ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಾಳ, ಕೆ.ಆರ್‌.ಪುರ ಸಂಚಾರ ದಟ್ಟಣೆಗೆ ಬಿಬಿಎಂಪಿ ಪರಿಹಾರ ಮಾರ್ಗ

Last Updated 30 ಜೂನ್ 2022, 2:13 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ, ಕೆ.ಆರ್‌.ಪುರ ಮತ್ತು ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲ ಮಂಡಳಿ ಅಧಿಕಾರಿಗಳು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರು.

ಮಂಗಳವಾರ ತಡರಾತ್ರಿ ಸ್ಥಳ ತಪಾಸಣೆ ನಡೆಸಿದ ಅಧಿಕಾರಿಗಳ ತಂಡ, ‌ತಾತ್ಕಾಲಿಕ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತು.

‘ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ ಕಡೆಗೆ ಹೋಗುವ ಸರ್ವೀಸ್ ರಸ್ತೆ ವಿಸ್ತರಣೆ ಮಾಡುವುದು, ಎಸ್ಟೀಮ್ ಮಾಲ್ ಮುಂಭಾಗ ರಸ್ತೆಯಲ್ಲಿ ಬಸ್‌ಗಳು ನಿಲ್ಲುವುದನ್ನು ತಪ್ಪಿಸುವುದು. ಬಳ್ಳಾರಿ ರಸ್ತೆ(ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ) ಮೇಲ್ಸೇತುವೆಯಿಂದ ಬರುವ ವಾಹನಗಳನ್ನು ನೇರವಾಗಿ ಹೆಬ್ಬಾಳದ ಮೇಲುಸೇತುವೆ ಮೂಲಕ ಹಾದು ಹೋಗುವಂತೆ ಮಾಡುವುದರಿಂದ ದಟ್ಟನೆ ಕಡಿಮೆ ಆಗಲಿದೆ’ ಎಂದು ಸ್ಥಳ ವೀಕ್ಷಣೆ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

‘ಕೆಳಗಿನ ರಸ್ತೆಗಳಿಂದ ಬರುವ ವಾಹನಗಳು ಮೇಲ್ಸೇತುವೆಗೆ ಹೋಗಲು ಬಿಡದಂತೆ ರಸ್ತೆ ವಿಭಜಕಗಳನ್ನು ಅಳವಡಿಸುವುದು. ಮೇಲ್ಸೇತುವೆ ಕೆಳಗೆ ಕೆ.ಆರ್‌.ಪುರದ ಕಡೆಗೆ ಹೋಗುವ ಬಸ್‌ಗಳು ನಿಲ್ಲುವುದರಿಂದ ತೊಂದರೆ ಆಗುತ್ತಿದೆ. ಅದನ್ನು ತಪ್ಪಿಸಲು ಫಲಕಗಳನ್ನು ಅಳವಡಿಸಲಾಗುವುದು’ ಎಂದರು.

ರೈಲ್ವೆ ಹಳಿ ದಾಟಲು ಪಾದಚಾರಿ ಕೆಳಸೇತುವೆ, ಬಿಡಿಎ ವತಿಯಿಂದ ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದರು.

ಕೆ.ಆರ್.ಪುರ(ಟಿನ್ ಪ್ಯಾಕ್ಟರಿ) ಜಂಕ್ಷನ್ ಬಳಿ ಬಸ್‌ಗಳು ರಸ್ತೆಯಲ್ಲೇ ನಿಲ್ಲುವುದನ್ನು ತಪ್ಪಿಸಲು ಪಕ್ಕದ ಜಾಗದಲ್ಲಿ ಬಸ್‌ ನಿಲುಗಡೆ ತಾಣ ನಿರ್ಮಿಸಲಾಗುವುದು. ಮೆಟ್ರೊ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್‌ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು.

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್, ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್, ಬಿಡಿಎ ಆಯುಕ್ತ ರಾಜೇಶ್‌ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಸಂಚಾರ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT