ಸೋಮವಾರ, ಸೆಪ್ಟೆಂಬರ್ 27, 2021
25 °C
ಹಂಚಿಕೆಯಾದ ನಿವೇಶನ ಕಳೆದುಕೊಂಡು ಗೊಂದಲದಲ್ಲಿದ್ದ ಫಲಾನುಭವಿಗಳು

ಅರ್ಕಾವತಿ ಬಡಾವಣೆ: 307 ಸಂತ್ರಸ್ತರಿಗೆ ಬದಲಿ ನಿವೇಶನ ಹಂಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನವನ್ನು ಡಿನೋಟಿಫಿಕೇಷನ್‌ ಹಾಗೂ ರೀಡೂ ಪ್ರಕ್ರಿಯೆಯಿಂದಾಗಿ ಕಳೆದುಕೊಂಡಿದ್ದ 307 ಫಲಾನುಭವಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬುಧವಾರ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿತು.

249 ಫಲಾನುಭವಿಗಳಿಗೆ ಅದೇ ಬಡಾವಣೆಯಲ್ಲಿ ಹಾಗೂ 58 ಮಂದಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ.

‘ಪ್ರಜಾವಾಣಿ’ ಇತ್ತೀಚೆಗೆ ಏರ್ಪಡಿಸಿದ್ದ ‘ಪೋನ್‌–ಇನ್‌’ ಕಾರ್ಯಕ್ರಮದಲ್ಲಿ ಅರ್ಕಾವತಿ ಬಡಾವಣೆಯ ಅನೇಕ ನಿವೇಶನದಾರರು ತಮಗೆ ಬದಲಿ ನಿವೇಶನ ಹಂಚಿಕೆ ಆಗದ ಬಗ್ಗೆ ಅಳಲು ತೋಡಿಕೊಂಡಿದ್ದರು. ಕೆಲವು ಸಂತ್ರಸ್ತರಂತೂ, ‘15 ವರ್ಷಗಳಿಂದ ನಿವೇಶನಕ್ಕಾಗಿ ಬಿಡಿಎ ಕಚೇರಿಗೆ ಅಲೆದಾಡುತ್ತಿದ್ದೇವೆ. ನಮ್ಮ ಜೀವಿತಾವಧಿಯ ಉಳಿತಾಯದ ಹಣವನ್ನು ಸೇರಿಸಿ, ಸಾಲ ಮಾಡಿ ಈ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದೆವು. ಬಿಡಿಎ ತಪ್ಪಿನಿಂದಾಗಿ ನಾವು ನಮ್ಮ ನಿವೇಶನದಲ್ಲಿ ಮನೆ ನಿರ್ಮಿಸಲು ಇನ್ನೂ ಸಾಧ್ಯವಾಗಿಲ್ಲ. ನಮಗೆ ಈಗ ವಯಸ್ಸಾಗಿದೆ. ಇನ್ನಷ್ಟು ದಿನ ಕಾಯಲು ನಮ್ಮಿಂದಾಗದು’ ಎಂದು ಪರಿಸ್ಥಿತಿ ವಿವರಿಸಿದ್ದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅರ್ಕಾವತಿ ಬಡಾವಣೆಯ ಸಂತ್ರಸ್ತರ ಅಳಲು ಆಲಿಸಿದ್ದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅದೇ ಬಡಾವಣೆಯಲ್ಲಿ ಶೀಘ್ರವೇ ಬದಲಿ ನಿವೇಶನ ಹಂಚಿಕೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಬಿಡಿಎ ಕೇಂದ್ರ ಕಚೇರಿಯಲ್ಲಿ ನಿವೇಶನದಾರರ ಸಮ್ಮುಖದಲ್ಲಿಯೇ ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆ ಮೂಲಕ ಬದಲಿ ನಿವೇಶನ ಹಂಚಿಕೆ ಮಾಡಿದರು.

ಪಾರದರ್ಶಕವಾಗಿ ನಿವೇಶನ ಹಂಚಿಕೆ: ‘ಸಾಮಾನ್ಯವಾಗಿ ನಿವೇಶನ ಹಂಚಿಕೆ ವೇಳೆ ದಲ್ಲಾಳಿಗಳು, ಮಧ್ಯವರ್ತಿಗಳ ಹಸ್ತಕ್ಷೇಪ ಇರುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಈ ಸಲ ಬದಲಿ ನಿವೇಶನ ಹಂಚಿಕೆಗೆ ಯಾರ ಹಸ್ತಕ್ಷೇಪಕ್ಕೂ ಅವಕಾಶ ಇಲ್ಲದ ರೀತಿ ಸಂಪೂರ್ಣ ಕಂಪ್ಯೂಟರೀಕೃತ ಆಯ್ಕೆ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಫಲಾನುಭವಿಗಳ ವಯಸ್ಸನ್ನು ಪರಿಗಣಿಸಿ, ಜ್ಯೇಷ್ಠತೆ ಆಧಾರದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ವಿಶ್ವನಾಥ್‌ ತಿಳಿಸಿದರು.  

‘ಬಡಾವಣೆಯಲ್ಲಿ ಎಷ್ಟು ನಿವೇಶನಗಳು ಲಭ್ಯವಾಗಲಿವೆ ಎಂದು ನೋಡಿಕೊಂಡು ಹಂತಹಂತವಾಗಿ ಇನ್ನಷ್ಟು ಮಂದಿಗೆ ಬದಲಿ ನಿವೇಶನಗಳನ್ನು ಇದೇ ಮಾದರಿಯಲ್ಲಿ ಹಂಚಿಕೆ ಮಾಡಲಾಗುತ್ತದೆ’ ಎಂದು ಅವರು ಭರವಸೆ ನೀಡಿದರು.

‘ಅರ್ಕಾವತಿಯಲ್ಲಿ ನಿವೇಶನ ಹಂಚಿಕೆಯಾಗಿ ನೋಂದಣಿ ಮಾಡಿಕೊಂಡು ನಾನಾ ಕಾರಣಗಳಿಂದಾಗಿ ನಿವೇಶನ ವಂಚಿತರಾಗಿರುವವರು ಬಯಸಿದರೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ನೀಡಲು ಬಿಡಿಎ ಸಿದ್ಧ. ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಕೋರಿ ಅರ್ಜಿ ಸಲ್ಲಿಸುವವರಿಗೆ 15 ರಿಂದ 20 ದಿನಗಳೊಳಗಾಗಿ ನಿವೇಶನವನ್ನು ಹಂಚಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಬಿಡಿಎ ಆಯುಕ್ತ ಎಂ.ಬಿ. ರಾಜೇಶ್ ಗೌಡ, ಇತರ ಅಧಿಕಾರಿಗಳು ಹಾಗೂ ಅರ್ಕಾವತಿ ನಿವೇಶನದಾರರು ಭಾಗವಹಿಸಿದರು.

-0-

ಅಂಕಿ ಅಂಶ

140

ಅರ್ಕಾವತಿ ಬಡಾವಣೆ ಸಂತ್ರಸ್ತರಿಗೆ ಹಂಚಿಕೆ ಮಾಡಿದ 20x30 ಚ.ಅಡಿ ವಿಸ್ತೀರ್ಣದ ಬದಲಿ ನಿವೇಶನಗಳು

85

30x40 ಚ.ಅಡಿ ವಿಸ್ತೀರ್ಣದ ನಿವೇಶನಗಳು

24

40x60 ಚ.ಅಡಿ ವಿಸ್ತೀರ್ಣದ ಬದಲಿ ನಿವೇಶನಗಳು 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು