ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ದೃಢ: ಆಂಬುಲೆನ್ಸ್‌ನಲ್ಲಿ ತೆರಳಿದ ಮಹಿಳೆ ನಾಪತ್ತೆ, ಪ್ರಕರಣ ದಾಖಲು

Last Updated 10 ಸೆಪ್ಟೆಂಬರ್ 2020, 6:11 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾದ 28 ವರ್ಷದ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೂರು ನೀಡಿದ್ದಾರೆ.

ಬೊಮ್ಮನಹಳ್ಳಿ ವಲಯದಲ್ಲಿ ಈ ತಿಂಗಳ ಮೊದಲ ವಾರದಲ್ಲಿ ಸಾಮೂಹಿಕ ಕೋವಿಡ್ ‌ ಪರೀಕ್ಷ ನಡೆಸಲಾಗಿತ್ತು. ಈ ವೇಳೆ ಮಹಿಳೆ ಕೂಡ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಸಿಬ್ಬಂದಿ ತಿಳಿಸಿ, ಆಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

‘ಆಂಬುಲೆನ್ಸ್‌ನಲ್ಲಿ ಒಬ್ಬ ಗಂಟಲು ದ್ರವ ಸಂಗ್ರಹಿಸುವ ಸಿಬ್ಬಂದಿ, ಇಬ್ಬರು ಸಹಾಯಕ ಸಿಬ್ಬಂದಿ ಹಾಗೂ ಚಾಲಕ ಇದ್ದರು. ಅವರು ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ ಕಿಟ್) ಧರಿಸಿದ್ದರು’ ಎಂದು ಮಹಿಳೆಯ ಸಹೋದರ ಸಂಬಂಧಿ ವಿಕಾಸ್ ಕುಮಾರ್ ಮಾಹಿತಿ ನೀಡಿದರು.

‘ಸೆ.4ರಂದು ಸಂಜೆ 4.30ಕ್ಕೆ ಕರೆದೊಯ್ಯಲು ಬಂದ ಸಿಬ್ಬಂದಿ, ಕೆಲವು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮಾತ್ರ ಅವಕಾಶ ನೀಡಿದರು. ಮೊಬೈಲ್‌ ಫೋನ್‌ ಮನೆಯಲ್ಲಿಯೇ ಬಿಡಲು ಸೂಚಿಸಿದರು. ಅರ್ಧ ಕಿ.ಮೀ. ದೂರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದರು. ಸಂಜೆ 5.15ಕ್ಕೆ ಆಸ್ಪತ್ರೆಗೆ ಹೋದರೆ ಅಲ್ಲಿ ದಾಖಲಿಸಿರಲಿಲ್ಲ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಕೂಡ ವಿಚಾರಿಸಲಾಯಿತು. ಎಲ್ಲಿಯೂ ದಾಖಲು ಮಾಡದಿರುವುದು ಖಚಿತವಾದಾಗ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು’ ಎಂದರು.

‘ವ್ಯಕ್ತಿಯ ಮನೆಗೆ ಆಂಬುಲೆನ್ಸ್‌ ಕಳಿಸುವ ಒಂದು ಗಂಟೆಯ ಮೊದಲು ಚಾಲಕನ ಹೆಸರು ಹಾಗೂ ಆಂಬುಲೆನ್ಸ್‌ಸಂಖ್ಯೆಯನ್ನು ವ್ಯಕ್ತಿಯ ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುವುದು. ರೋಗಿಯು ಮೊಬೈಲ್‌ನೊಂದಿಗೆ ಆಸ್ಪತ್ರೆಗೆ ತೆರಳಲು ಅವಕಾಶವಿದೆ’ ಎಂದು ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

‘ನಮಗೆ ಯಾವುದೇ ರೀತಿಯ ಸಂದೇಶ ಮೊಬೈಲ್‌ಗೆ ಬಂದಿಲ್ಲ’ ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಆಗ್ನೇಯ ಡಿಸಿಪಿ ಶ್ರೀನಾಥ್ ಮಹದೇವ್, ‘ಮಹಿಳೆಯು ದೆಹಲಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ಹೋಗಿದ್ದಾಗಿ ತಿಳಿಸಿದ್ದಾರೆ. ಹಿಂದಿರುಗುವ ಬಗ್ಗೆ ಏನನ್ನೂ ಹೇಳಿಲ್ಲ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT