ಬುಧವಾರ, ಮೇ 25, 2022
29 °C

ಕೋವಿಡ್‌ ಸಂಕಷ್ಟ: ನಿರ್ವಹಣೆ ಶುಲ್ಕದ ಜತೆ ‘ದಂಡನೆ’

ಪ್ರವೀಣ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಸಂದರ್ಭದಲ್ಲಿ ನಗರದ ಜನ ಸಂಕಷ್ಟಕ್ಕೆ ಸಿಲುಕಿದ್ದರೆ, ಇನ್ನೊಂದೆಡೆ ಶುಲ್ಕ ಹೆಚ್ಚಳದ ಬಿಸಿಯೂ ಅವರಿಗೆ ತಟ್ಟಿದೆ. ಅದರ ಜೊತೆಗೆ ‘ನಿರ್ವಹಣಾ ಶುಲ್ಕ’ದ ಹೆಸರಿನಲ್ಲಿ ಹೊಸ ಹೊರೆಯನ್ನೂ ಹೊರಬೇಕಾಗಿದೆ.

ನಗರದ ವಸತಿ ಪ್ರದೇಶಗಳಲ್ಲಿ ಬಹುತೇಕವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ ಬಡಾವಣೆಗಳು. ಇಲ್ಲಿನ ನಿವೇಶನದಾರರಿಗೆ, ಅರ್ಜಿ ಶುಲ್ಕದಿಂದ ಖಾತಾ ಶುಲ್ಕದವರೆಗೆ ಹತ್ತು ಹಲವು ಶುಲ್ಕಗಳನ್ನು ಬಿಡಿಎ ಹೆಚ್ಚಳ ಮಾಡಿದೆ. ವಿವಿಧ ಅಳತೆಗಳ ನಿವೇಶನಗಳ ಖಾತಾ ಶುಲ್ಕ 2020ಕ್ಕಿಂತ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಅರ್ಜಿ ಶುಲ್ಕ ಹಾಗೂ ನೋಂದಣಿ ಶುಲ್ಕಗಳನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ.

ಈ ಬಡಾವಣೆಗಳಲ್ಲಿ ನಿವೇಶನ ಮಂಜೂರಾಗಿ ಐದು ವರ್ಷ ಕಳೆದ ಬಳಿಕವೂ ವಸತಿ ನಿರ್ಮಿಸದವರ ಖಾಲಿ ನಿವೇಶನಗಳಿಗೆ ವಿಧಿಸುವ ದಂಡನಾ ಶುಲ್ಕವನ್ನೂ ಶೇ 50ರಷ್ಟು ಹೆಚ್ಚಳ ಮಾಡಲಾಗಿದೆ. ನಿರ್ವಹಣಾ ಶುಲ್ಕ ಹೆಸರಿನಲ್ಲಿ ಬಿಡಿಎ ವಿವಿಧ ಅಳತೆಯ ನಿವೇಶನಗಳಿಗೆ ಪ್ರತಿ ತಿಂಗಳಿಗೆ ₹ 100ರಿಂದ ₹300ರವರೆಗೆ ವಸೂಲಿ ಮಾಡಲು ಶುರುಮಾಡಿದೆ.

‘ನಾಲ್ಕೈದು ವರ್ಷಗಳಿಂದ ಯಾವುದೇ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹಾಗಾಗಿ ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು’ ಎಂಬುದು ಬಿಡಿಎ ಸಮರ್ಥನೆ.

ಶುಲ್ಕ ಹೆಚ್ಚಳ ಮಾಡಿದ್ದಕ್ಕೆ ಬಿಡಿಎ ಬಡಾವಣೆಗಳ ನಿವೇಶನದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ‘ಬಿಡಿಎ ನಮಗೆ ನೀಡುವ ಸೇವೆಯ ಗುಣಮಟ್ಟ ಅಷ್ಟರಲ್ಲೇ ಇದೆ. ಈಗಲೂ ಸರಿಯಾಗಿ ಮೂಲಸೌಕರ್ಯಗಳನ್ನೂ ಕಲ್ಪಿಸಿಲ್ಲ. ಆದರೂ ಶುಲ್ಕ ಹೆಚ್ಚಳದ ಹೊರೆ ಹೊರಿಸುತ್ತಿರುವುದು ಅನ್ಯಾಯ’ ಎಂದು ದೂರುತ್ತಾರೆ ನಿವೇಶನದಾರರು.

*
ಬಿಡಿಎಯು ಅರ್ಕಾವತಿ ಬಡಾವಣೆಗಂತೂ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಆದರೆ ಈ ವರ್ಷದಿಂದ ನಿರ್ವಹಣೆ ಶುಲ್ಕದ ಹೆಸರಿನಲ್ಲಿ ಆಸ್ತಿ ತೆರಿಗೆ ಜೊತೆಗೆ ವರ್ಷಕ್ಕೆ ₹ 1800 ವಸೂಲಿ ಮಾಡುತ್ತಿದೆ. ಖಾಲಿ ನಿವೇಶನಕ್ಕೆ ದುಬಾರಿ ದಂಡ ವಿಧಿಸುತ್ತಿದೆ. ನಮ್ಮ ನಿವೇಶನಕ್ಕೆ ಸಂಪರ್ಕ ರಸ್ತೆಯೂ ಇಲ್ಲ. ಕೋವಿಡ್‌ ಸಂಕಷ್ಟ ಕಾಲದಲ್ಲಿ ನಮಗೆ ಮತ್ತು ಹೊರೆ ಹೊರಿಸಿದ್ದಾರೆ. ಹೊರೆ ತಗ್ಗಿಸುವಂತೆ ಮಾಡಿದ ಮನವಿಗೆ ಬಿಡಿಎ ಸ್ಪಂದಿಸಿಲ್.
-ಜಿ.ಶಿವಪ್ರಕಾಶ್‌, ಅರ್ಕಾವತಿ ಬಡಾವಣೆ ನಿವೇಶನದಾರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು