ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಖಾತಾ ಸೇವೆ ಆನ್‌ಲೈನ್‌ನಲ್ಲಿ ಲಭ್ಯ

ಕಚೇರಿ ಅಲೆದಾಟಕ್ಕೆ ಕೊನೆಗೂ ಮುಕ್ತಿ * ಸೇವಾ ಸಿಂಧು ಮೂಲಕ ಇ–ಖಾತಾ ಪಡೆಯಲು ಅವಕಾಶ
Last Updated 20 ಜೂನ್ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮಂಜೂರಾದ ನಿವೇಶನದ ಅಥವಾ ಫ್ಲ್ಯಾಟ್‌ನ ಖಾತಾ ಪಡೆಯಲು ಕಚೇರಿಗೆ ಅಲೆದು ಸುಸ್ತಾಗಿದ್ದೀರಾ? ಎಲ್ಲ ದಾಖಲೆಗಳನ್ನು ಸಲ್ಲಿಸಿದ ಬಳಿಕವೂ ಖಾತಾ ಸಿಗುತ್ತಿಲ್ಲವೇ? ಇನ್ನು ಮುಂದೆ ಈ ಕಿರಿಕಿರಿ ಅನುಭವಿಸಬೇಕಾಗಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಈ ಸೇವೆಯನ್ನೂ ಪಡೆಯಬಹುದು.

ಬಿಡಿಎ ಕೂಡಾ ಇತ್ತೀಚೆಗೆ ಇ– ಖಾತಾ ಸೇವೆಯನ್ನು ಆರಂಭಿಸಿದೆ. ನಿವೇಶನಗಳ ಮತ್ತು ಫ್ಲ್ಯಾಟ್‌ಗಳ ಹೊಸ ಖಾತೆ ಹಾಗೂ ದಾನಪತ್ರ, ಮರಣ ಪ್ರಮಾಣಪತ್ರ ಅಥವಾ ಕ್ರಯಪತ್ರದ ಆಧಾರದಲ್ಲಿ ಖಾತಾ ಬದಲಾವಣೆ ಸೇವೆ ಈಗ ಆನ್‌ಲೈನ್‌ನಲ್ಲೂ ಲಭ್ಯ.

‘ಸ್ವಾಧೀನ ಪ್ರಮಾಣಪತ್ರವನ್ನು (ಪೊಸಿಷನ್‌ ಸರ್ಟಿಫಿಕೇಟ್‌) ಆನ್‌ಲೈನ್‌ ಮೂಲಕ ಪಡೆಯಲು 2018ರ ಅಕ್ಟೋಬರ್‌ನಿಂದಲೇ ಅವಕಾಶ ಕಲ್ಪಿಸಿದ್ದೆವು. ಖಾತಾ ಸಂಬಂಧಿ ಸೇವೆಗಳನ್ನೂ ಆನ್‌ಲೈನ್‌ ಮೂಲಕ ನೀಡಲು ಇತ್ತೀಚೆಗೆ ಆರಂಭಿಸಿದ್ದೇವೆ’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಸೇವೆ ಪಡೆಯುವುದು ಹೇಗೆ: ‘ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಬಿಡಿಎ ಸೇವೆಗಳನ್ನೂ ಅಳವಡಿಸಲಾಗಿದೆ. ಅದರಲ್ಲಿ ಹೆಸರನ್ನು ನೋಂದಾಯಿಸಿ ಟೋಕನ್‌ ಸಂಖ್ಯೆ ಪಡೆದು ಅರ್ಜಿ ಸಲ್ಲಿಸಬಹುದು. ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು ಎಂಬ ವಿವರಗಳು ಸೇವಾ ಸಿಂಧು ಪೋರ್ಟಲ್‌ನಲ್ಲೇ ಇವೆ. ಅವುಗಳನ್ನೂಅಪ್‌ಲೋಡ್‌ ಮಾಡಬೇಕು. ಅರ್ಜಿಯು ಬಿಡಿಎ ಕಂದಾಯ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಅವರು ಅದನ್ನು ಸಂಬಂಧಪಟ್ಟ ಕೇಸ್‌ ವರ್ಕರ್‌ಗೆ (ಕಂದಾಯ ನಿರೀಕ್ಷಕರಿಗೆ) ಕಳುಹಿಸು
ತ್ತಾರೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ವಿವರಿಸಿದರು.

‘ಅರ್ಜಿ ಹಾಗೂ ಅದರ ಜೊತೆ ಸಲ್ಲಿಸಿರುವ ದಾಖಲೆಗಳನ್ನು ಕಂದಾಯ ನಿರೀಕ್ಷಕರು ಪರಿಶೀಲಿಸುತ್ತಾರೆ. ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ನೀಡಿರದಿದ್ದರೆ ಅಥವಾ ಅಪ್‌ಲೋಡ್‌ ಆಗಿರುವ ದಾಖಲೆ ಸರಿಯಾಗಿ ಸ್ಕ್ಯಾನ್‌ ಆಗಿರದಿದ್ದರೆ ಅರ್ಜಿಯನ್ನು ತಿರಸ್ಕರಿಸುತ್ತಾರೆ. ಎಲ್ಲ ದಾಖಲೆಗಳೂ ಸರಿ ಇದ್ದರೆ ಅರ್ಜಿಯನ್ನು ಸೂಪರಿಂಟೆಂಡೆಂಟ್‌ ಕಳುಹಿಸುತ್ತಾರೆ. ಅವರು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಕಂದಾಯ ಅಧಿಕಾರಿಗೆ ಕಳುಹಿಸುತ್ತಾರೆ.’

‘ಕಂದಾಯ ಅಧಿಕಾರಿ ಶುಲ್ಕ ನಿಗದಿಪಡಿಸುತ್ತಾರೆ. ಒಂದು ವೇಳೆ ಅರ್ಜಿದಾರರು ಆ ವರ್ಷದ ಆಸ್ತಿ ತೆರಿಗೆ ಪಾವತಿಸಿರದಿದ್ದರೆ, ಅದನ್ನೂ ಸೇರಿಸಿ ಶುಲ್ಕ ನಿಗದಿಪಡಿಸಲಾಗುತ್ತದೆ. ಶುಲ್ಕದ ಕುರಿತ ಮಾಹಿತಿ ಅರ್ಜಿದಾರರಿಗೆ ರವಾನೆಯಾಗುತ್ತದೆ. ಅವರು ಆನ್‌ಲೈನ್‌ ಮೂಲಕ ಪಾವತಿ ಮಾಡಿದ ಬಳಿಕ ಕಂದಾಯ ಅಧಿಕಾರಿ ಖಾತಾ ಪ್ರಮಾಣಪತ್ರ ಒದಗಿಸುತ್ತಾರೆ’ ಎಂದರು.

‘ಈ ಹಿಂದೆ ಕಂದಾಯ ಅಧಿಕಾರಿಗಳು ಅನಗತ್ಯ ದಾಖಲೆಗಳನ್ನು ಕೇಳಿ ಅರ್ಜಿದಾರರನ್ನು ಸತಾಯಿಸುತ್ತಿದ್ದರು. ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದ್ದರು. ಇಂತಹ ಭ್ರಷ್ಟಾಚಾರಗಳಿಗೆ ಇ–ಖಾತಾ ಸೇವೆಯಿಂದ ಕಡಿವಾಣ ಬೀಳಲಿದೆ’ ಎಂದು ಅವರು ತಿಳಿಸಿದರು.

1,786 ಸ್ವಾಧೀನ ಪ್ರಮಾಣಪತ್ರ ವಿತರಣೆ
2018ರ ಅಕ್ಟೋಬರ್‌ನಿಂದ ಸ್ವಾಧೀನ ಪ್ರಮಾಣಪತ್ರವನ್ನುಆನ್‌ಲೈನ್‌ನಲ್ಲಿ ವಿತರಿಸಲು ಆರಂಭಿಸಿದ ಬಿಡಿಎ, ಇದುವರೆಗೆ ಒಟ್ಟು 1,786 ಅರ್ಜಿಗಳನ್ನು ವಿಲೇ ಮಾಡಿದೆ.

‘ಇದುವರೆಗೆ ನಿವೇಶನಗಳ ಸ್ವಾಧೀನ ಪ್ರಮಾಣಪತ್ರಕ್ಕೆ ಸಂಬಂಧಿಸಿ 1,628 ಅರ್ಜಿಗಳನ್ನು ಹಾಗೂ ಫ್ಲ್ಯಾಟ್‌ಗಳಿಗೆ ಸಂಬಂಧಿಸಿ 158 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿದ್ದೇವೆ. ಸಂಬಂಧಪಟ್ಟ ಉಪ ಕಾರ್ಯದರ್ಶಿ ಈ ಅರ್ಜಿಗಳನ್ನು ಏಳು ದಿನಗಳ ಒಳಗೆ ವಿಲೇ ಮಾಡಬೇಕು. ಬಹುತೇಕ ಅರ್ಜಿಗಳು ನಿಗದಿತ ಗಡುವಿನ ಒಳಗೆ ವಿಲೇವಾರಿಯಾಗಿವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘15 ದಿನಗಳ ಒಳಗೆ ಸೇವೆ’
‘ಇ–ಖಾತಾ ಪಡೆಯಲು ಸಕಾಲ ಯೋಜನೆ ಅಡಿ 15 ದಿನಗಳ ಗಡುವು ನಿಗದಿಪಡಿಸಲಾಗಿದೆ. ಅಷ್ಟರೊಳಗೆ ಇ–ಖಾತಾ ಸಿಗದಿದ್ದರೆ ಅರ್ಜಿದಾರರು ಮೇಲ್ಮನವಿ ಸಲ್ಲಿಸಬಹುದು. ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡಿದ್ದರೆ ಅದಕ್ಕೆ ದಂಡ ತೆರಬೇಕಾಗುತ್ತದೆ. ಸೇವೆ ವಿಳಂಬ ಆಗಿರುವ ದಿನಗಳ ಲೆಕ್ಕದಲ್ಲಿ ದಂಡವನ್ನು ಲೆಕ್ಕ ಹಾಕಲಾಗುತ್ತದೆ’ ಎಂದು ಬಿಡಿಎ ಕಾರ್ಯದರ್ಶಿ ವಿವರಿಸಿದರು.

‘ಕಂದಾಯ ನಿರೀಕ್ಷಕರಿಗೆ ಕಂಪ್ಯೂಟರ್‌ ಜ್ಞಾನ ಅಷ್ಟಾಗಿ ಇರಲಿಲ್ಲ. ತರಬೇತಿ ನೀಡಿದ್ದು, ಅವರು ಈಗಷ್ಟೇ ಕಂಪ್ಯೂಟರ್‌ ಕಲಿಯುತ್ತಿದ್ದಾರೆ. ಹಾಗಾಗಿ ಇ–ಖಾತಾ ಸೇವೆ ನೀಡುವಾಗ ಸ್ವಲ್ಪ ವಿಳಂಬವಾಗುತ್ತಿದೆ. ಕ್ರಮೇಣ ನಿಗದಿತ ದಿನಗಳ ಒಳಗೇ ಈ ಸೇವೆ ಲಭ್ಯವಾಗಲಿದೆ’ ಎಂದರು.

ಅಂಕಿ ಅಂಶ

274 - ಹೊಸ ಖಾತೆಯನ್ನು ಆನ್‌ಲೈನ್‌ ಮೂಲಕ ಪಡೆದವರ ಸಂಖ್ಯೆ
249- ಆನ್‌ಲೈನ್‌ ಮೂಲಕ ಖಾತೆ ಬದಲಾವಣೆ ಸೇವೆ ಪಡೆದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT