ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವಾರ್ಡನ್; ಸಾವಿರಾರು ಮಂದಿ ನೋಂದಣಿ

Last Updated 16 ಜುಲೈ 2020, 21:36 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗಾಗಿ ಪೊಲೀಸರ ಜೊತೆಯಲ್ಲೇ ‘ಸಿವಿಲ್ ಪೊಲೀಸ್‌ ವಾರ್ಡನ್’ ಆಗಿ ಕೆಲಸ ಮಾಡಲು ಸಾವಿರಾರು ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಕೊರೊನಾ ಸೋಂಕಿತ ಪೊಲೀಸರ ಸಂಖ್ಯೆ ಹೆಚ್ಚಿರುವುದರಿಂದ, ಅವರ ಜತೆ ಒಡನಾಟ ಹೊಂದಿದ್ದ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. 50 ವರ್ಷ ದಾಟಿದ ಪೊಲೀಸರಿಗೆ ರಜೆ ನೀಡಿ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ. ಅವರ ಜಾಗದಲ್ಲಿ ಕೆಲಸ ಮಾಡಲು ಕೆಎಸ್‌ಆರ್‌ಪಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಮತ್ತಷ್ಟು ಸಿಬ್ಬಂದಿ ಅಗತ್ಯ ಇದೆ.

ಇದರ ಮಧ್ಯೆ, ಸಾರ್ವಜನಿಕರು ಸ್ವಯಂಸೇವಕರಾಗಿ ಕೆಲಸ ಮಾಡಲು ನಗರ ಪೊಲೀಸರು ಅವಕಾಶ ನೀಡಿದ್ದಾರೆ. ‘ದೈಹಿಕವಾಗಿ ಸದೃಢವಾದ ಹಾಗೂ ಸೇವಾ ಮನೋಭಾವವುಳ್ಳ 18ರಿಂದ 45 ವರ್ಷದೊಳಗಿನ ಯುವಕ ಹಾಗೂ ಯುವತಿಯರಿಗೆ ಸಿವಿಲ್ ಪೊಲೀಸ್ ವಾರ್ಡನ್ ಆಗಲು ಮುಕ್ತ ಅವಕಾಶ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಆಹ್ವಾನ ನೀಡಿದ್ದರು.

ಈ ಆಹ್ವಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ‘ಪೊಲೀಸ್ ವಾರ್ಡನ್’ ಆಗಲು ಸಾವಿರಾರು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನಗರದ ಪ್ರತಿಯೊಂದು ವಲಯದಲ್ಲೂ ಆಯಾ ಡಿಸಿಪಿಗಳು ಪೊಲೀಸ್ ವಾರ್ಡನ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಆಯ್ಕೆಯಾದವರಿಗೆ ಬುಧವಾರದಿಂದಲೇ ಕೆಲಸ ಹಂಚಿಕೆ ಮಾಡಲಾಗಿದೆ. ಆಯಾ ಠಾಣೆಯಲ್ಲಿ ಇನ್‌ಸ್ಪೆಕ್ಟರ್‌ಗಳು ವಾರ್ಡನ್‌ಗಳ ಹಾಜರಾತಿ ಪಡೆದು ಪ್ರಾಥಮಿಕ ತರಬೇತಿ ನೀಡುತ್ತಿದ್ದಾರೆ.

‘ಪೊಲೀಸರ ಜೊತೆ ಕೆಲಸ ಮಾಡಲು ಜನರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ನಮ್ಮ ವಿಭಾಗದಲ್ಲಿ 2000 ಸಾವಿರಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆ ಪೈಕಿ ಕೆಲವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪಟ್ ತಿಳಿಸಿದ್ದಾರೆ.

ಸೋಂಕು ರಕ್ಷಣೆಗೂ ಒತ್ತು; ‘ಪೊಲೀಸ್ ವಾರ್ಡನ್‌ಗಳು ಸ್ವಯಂಸೇವಕರಾಗಿ ಕೆಲಸ ಮಾಡಬೇಕು. ಯಾವುದೇ ಸಂಭಾವನೆ ಇರುವುದಿಲ್ಲ’ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

‘ಸಿವಿಲ್ ಪೊಲೀಸ್ ವಾರ್ಡನ್’ ಕೆಲಸದ ಬಗ್ಗೆ ಹಲವರು ಕಮಿಷನರ್‌ ಅವರಿಗೆ ಟ್ವೀಟ್‌ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಭಾಸ್ಕರ್ ರಾವ್, ‘ವಾರಕ್ಕೆ ಕನಿಷ್ಠ 10 ಗಂಟೆ ಕೆಲಸ ಇರುತ್ತದೆ. ವಾರ್ಡನ್ ಆದವರಿಗೆ ಜಾಕೆಟ್ ಮತ್ತು ಕ್ಯಾಪ್‌ ನೀಡಲು ಡಿಸಿಪಿಗೆ ಹೇಳಿದ್ದೇನೆ. ಮುಖಗವಚ, ಮಾಸ್ಕ್, ಸ್ಯಾನಿಟೈಸರ್‌, ಕೈಗವಸ ನೀಡಲೂ ಸೂಚಿಸಿದ್ದೇನೆ’ ಎಂದಿದ್ದಾರೆ.

ಸಿವಿಲ್ ಪೊಲೀಸ್ ವಾರ್ಡನ್ ನೇಮಕಾತಿ ಮಾಹಿತಿಗೆ:bcp.gov.in ಅಥವಾ https://t.co/sPMdHigqYn.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT