ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೂವರೆ ವರ್ಷ ಕಳೆದರೂ ಪೂರ್ಣಗೊಳ್ಳದ ಕಾಮಗಾರಿ

ಕೋಡಿ ಒಡೆದ ಹೊಸಕೆರೆಹಳ್ಳಿ ಕೆರೆ: ದುರಸ್ತಿ ಕಾರ್ಯ ಆರಂಭ
Last Updated 11 ನವೆಂಬರ್ 2019, 21:16 IST
ಅಕ್ಷರ ಗಾತ್ರ

ಕಬೆಂಗಳೂರು: ಹೊಸಕೆರೆಹಳ್ಳಿ ಕೆರೆಯ ಪುನರುಜ್ಜೀವನ ಕಾರ್ಯ ಆರಂಭವಾಗಿ ನಾಲ್ಕೂವರೆ ವರ್ಷಗಳಾಗಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆಮೆಗತಿಯ ಕಾಮಗಾರಿಯೇ ಕೆರೆಯ ಏರಿ ಒಡೆಯಲು ಕಾರಣವಾಯಿತೇ?

ಹೌದು ಎನ್ನುತ್ತಾರೆ ಈ ಕೆರೆಯ ಸಂರಕ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಕೆರೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಬಿಡಿಎ 2015ರಲ್ಲಿ ಈ ಕೆರೆಯ ಪುನರುಜ್ಜೀವನ ಕಾರ್ಯ ಆರಂಭಿಸಿತ್ತು.

ಬಿಡಿಎ ಇಲ್ಲಿ ವಿಹಾರಪಥ ನಿರ್ಮಿಸಬೇಕಿದೆ. ಒಳಚರಂಡಿಯ ಕೊಳಚೆ ನೀರು ಕೆರೆ ಸೇರುವುದನ್ನು ತಡೆಯಬೇಕಿದೆ. ಕಿರು ಉದ್ಯಾನ ನಿರ್ಮಿಸಿ ಅದರ ನಿರ್ವಹಣೆ ಮಾಡಬೇಕಿದೆ. ವಿಹಾರಕ್ಕಾಗಿ ದಾರಿಯನ್ನೂ ಅರ್ಧಂಬರ್ಧ ನಿರ್ಮಿಸಲಾಗಿದೆ. ಕೆರೆಗೆ ಬೇಲಿಯನ್ನೂ ನಿರ್ಮಿಸುವ ಕೆಲಸವೂ ಅರ್ಧದಲ್ಲೇ ಸ್ಥಗಿತಗೊಂಡಿದೆ. ಇದು ವೆಚ್ಚ ಹೆಚ್ಚಳಕ್ಕೂ ಕಾರಣವಾಗಿದೆ.

‘ನಮಗೆ ತಿಳಿದಂತೆ ಈ ಕಾಮಗಾರಿ ಮೂರು ಬಾರಿ ಸ್ಥಗಿತಗೊಂಡಿದೆ. ಸ್ವಲ್ಪ ದಿನ ಕೆಲಸ ನಡೆಯುತ್ತದೆ. ಮತ್ತೆ ನಿಲ್ಲುತ್ತದೆ’ ಎಂದು ದೂರುತ್ತಾರೆ ಸ್ಥಳೀಯರು.

ಒಳಚರಂಡಿಯ ಕೊಳಚೆ ನೀರು ಜಲಮೂಲದ ಒಡಲು ಸೇರದಂತೆ ತಡೆಯುವ ಕಾಮಗಾರಿಯನ್ನು ಈಗ ಜಲಮಂಡಳಿ ಕೈಗೊಳ್ಳುತ್ತಿದೆ. ಈ ಸಲುವಾಗಿ ಕೆರೆಯ ದಂಡೆ ಹಾಗೂ ಇಲ್ಲಿನ ರಸ್ತೆ ಮಧ್ಯೆ ಕೊಳವೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹೊಸಕೆರೆಹಳ್ಳಿ ಸುತ್ತಮುತ್ತಲಿನ‌ ಪ್ರದೇಶಗಳ‌ ಕೊಳಚೆ ನೀರು ಹರಿವಿಗೆ ಜಲಮಂಡಳಿಯಿಂದ ಪ್ರತ್ಯೇಕ ಕೊಳವೆಮಾರ್ಗ ಅಳವಡಿಸಲಾಗುತ್ತಿದೆ. ಈ ಕೆಲಸವೂ ನಿಧಾನಗತಿಯಲ್ಲೇ ಸಾಗುತ್ತಿದೆ.

ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೆರೆಗೆ ವ್ಯವಸ್ಥಿತ ರೂಪ ನೀಡುವಲ್ಲಿ ಬಿಡಿಎ ಇಚ್ಛಾಶಕ್ತಿ ಪ್ರದರ್ಶಿಸದ ಕಾರಣ ಈ ಜಲಕಾಯವು ಕಸ ಎಸೆಯುವ ತಾಣವಾಗಿ ಮಾರ್ಪಾಡಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಕಾಮಗಾರಿ ವಿಳಂಬ–ಮೇಯರ್‌ ಗರಂ:ಕೆರೆ ಕೋಡಿ ಒಡೆದು ರಾಜರಾಜೇಶ್ವರಿ ನಗರ ವಾರ್ಡ್‌ ವ್ಯಾಪ್ತಿಯ ಪುಷ್ಪಗಿರಿ ಮತ್ತು ಪ್ರಮೋದ್ ಬಡಾವಣೆಗಳಲ್ಲಿ ಸಮಸ್ಯೆ ಉಂಟಾಗಿರುವ ಕುರಿತು ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಸೋಮವಾರ ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಅಧಿಕಾರಿಗಳ ಸಭೆ ನಡೆಸಿದರು.

‘ಕೆರೆಯ ಏರಿಯ ಮಣ್ಣು ಕುಸಿದಿರುವ ಜಾಗದಲ್ಲಿ ತಾತ್ಕಾಲಿಕವಾಗಿ ಮರಳು ಮೂಟೆಗಳನ್ನು ಅಳವಡಿಸಿ ಯಾವುದೇ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಮೇಯರ್‌ ಸೂಚನೆ ನೀಡಿದರು.

‘59 ಎಕರೆ ಪ್ರದೇಶವನ್ನು ಬಿಡಿಎ ಅಭಿವೃದ್ಧಿಪಡಿಸುತ್ತಿದೆ. ಆದರೆ, ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ ಏಕೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುತ್ತಿಗೆದಾರರಿಗೆ ಸೂಚನೆ ನೀಡಿ ಕೂಡಲೇ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ಕೆರೆಗೆ ಹಾಗೂ ರಾಜಕಾಲುವೆಗಳಿಗೆ ಒಳಚರಂಡಿಯ ಕೊಳಚೆ ನೀರು ಸೇರದಂತೆ ಕ್ರಮ ವಹಿಸಬೇಕು’ ಎಂದು ಜಲಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಎಲ್ಲಾ ಕೆರೆಗಳಿಗೆ ಸುತ್ತಲೂ ಬೇಲಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಬಿಡಿಎಯಿಂದ ಬಿಬಿಎಂಪಿಗೆ 29 ಕೆರೆ
‘ಬಿಡಿಎ ವ್ಯಾಪ್ತಿಯಲ್ಲಿರುವ 32 ಕೆರೆಗಳ ಪೈಕಿ ಬೆಳ್ಳಂದೂರು, ವರ್ತೂರು ಹಾಗೂ ಹೊಸಕೆರೆಹಳ್ಳಿ ಕೆರೆಗಳನ್ನು ಬಿಟ್ಟು ಉಳಿದ 29 ಕೆರೆಗಳ ಸರ್ವೆ ಕಾರ್ಯ ಮುಗಿದಿದೆ. ಅವುಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತ ಜಿ.ಸಿ.ಪ್ರಕಾಶ್‌ ತಿಳಿಸಿದರು.

‘ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಒತ್ತುವರಿ ತೆರವು ಕಾರ್ಯ ಮುಗಿದಿದೆ. ಇಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಮಾರ್ಷಲ್‌ಗಳನ್ನು ನೇಮಕ ಮಾಡಬೇಕಿದೆ. ಬೇಲಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಪಾಲಿಕೆಗೆ ಹಸ್ತಾಂತರಿಸಲಾಗುವುದು. ಹೊಸಕೆರೆಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿದ ಬಳಿಕ ಪಾಲಿಕೆಗೆ ಹಸ್ತಾಂತರಿಸಲಾಗುವುದು’ ಎಂದು ತಿಳಿಸಿದರು‌.

‘ಕೊಳಚೆ ನೀರು ಕೆರೆ ಸೇರಿದರೆ ಜಲಮಂಡಳಿಗೆ ದಂಡ’
ಕೆರೆಗಳಿಗೆ ಕೊಳಚೆ ನೀರು ಬಿಟ್ಟರೆ ಜಲಮಂಡಳಿಗೆ ದಂಡ ವಿಧಿಸುವಂತೆ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ಗೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಸೂಚನೆ ನೀಡಿದರು. ಪಾಲಿಕೆಯ ಪ್ರತಿ ವಲಯದಲ್ಲೂ ಒಂದು ಸೂಪರ್ ಸಕ್ಕರ್ ಯಂತ್ರವನ್ನು ಹೊಂದುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT