ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಮಾನ ನಿಲ್ದಾಣಕ್ಕೆ ದಾರಿ: 4 ಮಾರ್ಗೋಪಾಯ

ಮೇಲ್ಸೇತುವೆ ಬದಲು ಸಾರ್ವಜನಿಕ ಸಾರಿಗೆ ಬಲಗೊಳಿಸಲು ಸಿಟಿಜನ್ ಫಾರ್ ಸಿಟಿಜನ್ ಸಂಸ್ಥೆ ಸಲಹೆ
Last Updated 23 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದ ತನಕ ಸಿಗ್ನಲ್‌ಮುಕ್ತ ಮಾಡುವ ಮತ್ತೊಂದು ಪ್ರಸ್ತಾವನೆ ಯನ್ನು ಬಿಬಿಎಂಪಿ ಸಿದ್ಧಪಡಿಸಿದೆ. ಮೇಲ್ಸೇತುವೆ ಕಟ್ಟುವ ಬದಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸುವುದು ಸೂಕ್ತ ಎಂದು ಸಿಟಿಜನ್ ಫಾರ್ ಸಿಟಿಜನ್ ಸಂಸ್ಥೆ ಸಲಹೆ ನೀಡಿದೆ.

ಬಸವೇಶ್ವರ ವೃತ್ತದಿಂದ ಹೆಬ್ಬಾಳ ತನಕ 7 ಕಿಲೋ ಮೀಟರ್ ಉದ್ದದ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಯೋಜನೆಯನ್ನು 2016ರಲ್ಲಿ ಪ್ರಸ್ತಾಪಿಸಿ ಸಾರ್ವಜನಿಕರ ವಿರೋಧ ವ್ಯಕ್ತವಾದ ಬಳಿಕ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. ಈಗ ಯೋಜನೆಯನ್ನು ಕೊಂಚ ಬದಲಿಸಿ ಕಾರ್ಯಗತಗೊಳಿಸಲು ಕಾರ್ಯಸಾಧ್ಯತೆ ವರದಿ ಹಾಗೂ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ಬಿಬಿಎಂಪಿ ಟೆಂಡರ್‌ ಕರೆದಿದೆ.

ವಿಮಾನ ನಿಲ್ದಾಣ ಮಾರ್ಗಕ್ಕೆ ರಸ್ತೆಯನ್ನೇ ಅವಲಂಬಿಸದೆ ರೈಲು, ಉಪನಗರ ರೈಲು, ಮೆಟ್ರೊ ರೈಲುಗಳು ಆದಷ್ಟು ಬೇಗ ಜನರಿಗೆ ಲಭ್ಯವಾಗುವಂತೆ ಮಾಡಬೇಕು ಎಂಬುದು ಸಿಟಿಜನ್ ಫಾರ್ ಸಿಟಿಜನ್‌ನ ಸಂಸ್ಥಾಪಕ ರಾಜ ಕುಮಾರ್ ದುಗಾರ್ ಅವರ ಸಲಹೆ. ಈ ಸಂಬಂಧ ವರದಿಯೊಂದನ್ನು ಅವರ ತಂಡ ಸಿದ್ಧಪಡಿಸಿದೆ.

‘ಈ ಮಾರ್ಗದಲ್ಲಿ ಪ್ರಮುಖವಾಗಿ ನಾಲ್ಕು ಕಡೆ ಸಂಚಾರ ದಟ್ಟಣೆ ಕಾಣಿಸುತ್ತಿದೆ. ಹೈಗ್ರೌಂಡ್ಸ್‌ ಜಂಕ್ಷನ್‌, ಬಿಡಿಎ ಕಚೇರಿ ಎದುರಿನ ಮೇಲ್ಸೇತುವೆ, ಕಾವೇರಿ ಚಿತ್ರಮಂದಿರ ಬಳಿಯ ವೃತ್ತ, ಮೇಖ್ರಿ ವೃತ್ತದಲ್ಲಿ ವಾಹನ ದಟ್ಟಣೆ ಕಾಣಿಸುತ್ತಿದೆ. ನಾಲ್ಕೂ ಕಡೆಗಳಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಸಣ್ಣ–ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ವಾಹನ ಸಂಚಾರ ಸುಗಮ ಆಗಲಿದೆ. ಈ ಬಗ್ಗೆ ಅಧ್ಯಯನ ನಡೆಸಿದ್ದೇವೆ’ ಎಂದು ಅವರು ಹೇಳಿದರು.

‘ಹೈಗ್ರೌಂಡ್ಸ್‌ ಜಂಕ್ಷನ್‌ನಲ್ಲಿ ಬಸವೇಶ್ವರ ವೃತ್ತದ ಕಡೆಯಿಂದ ಬರುವ ವಾಹನಗಳು ಸ್ಯಾಂಕಿ ರಸ್ತೆಗೆ ಸಿಗ್ನಲ್‌ ರಹಿತವಾಗಿ ಹೋಗಲು ಅವಕಾಶ ಇದ್ದರೂ ಸಾಧ್ಯವಾಗುತ್ತಿಲ್ಲ. ಅರಮನೆ ರಸ್ತೆಗೆ ಹೋಗುವ ವಾಹನಗಳು ನಿಲ್ಲುವುದರಿಂದ ಬೇರೆ ವಾಹನಗಳೂ ನಿಲ್ಲಬೇಕಾಗಿದೆ. ಇನ್ನು ಸ್ಯಾಂಕಿ ರಸ್ತೆಯಿಂದ ಬರುವ ವಾಹನಗಳು ವೃತ್ತದಲ್ಲಿ ಐಲ್ಯಾಂಡ್ (ಚಿಕ್ಕ ಉದ್ಯಾನ) ಇರುವುದರಿಂದ ನಿಧಾನವಾಗಿ ಚಲಿಸಿ ಮುಂದೆ ಹೋಗುತ್ತಿವೆ. ಈ ವೃತ್ತದ ಮಧ್ಯದಲ್ಲಿರುವ ಉದ್ಯಾನವನ್ನು ತೆರವು ಗೊಳಿಸಿ ಸಿಗ್ನಲ್‌ಗಳನ್ನಷ್ಟೇ ಇರಿಸಿದರೆ ದಟ್ಟಣೆ ಕಡಿಮೆಯಾಗಲಿದೆ’ ಎಂದು ವಿವರಿಸಿದರು.

ಬಿಡಿಎ ಕಚೇರಿ ಬಳಿ ಮೇಲ್ಸೇತುವೆ ಯನ್ನು ಅವೈಜ್ಞಾನಿಕವಾಗಿ ನಿರ್ಮಿಸ ಲಾಗಿದೆ. ಮೇಖ್ರಿ ವೃತ್ತದಿಂದ ಬರುವ ವಾಹನಗಳು ಸರ್ವೀಸ್ ರಸ್ತೆಯಲ್ಲಿ ಮುಂದುವರಿದರೆ ಅರಮನೆ ರಸ್ತೆ ಕಡೆಗೆ ಎಡ ತಿರುವು ಪಡೆದು ಮುಂದೆ ಹೋಗಿ ಯೂಟರ್ನ್ ಪಡೆದು ವಾಪಸ್ ಬರಬೇಕಾಗಿದೆ. ಒಂದು ಗಂಟೆ ಅವಧಿಯಲ್ಲಿ ಸರಾಸರಿ 800 ವಾಹನಗಳು ಹೀಗೆ ಯೂಟರ್ನ್ ಪಡೆ ಯುತ್ತಿವೆ. ಯೂಟರ್ನ್ ಪಡೆಯದೆ ನೇರ ವಾಗಿ ತೆರಳಲು ಅನುಕೂಲ ಮಾಡಿ ಸೇತುವೆ ಕೆಳಗೆ ಸಿಗ್ನಲ್ ಅಳವಡಿಸಿದರೆ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಕಾವೇರಿ ಜಂಕ್ಷನ್‌ನಲ್ಲಿರುವ ಮ್ಯಾಜಿಕ್ ಬಾಕ್ಸ್ ಉಪಯೋಗಕ್ಕೆ ಬಾರದಾಗಿದೆ. ಇಲ್ಲಿ ಸಿಗ್ನಲ್ ಇಲ್ಲದಿದ್ದರೂ ಪೊಲೀಸರು ಹಗ್ಗ ಹಿಡಿದು ನಿಲ್ಲಬೇಕಾಗಿದೆ. ಬಸವೇಶ್ವರ ವೃತ್ತದಿಂದ ಬರುವ ವಾಹನಗಳು ಮ್ಯಾಜಿಕ್ ಬಾಕ್ಸ್‌ ಮೇಲೆ ಹೋಗಿ ಯೂಟರ್ನ್ ತೆಗೆದುಕೊಳ್ಳಬೇಕಿದ್ದು, ಇಲ್ಲಿ ಭಾರಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಆ ಭಾಗದಲ್ಲಿ ರಸ್ತೆ ವಿಸ್ತರಣೆ ಮಾಡಿದರೆ ಸಮಸ್ಯೆ ಕೊಂಚ ಪರಿಹಾರವಾಗಲಿದೆ. ಇಲ್ಲದಿದ್ದರೆ ಸಿಗ್ನಲ್ ಅಳವಡಿಸಿಯೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಮೇಖ್ರಿ ವೃತ್ತ: ಸಣ್ಣ ಪರಿಹಾರ

ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಜಯಮಹಲ್ ರಸ್ತೆ ಮತ್ತು ಸಿ.ವಿ. ರಾಮನ್ ರಸ್ತೆ ಕಡೆಗೆ ಹೋಗಲು ಕಿರಿದಾದ ಸರ್ವೀಸ್ ರಸ್ತೆ ಮೂಲಕ ಮೇಖ್ರಿ ವೃತ್ತಕ್ಕೆ ಬರುತ್ತಿವೆ. ಅಲ್ಲಿ ದಟ್ಟಣೆ ಸಂದರ್ಭದಲ್ಲಿ ವಾಹನಗಳು ಹೆದ್ದಾರಿಗೂ ವಿಸ್ತರಣೆಗೊಳ್ಳುತ್ತಿದ್ದು, ನೇರವಾಗಿ ಕೆಳಸೇತುವೆಯಲ್ಲಿ ಹೋಗಬೇಕಾದ ವಾಹನಗಳ ಸಂಚಾರಕ್ಕೂ ತೊಡಕಾಗುತ್ತಿದೆ.

ಮೇಲೆ ಹೋಗಲು ಇರುವ ರಸ್ತೆಯನ್ನು ಕೊಂಚ ವಿಸ್ತರಣೆ ಮಾಡಿದರೆ ಈ ವೃತ್ತದ ಸಮಸ್ಯೆಯೂ ಪರಿಹಾರವಾಗಲಿದೆ ಎಂಬುದು ಸಿಟಿಜನ್ ಫಾರ್ ಸಿಟಿಜನ್ ಸಿದ್ಧಪಡಿಸಿರುವ ವರದಿ ಹೇಳುತ್ತದೆ.

ಗಣ್ಯರು ಹೆಲಿಕಾಪ್ಟರ್ ಬಳಸುವುದು ಸೂಕ್ತ

ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಗಣ್ಯರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಿದರೆ ಈ ರಸ್ತೆಯಲ್ಲಿನ ವಾಹನ ದಟ್ಟಣೆ ಸಮಸ್ಯೆಗೆ ದೊಡ್ಡ ಪರಿಹಾರ ಸಿಕ್ಕಂತಾಗಲಿದೆ.

ಗಣ್ಯರ ವಾಹನಗಳಿಗೆ ಸಿಗ್ನಲ್ ಮುಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈ ರಸ್ತೆಯಲ್ಲಿನ ಸಂಚಾರ ದಟ್ಟಣೆಗೆ ನಿತ್ಯ ಶೇ 25ರಷ್ಟು ಕೊಡುಗೆಯನ್ನು ಇದು ನೀಡುತ್ತಿದೆ. ‘ಗಣ್ಯರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಿದರೆ ಶೇ 25ರಷ್ಟು ಸಮಸ್ಯೆ ಪರಿಹಾರವಾದಂತೆ. ಸಾರ್ವಜನಿಕರ ಇಂಧನ ವೆಚ್ಚ, ಪರಿಸರಕ್ಕೆ ಆಗುತ್ತಿರುವ ಪರಿಣಾಮ ಎಲ್ಲವನ್ನೂ ಲೆಕ್ಕ ಮಾಡಿದರೆ ಗಣ್ಯರಿಗೆ ಹೆಲಿಕಾಪ್ಟರ್ ಸೇವೆ ಒದಗಿಸುವುದು ದುಬಾರಿ ಆಗಲಾರದು’ ಎನ್ನುವುದು ರಾಜಕುಮಾರ್ ದುಗಾರ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT