ಶುಕ್ರವಾರ, ಜುಲೈ 1, 2022
23 °C
ಸುಧಾರಿತ ತಂತ್ರಾಂಶ ಬಿಡುಗಡೆ ಮಾಡಿದ ಅರವಿಂದ ಲಿಂಬಾವಳಿ * ಆಸ್ಪತ್ರೆಗೆ ದಾಖಲಾಗಲು ಸರದಿಗಾಗಿ ಕಾಯಬೇಕು

ಕೋವಿಡ್‌: ಚಿಕಿತ್ಸಾ ನಿರ್ಧಾರ ಕೇಂದ್ರಗಳಿಂದಲೇ ಹಾಸಿಗೆ ಕಾಯ್ದಿರಿಸಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನಿರ್ಧಾರ ಕೇಂದ್ರಗಳ (ಟ್ರಯಾಜಿಂಗ್‌ ಸೆಂಟರ್‌) ಮೂಲಕವೇ  ಆಸ್ಪತ್ರೆಗಳಲ್ಲಿ  ಹಾಸಿಗೆ  ಕಾಯ್ದಿರಿಸಲು ಬಿಬಿಎಂಪಿಯ ‘ಕೋವಿಡ್ ಆಸ್ಪತ್ರೆಗಳಲ್ಲಿ ಹಾಸಿಗೆ ನಿರ್ವಹಣೆಯ ಕೇಂದ್ರೀಕೃತ ವ್ಯವಸ್ಥೆ’ಯ (ಸಿಎಚ್‌ಬಿಎಂಎಸ್‌) ತಂತ್ರಾಂಶದಲ್ಲಿ ಸುಧಾರಣೆ ತರಲಾಗಿದೆ. ಸುಧಾರಿತ ತಂತ್ರಾಂಶವನ್ನು ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಗುರುವಾರ ಬಿಡುಗಡೆ ಮಾಡಿದರು.

‘ಚಿಕಿತ್ಸಾ ನಿರ್ಧಾರ ಕೇಂದ್ರಗಳಿಗೆ ಬರುವ ಕೋವಿಡ್ ಸೊಂಕಿತರಿಗೆ ಇದುವರೆಗೆ ವಲಯ ನಿಯಂತ್ರಣ ಕೊಠಡಿ ಹಾಗೂ ಬಿಬಿಎಂಪಿಯ ಕೇಂದ್ರ ವಾರ್ ರೂಂನ ಮೂಲಕ ಹಾಸಿಗೆ ಕಾಯ್ದಿರಿಸಲಾಗುತ್ತಿತ್ತು. ಇನ್ನು ರೋಗಿಗಳ ಆರೋಗ್ಯ ಸ್ಥಿತಿ ಆಧರಿಸಿ ಸರದಿ ಪ್ರಕಾರ ಆಸ್ಪತ್ರೆಯಲ್ಲಿ ಹಾಸಿಗೆ ಕಾಯ್ದಿರಿಸಲಾಗುತ್ತದೆ. ತೀವ್ರ ನಿಗಾ ಘಟಕಗಳಲ್ಲಿ ತುರ್ತಾಗಿ ಹಾಸಿಗೆ ವ್ಯವಸ್ಥೆ ಆಗಬೇಕಿರುವವರಿಗೆ ದೂರವಾಣಿ ಮೂಲಕವೇ ಅವರ ದೇಹಸ್ಥಿತಿಯ ವಿವರ ಪಡೆದು ಸೂಕ್ತ ಹಾಸಿಗೆ ಕಾಯ್ದಿರಿಸಲಾಗುತ್ತದೆ’ ಎಂದು ಲಿಂಬಾವಳಿ ಮಾಹಿತಿ ನೀಡಿದರು. 

‘ಸಿಎಚ್‌ಬಿಎಂಎಸ್‌ನಲ್ಲಿ ಚಿಕಿತ್ಸೆಯ ಸರದಿ ನಿರ್ಧಾರ ಘಟಕವನ್ನು ಅಳವಡಿಸಲಾಗಿದೆ. ಇದನ್ನು ಎಂಟು ವಲಯಗಳ 16 ಚಿಕಿತ್ಸೆ ನಿರ್ಧಾರ ಕೇಂದ್ರಗಳಲ್ಲಿ ಬಳಸಬಹುದು. ಈ ಕೇಂದ್ರಗಳಿಗೆ ನೇರವಾಗಿ ಬರುವ ಕೊರೋನಾ ಸೋಂಕಿತರ ದೈಹಿಕ ತಪಾಸಣೆ ನಡೆಸಿ ಅಗತ್ಯ ಬಿದ್ದರೆ ಅಲ್ಲೇ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಸಲಾಗುತ್ತದೆ. ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಈ ಕೇಂದ್ರಗಳಿಗೆ ಆಂಬುಲೆನ್ಸ್‌ಗಳನ್ನೂ ಒದಗಿಸಲಾಗಿದೆ. ಸೋಂಕಿತರು ಈ ಕೇಂದ್ರಗಳಿಗೆ ಬರಲು ಸಾಧ್ಯವಾಗದಿದ್ದರೆ ಆಂಬುಲೆನ್ಸ್‌ ಅವರು ಇರುವಲ್ಲಿಗೇ ಹೋಗಲಿದೆ. ಈ ಆಂಬುಲೆನ್ಸ್‌ಗಳನ್ನೇ ಚಿಕಿತ್ಸಾ ನಿರ್ಧಾರ ಘಟಕಗಳಂತೆ ಬಳಸಲಾಗುತ್ತದೆ’ ಎಂದು ಅವರು ವಿವರಿಸಿದರು.

‘ಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಪಾಳಿಯಲ್ಲಿ ತಲಾ ಇಬ್ಬರು ವೈದ್ಯರು ಮತ್ತು ಇಬ್ಬರು ಅರೆವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಎಲ್ಲಾ ಕೇಂದ್ರಗಳನ್ನೂ ಆಮ್ಲಜನಕ ಪೂರೈಕೆ ಸೌಲಭ್ಯಗಳಿರುವ ಕೋವಿಡ್ ಆರೈಕೆ ಕೇಂದ್ರದ ಜೊತೆ ಜೋಡಿಸಲಾಗಿರುತ್ತದೆ. ಈ ಕೇಂದ್ರಗಳ ಮೂಲಕ ಹಾಸಿಗೆ ಕಾಯ್ದಿರಿಸಲು 26 ಆಸ್ಪತ್ರೆಗಳನ್ನು ಗೊತ್ತುಪಡಿಸಲಾಗಿದೆ’ ಎಂದು ತಿಳಿಸಿದರು.

‘ಹೊಸ ವ್ಯವಸ್ಥೆಯನ್ನು ಮೂರು ದಿನಗಳ ಕಾಲ ಪರೀಕ್ಷಿಸಲಾಗಿದೆ. ಇವುಗಳಲ್ಲಿ 936 ರೋಗಿಗಳನ್ನು ದೈಹಿಕ ತಪಾಸಣೆಗೆ ಒಳಪಡಿಸಲಾಗಿದೆ. 678 ರೋಗಿಗಳಿಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಆರೈಕೆಗೊಳಗಾಗುವಂತೆ ಸಲಹೆ ನೀಡಲಾಗಿದೆ. 186 ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ಮತ್ತು 72 ರೋಗಿಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಎಚ್‌ಡಿಯು, ಐಸಿಯು ಘಟಕಗಳಲ್ಲಿ ದಾಖಲಿಸಲಾಗಿದೆ’ ಎಂದು ಅವರು ವಿವರ ನೀಡಿದರು.

ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ರಾಜ್ಯ ಕೋವಿಡ್ ವಾರ್ ರೂಂಗಳ ಉಸ್ತುವಾರಿ ವಿ.ಪೊನ್ನುರಾಜ್ , ಬಿಬಿಎಂಪಿ ವಾರ್ ರೂಂನ ನೋಡಲ್ ಅಧಿಕಾರಿ ತುಷಾರ್ ಗಿರಿನಾಥ್, ಕುಮಾರ್ ಪುಷ್ಕರ್, ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ಡಾ.ಭಾಸ್ಕರ್  ಉಪಸ್ಥಿತರಿದ್ದರು.

‘ಆಸ್ಪತ್ರೆಗೆ ದಾಖಲಾಗಲು ದೈಹಿಕ ತಪಾಸಣೆ ಕಡ್ಡಾಯ’

‘ಆಸ್ಪತ್ರೆಗಳಿಗೆ ದಾಖಲಾಗಲು ಬಯಸುವ ಎಲ್ಲ ರೋಗಿಗಳನ್ನೂ ಕಡ್ಡಾಯ ದೈಹಿಕ ತಪಾಸಣೆಗೆ ಒಳಪಡಿಸುವ ಚಿಂತನೆ ಇದೆ. ಈ  ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಈ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ’ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು