ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೈನ್‌ಮೆಂಟ್‌ ವಲಯದ ನಿವಾಸಿಗಳಿಗೆ ಪ್ರಮಾಣಪತ್ರ: ಬಿಬಿಎಂಪಿ ಆಯುಕ್ತ

ಬೂತ್‌ ಮಟ್ಟದ ತಂಡದ ಸದಸ್ಯರ ಜೊತೆ ಪಾಲಿಕೆ ಆಯುಕ್ತ ಸಂವಾದ
Last Updated 1 ಆಗಸ್ಟ್ 2020, 21:08 IST
ಅಕ್ಷರ ಗಾತ್ರ

ಬೆಂಗಳೂರು: ಕಂಟೈನ್‌ಮೆಂಟ್‌ ಪ್ರದೇಶದ ನಿವಾಸಿಗಳಲ್ಲಿ ಯಾರಿಗಾದರೂ ಈ ಬಗ್ಗೆ ಪ್ರಮಾಣಪತ್ರದ ಅಗತ್ಯವಿದ್ದರೆ, ಬಿಬಿಎಂಪಿ ವತಿಯಿಂದ ಅದನ್ನು ನೀಡಲು ಕ್ರಮಕೈಗೊಳ್ಳುವಂತೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನಲ್ಲಿ ರಚಿಸಿರುವ ಬೂತ್‌ಮಟ್ಟದ ತಂಡಗಳ ಸದಸ್ಯರ ಜೊತೆ ಅವರು ಶನಿವಾರ ಸಂವಾದ ನಡೆಸಿದರು.

‘ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಕಂಟೈನ್‌ಮೆಂಟ್‌ ಪ್ರದೇಶಗಳ ನಿವಾಸಿಗಳಾಗಿದ್ದರೆ, ಅವರು ಕರ್ತವ್ಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆಯಲು ಪ್ರಮಾಣಪತ್ರಗಳ ಅಗತ್ಯವಿರುತ್ತದೆ. ಇವುಗಳನ್ನು ಒದಗಿಸಲು ಬೂತ್‌ ಮಟ್ಟದ ತಂಡಗಳೇ ಕ್ರಮವಹಿಸಬೇಕು’ ಎಂದರು.

‘ಕಂಟೈನ್‌ಮೆಂಟ್‌ ಪ್ರದೇಶವನ್ನು ತಂಡದ ಸದಸ್ಯರು ಸರ್ವೆ ಮಾಡಬೇಕು. ಉಚಿತ ಪಡಿತರದ ನೀಡಬೇಕಾದ ಕುಟುಂಬಗಳನ್ನು, ಔಷಧದ ಅಗತ್ಯವಿರುವವರನ್ನು ಹಾಗೂ ಚಿಕಿತ್ಸೆ ಕಾರಣಕ್ಕೆ ಹೊರಗಡೆಗೆ ಪ್ರಯಾಣಿಸಬೇಕಾದವರನ್ನು ಗುರುತಿಸಬೇಕು. ಹಣ ಕೊಟ್ಟು ಪಡಿತರ ಪಡೆಯುವವರಿಗೂ ಅದನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು’ ಎಂದರು.

ಇದುವರೆಗೆ ಯಾರಾದರೂ ಅಧಿಕಾರಿಗಳು ಅಥವಾ ವೈದ್ಯಕೀಯ ಸಿಬ್ಬಂದಿ ಕಂಟೈನ್‌ಮೆಂಟ್ ಪ್ರದೇಶದ ನಿವಾಸಿಗಳಾಗಿದ್ದರೂ ಅವರು ಹೊರಗಡೆ ಹೋಗುವುದಕ್ಕೆ ಅವಕಾಶ ಇರಲಿಲ್ಲ. ಆದರೆ, ಇನ್ನು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಕಂಟೈನ್ಮೆಂಟ್‌ ಪ್ರದೇಶದಿಂದ ಹೊರಗಡೆ ಹೋಗುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಂತಹವರನ್ನು ಗುರುತಿಸುವ ಹೊಣೆಯೂ ಬೂತ್‌ ಮಟ್ಟದ ತಂಡದ್ದಾಗಿರುತ್ತದೆ.

ಬೂತ್ ಮಟ್ಟದ ತಂಡಗಳ ಹೊಣೆಗಳು

* ಮನೆ ಮನೆ ಸರ್ವೆ ನಡೆಸಿ ಕೆಮ್ಮು, ಶೀತ ಜ್ವರ (ಐಎಲ್‌ಐ) ಹಾಗೂ ತೀವ್ರ ಉಸಿರಾಟ ತೊಂದರೆ ಇರುವವರನ್ನು ಗುರುತಿಸುವುದು.

* ಕೋವಿಡ್‌ ದೃಢಪಟ್ಟವರನ್ನು ಮನೆಯಲ್ಲೇ ಆರೈಕೆಗೆ ಒಳಪಡಿಸುವ ಸಾಧ್ಯತೆ ಪರಿಶೀಲಿಸುವುದು

* ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಿ ಅವರನ್ನು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಸೂಚಿಸುವುದು

* ಮನೆಯಲ್ಲೇ ಆರೈಕೆಗೆ ಒಳಗಾಗುವ ಸೋಂಕಿತರಿಗೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಅವರ ಮೇಲೆ ನಿಗಾ ಇಡುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT