ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಏಪ್ರಿಲ್‌ 1ರಿಂದ ನಗರ ಭೂಸಾರಿಗೆ ಉಪಕರ ಜಾರಿ

ಶೇ 2ರಷ್ಟು ಹೆಚ್ಚಲಿದೆ ಆಸ್ತಿ ತೆರಿಗೆ ಹೊರೆ
Last Updated 7 ಜನವರಿ 2021, 18:42 IST
ಅಕ್ಷರ ಗಾತ್ರ

ಬೆಂಗಳೂರು: 2021–22ನೇ ಸಾಲಿನಲ್ಲಿ ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ನಗರ ಭೂಸಾರಿಗೆ ಉಪಕರವನ್ನು ಸಂಗ್ರಹಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ನಗರ ಭೂಸಾರಿಗೆ ಸೆಸ್‌ ಸಂಗ್ರಹಕ್ಕೆ ಅನುವು ಮಾಡಿ ಕೊಡಲು ರಾಜ್ಯ ಸರ್ಕಾರ 1976ರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈ ಕಾಯ್ದೆಗೆ ಸೆಕ್ಷನ್‌ 103 ಸಿ ಸೇರಿಸಲಾಗಿತ್ತು. ಈ ಪ್ರಕಾರಸೆಸ್‌ ಸಂಗ್ರಹಿಸುವ ಪ್ರಸ್ತಾಪಕ್ಕೆ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯು 2013ರ ಡಿ.23ರಂದು ಒಪ್ಪಿಗೆ ನೀಡಿತ್ತು. ಆದರೆ, 2014ರ ಮೇ 28ರಂದು ನಡೆದಿದ್ದ ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಈ ಸೆಸ್‌ ಸಂಗ್ರಹಿಸದಿರಲು ನಿರ್ಣಯ ಕೈಗೊಳ್ಳಲಾಗಿತ್ತು.

ನಗರ ಭೂಸಾರಿಗೆ ಸೆಸ್‌ ಸಂಗ್ರಹಿಸದ ಬಗ್ಗೆ ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಸೆಸ್‌ ಸಂಗ್ರಹಿಸಲು ಒಪ್ಪಿಗೆ ನೀಡಬೇಕು ಎಂಬ ಬಿಬಿಎಂಪಿ ಆಯುಕ್ತರ ಟಿಪ್ಪಣಿ 2018ರ ಜೂನ್‌ 28ರಂದು ಕೌನ್ಸಿಲ್‌ ಸಭೆಯ ಮುಂದೆ ಮಂಡನೆ ಆಗಿತ್ತು. ಆದರೆ ಚುನಾಯಿತ ಕೌನ್ಸಿಲ್‌ ಈ ಬಗ್ಗೆ ನಿರ್ಣಯ ತೆಗೆದುಕೊಂಡಿರಲಿಲ್ಲ. ಗೌತಮ್‌ ಕುಮಾರ್‌ ಅವರು ಮೇಯರ್‌ ಆಗಿದ್ದಾಗ ಒಮ್ಮೆ ಆಯುಕ್ತರ ಟಿಪ್ಪಣಿಗೆ ಕೌನ್ಸಿಲ್‌ ಸಭೆ ಒಪ್ಪಿಗೆ ಸೂಚಿಸಿತ್ತು. ಇದರಿಂದ ತೆರಿಗೆ ಹೊರೆ ಹೆಚ್ಚಲಿದೆ ಎಂಬ ಟೀಕೆಗಳು ಕೇಳಿ ಬಂದಿದ್ದರಿಂದ, ‘ಈ ಬಗ್ಗೆ ನಿರ್ಣಯವನ್ನೇ ಕೈಗೊಂಡಿಲ್ಲ’ ಎಂದು ಗೌತಮ್‌ ಕುಮಾರ್‌ ಸ್ಪಷ್ಟನೆ ನೀಡಿದ್ದರು.

ಬಿಬಿಎಂಪಿ ಆಡಳಿತಾಧಿಕಾರಿ ಗೌರವ ಗುಪ್ತ ಅವರು ನಗರ ಭೂಸಾರಿಗೆ ಸೆಸ್‌ ಸಂಗ್ರಹಿಸುವ ಪ್ರಸ್ತಾವಕ್ಕೆ 2020ರ ಸೆ. 26ರಂದು ಅನುಮೋದನೆ ನೀಡಿದ್ದಾರೆ.

‘ನಗರ ಭೂಸಾರಿಗೆ ಸೆಸ್‌ ಸಂಗ್ರಹಿಸದಿದ್ದರೆ ಮತ್ತೆ ಮಹಾಲೇಖಪಾಲರು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಹಾಗಾಗಿ ಈ ಸೆಸ್‌ ಸಂಗ್ರಹ ಅನಿವಾರ್ಯ. ಬಿಬಿಎಂಪಿಯು ಪ್ರತಿವರ್ಷ ಹೆಚ್ಚೂ ಕಡಿಮೆ ₹ 2000 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುತ್ತದೆ. ಅದರಂತೆ ಸರಿಸುಮಾರು ₹ 40 ಕೋಟಿಯಷ್ಟು ನಗರ ಭೂಸಾರಿಗೆ ಸೆಸ್‌ ಸಂಗ್ರಹವಾಗಲಿದೆ ಎಂದು ನಿರೀಕ್ಷಿಸಿದ್ದೇವೆ. ಈ ಹಣವನ್ನು ಬಿಬಿಎಂಪಿ ಬಳಸುವಂತಿಲ್ಲ. ನಗರ ಭೂಸಾರಿಗೆ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಥವಾ ನಗರ ಭೂಸಾರಿಗೆ ನಿರ್ದೇಶನಾಲಯದವರು (ಡಲ್ಟ್‌) ಬಳಸಬಹುದು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2021ರ ಏ.1ರಿಂದ ಈ ಸೆಸ್‌ ಸಂಗ್ರಹಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆಸ್ತಿ ತೆರಿಗೆಯ ಹಿಂದಿನ ಬಾಕಿಗೆ ಈ ಸೆಸ್‌ ವಿಧಿಸುವುದಿಲ್ಲ. 2021–22ನೇ ಸಾಲಿನ ಆಸ್ತಿ ತೆರಿಗೆ ಜೊತೆ ಶೇ 2ರಷ್ಟು ಸೆಸ್‌ ಸಂಗ್ರಹಿಸಲಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT