ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮಳೆ ಮತ್ತು ಗಾಳಿಯಿಂದ ಬೀಳುವ ಮರ, ಕೊಂಬೆ ತೆರವಿಗೆ 28 ತಂಡ

Published : 30 ಆಗಸ್ಟ್ 2024, 15:53 IST
Last Updated : 30 ಆಗಸ್ಟ್ 2024, 15:53 IST
ಫಾಲೋ ಮಾಡಿ
Comments

ಬೆಂಗಳೂರು: ಮಳೆ ಮತ್ತು ಗಾಳಿಯಿಂದ ಬೀಳುವ ಮರಗಳು, ರೆಂಬೆ–ಕೊಂಬೆಗಳನ್ನು ತೆರವುಗೊಳಿಸಲು ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು 28 ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ‘ಮರಗಳ ವ್ಯವಸ್ಥಿತ ನಿರ್ವಹಣಾ ತಂಡ’ ರಚಿಸಲಾಗಿದೆ.

ಮಳೆಗಾಲದಲ್ಲಿ ಗಾಳಿಯು ಹೆಚ್ಚಾಗಿದ್ದು, ನಗರದಾದ್ಯಂತ ಮರಗಳು, ರೆಂಬೆ ಕೊಂಬೆಗಳು ಧರೆಗುರುಳುತ್ತಿವೆ.  ಇದರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನಗಳು ಸೇರಿದಂತೆ ಆಸ್ತಿಗಳಿಗೂ ಹಾನಿಯಾಗುತ್ತಿದೆ. ಹೀಗಾಗಿ ಮರಗಳ ವ್ಯವಸ್ಥಿತ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ರಚಿಸಲಾಗಿರುವ ‘ಮರಗಳ ವ್ಯವಸ್ಥಿತ ನಿರ್ವಹಣೆ ತಂಡ’ದಲ್ಲಿ, ಮರ ಹಾಗೂ ರೆಂಬೆಗಳನ್ನು ತೆರವುಗೊಳಿಸುವ ಉಪಕರಣಗಳೊಂದಿಗೆ ನೈಪುಣ್ಯ ಹೊಂದಿರುವ ಒಟ್ಟು ಎಂಟು ಸಿಬ್ಬಂದಿ ಇರುತ್ತಾರೆ. ಮರ, ಕೊಂಬೆಗಳ ತ್ಯಾಜ್ಯವನ್ನು ಸಾಗಿಸಲು ಚಾಲಕಸಹಿತ ಒಂದು ದೊಡ್ಡ ವಾಹನ ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.

ಸಾರ್ವಜನಿಕರು ಸಹಾಯ ಆ್ಯಪ್‌, ನಿಯಂತ್ರಣ ಕೊಠಡಿ ಅಥವಾ ನೇರವಾಗಿ ಬಿಬಿಎಂಪಿ ಕಚೇರಿಗಳಿಗೆ ದೂರುಗಳನ್ನು ನೀಡಬಹುದು. ವಲಯದ ಜಂಟಿ ಆಯುಕ್ತರು, ವಲಯ ಮಟ್ಟದ ಅರಣ್ಯಾಧಿಕಾರಿಗಳು ಹಾಗೂ ಕೇಂದ್ರ ಕಚೇರಿಯ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸುವಂತೆ ತಂಡಗಳು ಕಾರ್ಯನಿರ್ವಹಿಸುತ್ತವೆ. ಪ್ರತಿ ದಿನ ಮಾಡಿದ ಕೆಲಸಗಳ ಕುರಿತು ದಾಖಲೆ ನಿರ್ವಹಿಸಬೇಕು. ತಂಡಗಳ ವಿರುದ್ಧ ಯಾವುದೇ ದೂರುಗಳು ಬಂದಲ್ಲಿ ವಲಯ ಮಟ್ಟದ ಅರಣ್ಯಾಧಿಕಾರಿಗಳೇ ನೇರ ಜವಾಬ್ದಾರರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಸ್ತೆ, ಪಾದಚಾರಿ ಮಾರ್ಗದಲ್ಲಿ ಮರ, ರೆಂಬೆ– ಕೊಂಬೆಗಳನ್ನು ಹಾಕಿರುವುದರಿಂದ ಉತ್ಪತ್ತಿಯಾಗಿರುವ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು ಎಂದೂ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT