ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಹೆಚ್ಚು ಬಳಸುತ್ತಿದ್ದಕ್ಕೆ ಪತ್ನಿಯನ್ನೇ ಕೊಂದ

Last Updated 21 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ವನಜಾಕ್ಷಿ (31) ಎನ್ನುವವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಅಶೋಕ(37) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಜಿಲ್ಲೆಯ ಹುಲಿಯೂರುದುರ್ಗ ತಾಲ್ಲೂಕಿನ ಕೆಂಚಾಪುರದ ಅಶೋಕ, ಕಾರು ಚಾಲಕ. ಪತ್ನಿ ವನಜಾಕ್ಷಿ ಅವರನ್ನು ಏಪ್ರಿಲ್ 17ರಂದು ಕೊಲೆ ಮಾಡಿ ಪರಾರಿಯಾಗಿದ್ದ. ಆತನನ್ನು ಗುರುವಾರ ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅಶೋಕ ಹಾಗೂ ವನಜಾಕ್ಷಿ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಮೂವರು ಮಕ್ಕಳಿದ್ದು, ಅವರ ಅಜ್ಜಿ ಊರಿನಲ್ಲಿದ್ದರು. ದಂಪತಿ ಮಾತ್ರ ಕಾವೇರಿಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ವನಜಾಕ್ಷಿ, ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು’ ಎಂದೂ ತಿಳಿಸಿದರು.

‘ವನಜಾಕ್ಷಿ ಅವರು ಹೆಚ್ಚು ಮೊಬೈಲ್ ಬಳಸುತ್ತಿದ್ದರು. ಸ್ನೇಹಿತರ ಜೊತೆ ನಿರಂತರವಾಗಿ ಮಾತನಾಡುತ್ತಿದ್ದರು. ಇದನ್ನು ಪ್ರಶ್ನಿಸಿದ್ದ ಅಶೋಕ, ಹಲವು ಬಾರಿ ಜಗಳ ತೆಗೆದಿದ್ದ. ಪತ್ನಿ ಮೊಬೈಲ್‌ಗೆ ಬರುತ್ತಿದ್ದ ಕರೆಗಳನ್ನು ನೋಡಿ, ಯಾರ ಜೊತೆ ಮಾತನಾಡುತ್ತಿದ್ದಿಯಾ? ಎಂಬುದಾಗಿ ಶೀಲ ಶಂಕಿಸಿ ಹಲ್ಲೆ ಸಹ ಮಾಡುತ್ತಿದ್ದ.’

‘ಏಪ್ರಿಲ್ 17ರಂದು ಕೆಲಸ ಮುಗಿಸಿಕೊಂಡು ಅಶೋಕ ಮನೆಗೆ ಬಂದಿದ್ದ. ಅದೇ ವೇಳೆಯೇ ವನಜಾಕ್ಷಿ ಮೊಬೈಲ್‌ನಲ್ಲಿ ಮಾತನಾಡುತ್ತ ನಿಂತಿದ್ದರು. ಅದನ್ನು ನೋಡಿದ್ದ ಆರೋಪಿ, ಪುನಃ ಜಗಳ ತೆಗೆದಿದ್ದ. ಪತ್ನಿಯ ಕತ್ತು ಹಿಸುಕಿ ಕೊಂದಿದ್ದ. ಮೃತದೇಹವನ್ನು ಮನೆಯಲ್ಲೇ ಬಿಟ್ಟು ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ’ ಎಂದೂ ಹೇಳಿದರು.

‘ಮನೆಯಿಂದ ದುರ್ನಾತ ಬರುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಬುಧವಾರ (ಏಪ್ರಿಲ್ 20) ಸಂಜೆ ಮನೆ ಬಳಿ ಹೋಗಿದ್ದ ಸಿಬ್ಬಂದಿ, ಬಾಗಿಲು ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ’ ಎಂದೂ ತಿಳಿಸಿದರು.

ಸಂಬಂಧಿಕರ ಮನೆಯಲ್ಲಿದ್ದ: ‘ಪತ್ನಿ ಕೊಂದ ನಂತರ ಆರೋಪಿ, ಮಾಗಡಿ ತಾಲ್ಲೂಕಿನಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಹೋಗಿ ಅವಿತುಕೊಂಡಿದ್ದ. ಅಲ್ಲಿಗೆ ತೆರಳಿದ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT