ಶನಿವಾರ, ಜನವರಿ 18, 2020
19 °C
ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌): 15 ವರ್ಷಗಳಿಂದ ಚರ್ಚೆಯಲ್ಲೇ ಉಳಿದ ಯೋಜನೆ

ಬಗೆಹರಿಯಲಿದೆಯೇ ಭೂಸ್ವಾಧೀನ ಕಗ್ಗಂಟು?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಭಾರವನ್ನು ತಾಳಿಕೊಳ್ಳಲು ಒಳವರ್ತುಲ ರಸ್ತೆ, ಹೊರವರ್ತುಲ ರಸ್ತೆಗಳ ಸಾಮರ್ಥ್ಯ ಸಾಲದು ಎಂಬ ಕಾರಣಕ್ಕೆ ರೂಪ ತಳೆದದ್ದು ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಪರಿಕಲ್ಪನೆ.

ಹೊರವರ್ತುಲ ರಸ್ತೆಯ ಹೊರಗೆ ಇನ್ನೊಂದು ವರ್ತುಲದ ರೂಪದಲ್ಲಿ ಜಾರಿ ಆಗಲಿರುವ ಈ ಯೋಜನೆಗೆ 15 ವರ್ಷಗಳ ಹಿಂದೆಯೇ ನೀಲನಕ್ಷೆ ಸಜ್ಜಾಗಿತ್ತು. 100 ಮೀಟರ್‌ ಅಗಲದ ಪಿಆರ್‌ಆರ್‌ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ 2006ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು.

ಇದಾಗಿ 13 ವರ್ಷಗಳೇ ಉರುಳಿವೆ. ನಾಲ್ಕು ಸರ್ಕಾರಗಳು ಬದಲಾಗಿವೆ. ಎಂಟು ಬಾರಿ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಇನ್ನೂ ಈ ಯೋಜನೆ ಸಾಕಾರಗೊಂಡಿಲ್ಲ. ಈ ಯೋಜನೆಯನ್ನು ಕಾರ್ಯಗತ ಮಾಡುತ್ತೇವೆ ಎಂದೇ ಎಲ್ಲ ಸರ್ಕಾರಗಳೂ ಹೇಳಿವೆ. ಆದರೆ, ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ.

ಪ್ರತಿ ಬಾರಿ ಸರ್ಕಾರಗಳು ಬದಲಾದಾಗಲೂ ಯೋಜನೆಯ ಸ್ವರೂಪವೂ ಬದಲಾಗುತ್ತಲೇ ಇದೆ. ರಸ್ತೆಯ ಅಗಲ ಒಮ್ಮೆ 100 ಮೀಟರ್‌, ಮತ್ತೊಮ್ಮೆ 75 ಮೀಟರ್‌, ಮಗದೊಮ್ಮೆ 100 ಮೀಟರ್‌ ಎಂದು ಬದಲಾಯಿಸಲಾಗಿದೆ. ಒಮ್ಮೆ ನೆಲ ಮಟ್ಟದಲ್ಲಿ, ಮತ್ತೊಮ್ಮೆ ಎತ್ತರಿ
ಸಿದ ರಸ್ತೆ ಮತ್ತು ಅದರ ಮೇಲೆ ಮೆಟ್ರೊ ಮಾರ್ಗ ನಿರ್ಮಿಸುವುದು ಎಂಬುದಾಗಿ ಯೋಜನೆಯ ವಿನ್ಯಾಸಗಳಲ್ಲೂ ಹಲವು ಬಾರಿ ಬದಲಾವಣೆ ಮಾಡಲಾಗಿದೆ. ಅಂತಿಮವಾಗಿ ಈಗಿನ ಸರ್ಕಾರ 100 ಮೀ ಅಗಲದ ರಸ್ತೆಯನ್ನು ನೆಲಮಟ್ಟದಲ್ಲೇ ನಿರ್ಮಿಸಲು ಮುಂದಾಗಿದೆ.

ಆದರೆ, ಈ ಯೋಜನೆ ಮೊದಲಿನಿಂದಲೂ ಕಗ್ಗಂಟು ಎದುರಾಗಿರುವುದು ಭೂಸ್ವಾಧೀನದ ವಿಚಾರದಲ್ಲಿ. ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕದ 13 ವರ್ಷಗಳಲ್ಲಿ, ಈ ಯೋಜನೆಗೆ ಗುರುತಿಸಿರುವ ಜಾಗದಲ್ಲಿ ಯಾವುದೇ ತೆರನಾದ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ಸಾಧ್ಯವಾಗಿಲ್ಲ. ಸರ್ಕಾರ ಅತ್ತ ಈ ಯೋಜನೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿದೆ.

‘ರೈತರು ಯಾರೂ ಈ ಯೋಜನೆಯನ್ನು ವಿರೋಧಿಸುತ್ತಿಲ್ಲ. ಆದರೆ, ನಮ್ಮ ಜಮೀನಿಗೆ ಯೊಗ್ಯ ಬೆಲೆ ನೀಡಿ ಭೂಸ್ವಾಧೀನ ಮಾಡಿಕೊಂಡು ನಂತರ ಅನುಷ್ಠಾನಗೊಳಿಸಲಿ ಎಂಬುದೇ ನಮ್ಮ ಬೇಡಿಕೆ’ ಎನ್ನುತ್ತಾರೆ ರೈತರು.

₹ 5 ಕೋಟಿ ನೀಡಲಿ: ‘ಈ ಯೋಜನೆಗೆ ಗುರುತಿಸಿರುವ ಕೆಲವು ಗ್ರಾಮಗಳಲ್ಲಿ ಎಕರೆ ಜಮೀನಿಗೆ ₹7 ಕೋಟಿವರೆಗೂ ಬೆಲೆ ಇದೆ. ಕೆಲವು ಗ್ರಾಮಗಳಲ್ಲಿ ಕೇವಲ ₹ 2.5 ಕೋಟಿ ಬೆಲೆ ಇದೆ. ₹ 2.5 ಕೋಟಿ ಬೆಲೆ ಇರುವಲ್ಲಿಯೂ ಸರ್ಕಾರ ರೈತರಿಗೆ ₹1.5 ಕೋಟಿಗಿಂತ ಹೆಚ್ಚು ಹಣ ನೀಡಲು ಸಿದ್ಧವಿಲ್ಲ. ಎಲ್ಲ ಕಡೆ ಎಕರೆ ಜಮೀನಿಗೆ ಕನಿಷ್ಠ ₹5ಕೋಟಿಯಾದರೂ ರೈತರಿಗೆ ಸಿಗಬೇಕು’ ಎಂದು ಒತ್ತಾಯಿಸುತ್ತಾರೆ ರೈತಸಂಘ ಮತ್ತು ಹಸಿರು ಸೇನೆ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ರಘು.

ಆದರೆ, ಈ ಪ್ರಸ್ತಾಪವನ್ನು ಒಪ್ಪಲು ಬಿಡಿಎ ಸಿದ್ಧವಿಲ್ಲ. ‘ನಾವು ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ಥಳೀಯ ಜಮೀನಿನ ಮಾರ್ಗಸೂಚಿ ದರವನ್ನು ಆಧರಿಸಿ ಬೆಲೆ ನಿಗದಿಪಡಿಸಬೇಕಾಗುತ್ತದೆ. ರೈತರು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಸಲ್ಲಿಸಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರುತ್ತೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಪರಿಹಾರ ನೀಡಲೆಂದೇ ₹700 ಕೋಟಿಯನ್ನು ಕಾಯ್ದಿರಿಸಿದ್ದೇವೆ. ರೈತರು ಸಹಕರಿಸಿದರೆ 3 ತಿಂಗಳಲ್ಲಿ ಸರ್ವೆ ಕಾರ್ಯಪೂರ್ಣಗೊಳಿಸಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಭೂ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದ ಗೊಂದಲ ಬಗೆಹರಿಸದೆ ನಾವು ಈ ಜಮೀನಿನ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಲು ಬಿಡುವುದಿಲ್ಲ’ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇತ್ತೀಚೆಗೆ ಕಾಳತಮ್ಮನಹಳ್ಳಿ ಗ್ರಾಮದಲ್ಲಿ ಸರ್ವೆ ಕಾರ್ಯಕ್ಕೂ ರೈತರು ಅಡ್ಡಿಪಡಿಸಿದ್ದಾರೆ.

‘ನಿರ್ದಿಷ್ಟ ಗ್ರಾಮದಲ್ಲಿ ಜಮೀನಿಗೆ ಇಷ್ಟು ದರ ನೀಡುತ್ತೇವೆ ಎನ್ನುವುದನ್ನಾದರೂ ಬಿಡಿಎ ಸ್ಪಷ್ಟಪಡಿಸಲಿ. ಬಿಡಿಎ ಯಾವುದನ್ನೂ ಖಚಿತವಾಗಿ ತಿಳಿಸುತ್ತಿಲ್ಲ. ಬಿಡಿಎ ಸರಿಯಾಗಿ ಸ್ಪಂದಿಸದಿದ್ದರೆ ನಾವು ಇನ್ನು ಸರ್ವೆಗೆ ಅವಕಾಶ ನೀಡುವುದಿಲ್ಲ. ಈ ಹಿಂದೆ ಅಳವಡಿಸಿದ್ದ ಸರ್ವೆ ಕಲ್ಲುಗಳನ್ನು ಅನೇಕ ಕಡೆ ಕಿತ್ತುಹಾಕಲಾಗಿದೆ. ಉಳಿದಿರುವ ಸರ್ವೆ ಕಲ್ಲುಗಳನ್ನೂ ಕಿತ್ತು ಟ್ರ್ಯಾಕ್ಟರ್‌ನಲ್ಲಿ ಕೊಂಡು ಹೋಗಿ ಬಿಡಿಎ ಕಚೇರಿ ಎದುರು ಸುರಿದು ಬರುತ್ತೇವೆ’ ಎಂದು ರೈತ ವಿಜಯ್ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟದಿಂದಾಗಿ ಈ ಯೋಜನೆ ಸಾಕಾರಗೊಳ್ಳುವ ಲಕ್ಷಣಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಿ ಈ ಕಗ್ಗಂಟು ಬಿಡಿಸಬೇಕು ಎಂಬುದು ರೈತರ ಬೇಡಿಕೆ.

ಜೈಕಾ ಜತೆ ಒಪ್ಪಂದಕ್ಕೆ ಅನುಮತಿ

ತುಮಕೂರು ರಸ್ತೆಯಿಂದ ಬಳ್ಳಾರಿ ರಸ್ತೆ (₹1,746 ಕೋಟಿ), ಬಳ್ಳಾರಿ ರಸ್ತೆಯಿಂದ ಹಳೆ ಮದ್ರಾಸ್‌ ರಸ್ತೆ (₹1,417 ಕೋಟಿ), ಹಳೆ ಮದ್ರಾಸ್‌ ರಸ್ತೆಯಿಂದ ಹೊಸೂರು ರಸ್ತೆ (₹2,453 ಕೋಟಿ) ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಿಸಲು ಜಪಾನ್‌ ಅಂತರರಾಷ್ಟ್ರೀಯ ಸಹಕಾರ ಏಜೆನ್ಸಿ (ಜೈಕಾ) ಮುಂದೆ ಬಂದಿದೆ. ಈ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲು ಬಿಡಿಎಗೆ ಸರ್ಕಾರ ಅನುಮತಿ ನೀಡಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಇತ್ತೀಚೆಗೆ ಸಚಿವ ಸಂಪುಟ ಸಭೆ ಬಳಿಕ ತಿಳಿಸಿದ್ದರು.

ವೆಚ್ಚ: ₹ 500 ಕೋಟಿಯಿಂದ ₹ 13,716 ಕೋಟಿಗೆ

ಆರಂಭದಲ್ಲಿ ಈ ಯೋಜನೆಯ ಅಂದಾಜು ವೆಚ್ಚ ಇದ್ದುದು ಕೇವಲ ₹ 500 ಕೋಟಿ. 2012ರಲ್ಲಿ ಇದು ₹ 5,800 ಕೋಟಿಗೆ ಹೆಚ್ಚಿತ್ತು. ಭೂಮಿ ಬಿಟ್ಟುಕೊಡುವ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಹೆಚ್ಚು ಪರಿಹಾರವಾಗಿ ನೀಡಬೇಕಾಗಿ ಬಂದ ಬಳಿಕ ಯೋಜನೆ ವೆಚ್ಚ ಮತ್ತಷ್ಟು ಹೆಚ್ಚಳವಾಯಿತು. 2018ರಲ್ಲಿ ಪಿಆರ್‌ಆರ್‌ನಲ್ಲಿ ಎತ್ತರಿಸಿದ ರಸ್ತೆ ಮತ್ತು ಮೆಟ್ರೊ ಮಾರ್ಗ ನಿರ್ಮಿಸುವ ಪ್ರಸ್ತಾವವನ್ನು ಪಿಆರ್‌ಆರ್‌ ಜೊತೆ ಸೇರಿಸಿದಾಗ ಅಂದಾಜು ವೆಚ್ಚ ₹17,000 ಕೋಟಿಗೆ ಹೆಚ್ಚಳವಾಗಿತ್ತು. ಆಗ ರಸ್ತೆಯ ಅಗಲವನ್ನು 75 ಮೀಟರ್‌ಗೆ ಇಳಿಸಲಾಗಿತ್ತು. 

‘ಈಗಿನ ಬಿಜೆಪಿ ಸರ್ಕಾರ ಯೋಜನೆಯ ವಿನ್ಯಾಸವನ್ನು ಮತ್ತೆ ಪರಿಷ್ಕರಣೆ ಮಾಡಿದೆ. 75 ಮೀ ಬದಲು 100 ಮೀ ರಸ್ತೆ ನಿರ್ಮಿಸಲು ಮುಂದಾಗಿದೆ. ಎತ್ತರಿಸಿದ ರಸ್ತೆ ನಿರ್ಮಿಸುವ ಪ್ರಸ್ತಾಪ ಕೈಬಿಟ್ಟಿದೆ. ಪರಿಷ್ಕೃತ ವಿನ್ಯಾಸದ ಪ್ರಕಾರ  ಭೂಸ್ವಾಧೀನಕ್ಕೆ ₹ 8,100 ಕೋಟಿ ಹಾಗೂ ಕಾಮಗಾರಿ ಅನುಷ್ಠಾನಕ್ಕೆ ₹ 5,616 ಕೋಟಿ ಸೇರಿ ಒಟ್ಟು ವೆಚ್ಚ ₹ 13,716 ಕೋಟಿ ಆಗಲಿದೆ’ ಎಂದು ಬಿಡಿಎ ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.

ಅಂತಿಮ ಆದೇಶ ಬಾಕಿ

ಪಿಆರ್‌ಆರ್‌ಗೆ ಪರಿಸರ ಇಲಾಖೆಯ ಅನುಮತಿಯನ್ನು 2014ರಲ್ಲಿ ಪಡೆಯಲಾಗಿತ್ತು. ಆದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೆಟ್ಟಿಲೇರಿದ ಕೆಲವರು, ‘ಪರಿಸರ ಇಲಾಖೆಯಿಂದ ಅನುಮತಿ ಪಡೆದು ಈಗಾಗಲೇ ನಾಲ್ಕು ವರ್ಷಗಳಾಗಿವೆ. ಹಾಗಾಗಿ, ಪರಿಸರ ಇಲಾಖೆಯಿಂದ ಹೊಸತಾಗಿ ಅನುಮತಿ ಪಡೆಯದೆ ಈ ಯೋಜನೆ ಅನುಷ್ಠಾನಕ್ಕೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಎನ್‌ಜಿಟಿ ಬಿಡಿಎ ವಿವರಣೆ ಕೇಳಿತ್ತು.

‘ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ. ಪರಿಸರ ಇಲಾಖೆಯಿಂದ ಮತ್ತೊಮ್ಮೆ ಹೊಸದಾಗಿ ಅನುಮತಿ ಪಡೆಯುತ್ತೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ಇದರಿಂದ ಕಾಮಗಾರಿ ಟೆಂಡರ್‌ ಕರೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟೆಂಡರ್‌ ಆಹ್ವಾನ: ಹಾದಿ ದೂರ

‘ಯಾವುದೇ ಯೋಜನೆಗೆ ಟೆಂಡರ್‌ ಆಹ್ವಾನಿಸಬೇಕಾದರೆ ಅದಕ್ಕೆ ಬೇಕಾಗುವ ಜಮೀನಿನ ಪೈಕಿ ಶೇ 80ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಪಿಆರ್‌ಆರ್‌ ಭೂಸ್ವಾಧೀನದ ಸರ್ವೆ ಕಾರ್ಯ ಈಗ ಆರಂಭದ ಹಂತದಲ್ಲಿದೆ. ಸರ್ವೆ ಪೂರ್ಣಗೊಂಡು, ಭೂಸ್ವಾಧೀನ ನಡೆಸಿ ನಂತರ ಟೆಂಡರ್‌ ಕರೆಯಲು ಇನ್ನೂ ಸಾಕಷ್ಟು ಸಮಯ ತಗಲುತ್ತದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು