ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ವರ್ಷ ಸ್ವಾಗತಿಸಲು ಬೆಂಗಳೂರು ಸಜ್ಜು: ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

Published 30 ಡಿಸೆಂಬರ್ 2023, 23:37 IST
Last Updated 30 ಡಿಸೆಂಬರ್ 2023, 23:37 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷ–2024 ಅನ್ನು ಸ್ವಾಗತಿಸಲು ನಗರ ಸಜ್ಜಾಗಿದೆ. ಡಿ.31ರ ರಾತ್ರಿ 8ರ ಬಳಿಕ ಹಳೆ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷ ಬರ ಮಾಡಿಕೊಳ್ಳುವ ಸಂಭ್ರಮಾಚರಣೆಗೆ ನಗರ ಸಾಕ್ಷಿಯಾಗಲಿದೆ.

ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲದಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದ್ದು, ಪೊಲೀಸರು ಭದ್ರತೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರಮುಖ ರಸ್ತೆಗಳಲ್ಲಿ ಹೆಚ್ಚುವರಿಯಾಗಿ 400 ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಅಲ್ಲಲ್ಲಿ ಪೊಲೀಸ್‌ ಬ್ಯಾರಿಕೇಡ್‌ ಹಾಕಲಾಗಿದೆ. ಡ್ರೋನ್‌ ಕ್ಯಾಮೆರಾ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪೊಲೀಸ್‌ ಕಣ್ಗಾವಲಿನಲ್ಲೇ ಸಂಭ್ರಮಾಚರಣೆ ನಡೆಯಲಿದೆ. ಸಂಭ್ರಮಾಚರಣೆ ನಡೆಯುವ ಪ್ರದೇಶದಲ್ಲಿ ಪೊಲೀಸರು ಶನಿವಾರ ರಾತ್ರಿಯೇ ಪರಿಶೀಲನೆ ನಡೆಸಿದರು. ಪಾನಮತ್ತ ಚಾಲಕರ ಪತ್ತೆಗೆ 48 ವಿಶೇಷ ತಂಡ ರಚಿಸಲಾಗಿದೆ.

‘ಸಾರ್ವಜನಿಕ ಸ್ಥಳಗಳಲ್ಲಿ ಡಿ.31ರಂದು ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ’ ಎಂದು ಪೊಲೀಸ್ ಕಮಿಷನರ್‌ಬಿ. ದಯಾನಂದ್ ತಿಳಿಸಿದ್ದಾರೆ.

‘ಮದ್ಯದ ಅಂಗಡಿಗಳ ವಹಿವಾಟಿಗೆ ರಾತ್ರಿ 11 ಗಂಟೆಯವರೆಗೂ ಅವಕಾಶವಿದೆ. ಬಾರ್‌ ಆ್ಯಂಡ್ ರೆಸ್ಟೋರೆಂಟ್, ಪಬ್, ಹೋಟೆಲ್ ಹಾಗೂ ಇತರೆ ವ್ಯಾಪಾರ ಸ್ಥಳಗಳನ್ನು ರಾತ್ರಿ 1 ಗಂಟೆಯೊಳಗೆ ಬಂದ್ ಮಾಡಬೇಕು. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.‌

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ವೈದ್ಯರು, ಬೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳೂ ಪೊಲೀಸರ ಜೊತೆಗಿರಲಿದ್ದಾರೆ. ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

ಭದ್ರತೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 15 ಮಂದಿ ಡಿಸಿಪಿಗಳು, 45 ಎಸಿಪಿಗಳು, 160 ಇನ್‌ಸ್ಪೆಕ್ಟರ್‌ಗಳು, 600 ಸಬ್‌ ಇನ್‌ಸ್ಪೆಕ್ಟರ್‌ಗಳು, 600 ಎಎಸ್‌ಐ, 1,800 ಹೆಡ್‌ ಕಾನ್‌ಸ್ಟೆಬಲ್‌, 5,200 ಕಾನ್‌ಸ್ಟೆಬಲ್‌ಗಳನ್ನು ಭದ್ರತೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಂ.ಜಿ ರಸ್ತೆ ಸುತ್ತಮುತ್ತ 3 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸುರಕ್ಷತಾ ದ್ವೀಪ ಸ್ಥಾಪನೆ: ಸಂಭ್ರಮಾಚರಣೆ ನಡೆಯುವ ಪ್ರದೇಶದಲ್ಲಿ ಮಹಿಳೆ ಸುರಕ್ಷತಾ ದ್ವೀಪ ತೆರೆಯಲಾಗಿದೆ. ಮಕ್ಕಳ ಕಾಣೆಯಾದರೆ ನೆರವು ನೀಡಲು ಅಲ್ಲಲ್ಲಿ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ವಾಚ್ ಟವರ್‌ಗಳ ನಿರ್ಮಾಣ ಮಾಡಲಾಗಿದೆ.

ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ ಸಿಬ್ಬಂದಿ. ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌
ಸಿಸಿ ಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ ಸಿಬ್ಬಂದಿ. ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್‌
ಯುವತಿಯರ ಸುರಕ್ಷತೆಗೆ ಸುರಕ್ಷಾ ದ್ವೀಪ ತೆರೆಯಲಾಗಿದೆ. 
ಯುವತಿಯರ ಸುರಕ್ಷತೆಗೆ ಸುರಕ್ಷಾ ದ್ವೀಪ ತೆರೆಯಲಾಗಿದೆ. 

ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧ

ಹೆಣ್ಣೂರು ಐ.ಟಿ.ಸಿ ಬಾಣಸವಾಡಿ ಮುಖ್ಯರಸ್ತೆ ಲಿಂಗರಾಜಪುರ ಹೆಣ್ಣೂರು ಮುಖ್ಯರಸ್ತೆ ಮೇಲ್ಸೇತುವೆ ಕಲ್ಲಳ್ಳಿ ರೈಲ್ವೆಗೇಟ್‌ ಮೇಲ್ಸೇತುವೆ ದೊಮ್ಮಲೂರು ಮೇಲ್ಸೇತುವೆ ನಾಗವಾರ ಮೇಡಹಳ್ಳಿ ಒ.ಎಂ.ರೋಡ್ ದೇವರಬೀಸನಹಳ್ಳಿ ಮಹದೇವಪುರ ದೊಡ್ಡನೆಕ್ಕುಂದಿ ಮೇಲ್ಸೇತುವೆಯಲ್ಲಿ ಭಾನುವಾರ ರಾತ್ರಿ 11ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮದ್ಯ ಸೇವಿಸಿ ವಿಲೇ ನಡೆಸುವವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಮದ್ಯ ಸೇವಿಸಿ ರಸ್ತೆಗಳಲ್ಲಿ ವಿಲೇ ನಡೆಸಿದರೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ಧಾರೆ.

ರಾತ್ರಿ 11ರ ನಂತರ ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣ ಬಂದ್‌

ಹೊಸ ವರ್ಷದ ಸಂಭ್ರಮಾಚರಣೆಗೆ ಬರುವವರಿಗೆ ಅನುಕೂಲ ಆಗುವಂತೆ ಡಿ.31ರಂದು ಮೆಟ್ರೊ ರೈಲು ಸಂಚಾರವನ್ನು ರಾತ್ರಿ 2 ಗಂಟೆವರೆಗೆ ವಿಸ್ತರಿಸಲಾಗಿದೆ. ಆದರೆ ಈ ಹೆಚ್ಚುವರಿ ಅವಧಿಯಲ್ಲಿ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯುವುದಕ್ಕೆ ಹಾಗೂ ಮೆಟ್ರೊ ರೈಲು ಏರುವುದಕ್ಕೆ ಅವಕಾಶ ಇಲ್ಲ. ಪೊಲೀಸ್‌ ಇಲಾಖೆ ಸೂಚನೆ ಮೇರೆಗೆ ಭಾನುವಾರ ರಾತ್ರಿ 11ರ ಬಳಿಕ ಎಂ.ಜಿ ರಸ್ತೆ ಮೆಟ್ರೊ ನಿಲ್ದಾಣದ ಬಾಗಿಲುಗಳು ಬಂದ್‌ ಆಗಲಿವೆ. ಪ್ರತಿ ದಿನ ರಾತ್ರಿ 11.30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿ.31ರಂದು ರಾತ್ರಿ 2 ಗಂಟೆ ತನಕ ವಿಸ್ತರಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಎಲ್ಲ ನಾಲ್ಕು ಟರ್ಮಿನಲ್‌ಗಳಿಂದ ರಾತ್ರಿ 1.30ಕ್ಕೆ ಕೊನೆಯ ಮೆಟ್ರೊ ರೈಲುಗಳು ಹೊರಡಲಿವೆ. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್‌ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳಿಗೆ 2.15ಕ್ಕೆ ಕೊನೇ ಮೆಟ್ರೊಗಳು ಹೊರಡಲಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ ₹ 50 ಮೊತ್ತದ ಕಾಗದದ ಟಿಕೆಟ್ ವಿತರಿಸಲಾಗುವುದು. ಕಾಗದದ ಟಿಕೆಟ್‌ಗಳನ್ನು ಅಂದು ಮುಂಚಿತವಾಗಿಯೇ ಪಡೆಯಬೇಕು. ಮಧ್ಯರಾತ್ರಿ ಟಿಕೆಟ್‌ ವಿತರಣೆ ಇರುವುದಿಲ್ಲ. ಸ್ಮಾರ್ಟ್‌ ಕಾರ್ಡ್ ಮತ್ತು ಕ್ಯೂಆರ್‌ ಕೋಡ್ ಟಿಕೆಟ್‌ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧ

ಮಹಾತ್ಮಗಾಂಧಿ ರಸ್ತೆ ಬ್ರಿಗೇಡ್ ರಸ್ತೆ ರೆಸಿಡೆನ್ಸಿ ರಸ್ತೆ ಸೇಂಟ್‌ ಮಾರ್ಕ್ಸ್‌ ರಸ್ತೆ ಹಾಗೂ ಚರ್ಚ್‌ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯಲಿದ್ದು ಡಿ.31ರಂದು ರಾತ್ರಿ 8ರಿಂದ ಮಧ್ಯರಾತ್ರಿ 1 ಗಂಟೆ ವರೆಗೆ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ನಿರ್ಬಂಧಿಸಲಾಗಿದೆ. ಎಂ.ಜಿ ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದಿಂದ ಮೆಯೊ ಹಾಲ್‌ ಜಂಕ್ಷನ್‌ ವರೆಗೆ ಬ್ರಿಗೇಡ್‌ ರಸ್ತೆಯಲ್ಲಿ ಕಾವೇರಿ ಎಂಪೋರಿಯಂನ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ ವರೆಗೆ ಚರ್ಚ್‌ ಸ್ಟ್ರೀಟ್‌ನಲ್ಲಿ ಬ್ರಿಗೇಡ್‌ ರಸ್ತೆಯ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ ವರೆಗೆ ರೆಸ್ಟ್‌ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್‌ ರಸ್ತೆ ಜಂಕ್ಷನ್‌ ವರೆಗೆ ರೆಸಿಡೆನ್ಸಿ ಕ್ರಾಸ್‌ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಮಹಾತ್ಮ ಗಾಂಧಿ ರಸ್ತೆಯ ಜಂಕ್ಷನ್‌ ವರೆಗೆ ವಾಹನ ನಿಲುಗಡೆ ಹಾಗೂ ಸಂಚಾರ ನಿರ್ಬಂಧಿಸಲಾಗಿದೆ.

ಭಾನುವಾರ ಸಂಜೆ 4ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಳೇ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಮೇಲ್ಸೇತುವೆ ಜಂಕ್ಷನ್‌ವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಓಲಾ ಹಾಗೂ ಊಬರ್‌ಗಳಿಗೆ ಪ್ರತ್ಯೇಕವಾಗಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪೊಲೀಸರ ನೆರವಿಗೆ ಸಹಾಯವಾಣಿ ಸಂಖ್ಯೆ 112 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT