ಭಾನುವಾರ, ಏಪ್ರಿಲ್ 18, 2021
25 °C
ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ ಪತ್ರ

ಬಿಡಿಎ ಆಯುಕ್ತ ಮಹದೇವ್‌ ಅವಧಿ ವಿಸ್ತರಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಎಚ್‌.ಆರ್‌.ಮಹದೇವ್‌ ಅವರ ಅವಧಿ ವಿಸ್ತರಣೆ ಆಗಲಿದೆಯೇ? ಇಂತಹದ್ದೊಂದು ಚರ್ಚೆ ಬಿಡಿಎ ಪ್ರಾಂಗಣದಲ್ಲಿ ಕೇಳಿ ಬರುತ್ತಿದೆ.

ಮಹದೇವ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಫೆ.19ರಂದು ಬರೆದಿದ್ದಾರೆ ಎನ್ನಲಾದ ಪತ್ರವೊಂದು ವಾಟ್ಸ್ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ.

‘ವಂಶ ವೃಕ್ಷದ ಪ್ರಕಾರ ಮತ್ತು ಜಾತಕ ಪತ್ರದಂತೆ ನನ್ನ ಜನ್ಮ ದಿನಾಂಕ 1962ರ ಸೆ 28. ಆದರೆ, ಸೇವಾ ದಾಖಲೆಗಳಲ್ಲಿ ಜನ್ಮ ದಿನಾಂಕವು 1961ರ ಏ. 8 ಎಂದು ನಮೂದಾಗಿದೆ. ಅದರ ಬದಲು 1962ರ ಸೆ.28 ಅನ್ನೇ ಜನ್ಮದಿನಾಂಕ ಎಂದು ಪರಿಗಣಿಸಿ ಸೇವೆಯಲ್ಲಿ ಮುಂದುವರಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಲ್ಲಿ 2020ರ ನ.7ರಂದು ಕೋರಿದ್ದೆ. ಅರ್ಜಿ ಸಲ್ಲಿಸಿದ ಮೂರು ತಿಂಗಳ ಬಳಿಕವೂ ನನ್ನ ಮನವಿ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಕೇಂದ್ರ ಆಡಳಿತ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಿ ಸೇವಾ ದಾಖಲೆಗಳಲ್ಲಿ 1962ರ ಸೆ.28 ಅನ್ನೇ ಜನ್ಮದಿನಾಂಕ ಎಂದು ನಮೂದಿಸಲು ಆದೇಶ ನೀಡುವಂತೆ ಕೋರಿದ್ದೆ. ಕೇಂದ್ರ ಆಡಳಿತ ನ್ಯಾಯಮಂಡಳಿಯು 2021ರ ಫೆ.01ರಂದು ನೀಡಿರುವ ಆದೇಶದಲ್ಲಿ ‘ನನ್ನ ಮನವಿಯನ್ನು ಪರಿಗಣಿಸಿ ಜನ್ಮ ದಿನಾಂಕವನ್ನು ಸೇವಾ ದಾಖಲೆಗಳಲ್ಲಿ ತಿದ್ದುಪಡಿಗೊಳಿಸಿ ಸೇವೆಯಲ್ಲಿ ಮುಂದುವರೆಸಲು ಸೂಕ್ತ ಆದೇಶ ನೀಡಬೇಕು’ ಎಂದು ನಿರ್ದೇಶನ ನೀಡಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಅವರಿಗೆ ನಿರ್ದೇಶನ ನೀಡಬೇಕು’ ಎಂಬುದಾಗಿ ಮುಖ್ಯಮಂತ್ರಿ ಅವರನ್ನು ಮಹದೇವ್‌ ಅವರು ಕೋರಿರುವ ಒಕ್ಕಣೆ ಆ ಪತ್ರದಲ್ಲಿದೆ.

‘ಕೇಂದ್ರ ಆಡಳಿತ ನ್ಯಾಯಮಂಡಳಿಯ ಆದೇಶದಂತೆ ಜನ್ಮದಿನಾಂಕದ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿದೆ’ ಎಂದು ಪತ್ರದಲ್ಲಿ ಮೇಲ್ಭಾಗದಲ್ಲಿ ಬರೆಯಲಾಗಿದ್ದು, ಅದರ ಕೆಳಗಡೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಹಿ ಹಾಗೂ ಮುದ್ರೆ ಇದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಎಚ್‌.ಆರ್‌.ಮಹದೇವ್‌, ‘ಸೇವಾ ಅವಧಿ ವಿಸ್ತರಿಸುವಂತೆ ನಾನು ಯಾವುದೇ ಕೋರಿಕೆ ಸಲ್ಲಿಸಿಲ್ಲ. ಇವೆಲ್ಲ ಊಹಾಪೋಹಗಳು’ ಎಂದರು.

‘ಮಹದೇವ್‌ ಅವರು ಜನ್ಮದಿನಾಂಕದಲ್ಲಿ ವ್ಯತ್ಯಯ ಆಗಿರುವ ಬಗ್ಗೆ ಪತ್ರ ಬರೆದಿದ್ದು ನಿಜ. ಜನ್ಮ ದಿನಾಂಕ ಬದಲಾವಣೆ ಮಾಡಿ ಸೇವಾ ಅವಧಿ  ವಿಸ್ತರಣೆಗೂ ಕೋರಿದ್ದಾರೆ. ಈ ಬಗ್ಗೆ ಸಚಿವ ಸಂಪುಟವೇ ತೀರ್ಮಾನ ಕೈಗೊಳ್ಳಲಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು