗೆ ಈ ಸಹಾಯವಾಣಿಗೆ ಮಾಹಿತಿ ನೀಡಬಹುದು. ಅಂತಹ ಪ್ರಾಣಿಗಳನ್ನು ಪ್ರತ್ಯೇಕಿಸಿ ತೀವ್ರ ನಿಗಾ ಇಡಲು ಬಿಬಿಎಂಪಿ ಕ್ರಮಕೈಗೊಳ್ಳುತ್ತದೆ’ ಎಂದು ಬಿಬಿಎಂಪಿ ಜಂಟಿ ನಿರ್ದೇಶಕ (ಪಶುಸಂಗೋಪನೆ) ಮಂಜುನಾಥ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.
ಅಂಕಿ ಅಂಶ
47,164: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿನಾಯಿಗಳಿಗೆ 2020ರಲ್ಲಿ ನೀಡಲಾದ ರೇಬಿಸ್ ನಿರೋಧಕ ಲಸಿಕೆಗಳು
41,934: ಬಿಬಿಎಂಪಿ ವ್ಯಾಪ್ತಿಯ ಬೀದಿನಾಯಿಗಳಿಗೆ 2021ರ ಮೊದಲ 6 ತಿಂಗಳುಗಳಲ್ಲಿ ನೀಡಲಾದ ಲಸಿಕೆಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.