ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಸಿ ಹಬ್ಬ | ನಾದದಲೆಯ ಪುಳಕ; ಇತಿಹಾಸದ ಮೆಲುಕು

‘ಬಿಐಸಿ ಹಬ್ಬ’ದಲ್ಲಿ ಗಮನಸೆಳೆದ ಲೋಕೊಮೊಟಿವ್ ಎಂಜಿನ್‌ ರೈಲುಗಳ ಮಾಹಿತಿ
Last Updated 25 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ಮನರಂಜಿಸಿದ ಸಂಗೀತದ ನಿನಾದಕ್ಕೆ ತಲೆದೂಗಿದ ಪ್ರೇಕ್ಷಕರು, ಬೆಂಗಳೂರಿನ ಇತಿಹಾಸದ ಅನಾವರಣ, ಸರ್ಕಾರದ ಧೋರಣೆ ಮತ್ತು ನಡಾವಳಿಗಳನ್ನು ಒರೆಗೆ ಹಚ್ಚುವಂತಹ ಗೋಷ್ಠಿಗಳು, ಮಕ್ಕಳ ಕಲರವ...

ನಗರದ ದೊಮ್ಮಲೂರಿನಲ್ಲಿರುವ ‘ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌’ (ಬಿಐಸಿ) ಆಯೋಜಿಸಿರುವ ಐದನೇ ಆವೃತ್ತಿಯ ‘ಬಿಐಸಿ ಹಬ್ಬ’ದಲ್ಲಿನ ವೇದಿಕೆಗಳಲ್ಲಿ ಶನಿವಾರ ಕಂಡ ನೋಟಗಳಿವು.

ಐಶ್ವರ್ಯ ವಿದ್ಯಾ ರಘುನಾಥ್‌ ಮತ್ತು ಬೃಂದಾ ಮಾಣಿಕ್‌ವಾಸಕನ್‌ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಸಂಗೀತ ಪ್ರೇಮಿಗಳ ಮನತಣಿಸಿತು. ಚಾರುಲತಾ ರಾಮಾನುಜನ್‌ ಅವರು ವಯಲಿನ್‌, ದೆಹಲಿ ಎಸ್‌. ಸಾಯಿರಾಮ್‌ ಅವರು ಮೃದಂಗ ಮತ್ತು ಚಂದ್ರಶೇಖರ್‌ ಶರ್ಮಾ ಅವರು ಘಟಂನಲ್ಲಿ ಸಾಥ್‌ ನೀಡಿದರು.

‘ನಮ್ಮ ಬೆಂಗಳೂರಿನ ಕಥೆಗಳು’ ವೇದಿಕೆಯು ಬೆಂಗಳೂರಿನ ಇತಿಹಾಸ ಮತ್ತು ಈಗಿನ ಸ್ಥಿತಿಗತಿಯನ್ನು ತೆರೆದಿಟ್ಟಿತು.

ಲೋಕೊಮೊಟಿವ್ ಎಂಜಿನ್‌ ರೈಲುಗಳ ಕಥೆಯನ್ನು ಬಿಚ್ಚಿಟ್ಟ ನಿವೃತ್ತ ಐಎಎಸ್‌ ಅಧಿಕಾರಿ ಟಿ.ಆರ್‌. ರಘುನಂದನ್‌, ‘ಬೆಂಗಳೂರಿನಲ್ಲಿ ಆರು ಲೋಕೊಮೊಟಿವ್ ಎಂಜಿನ್‌ ರೈಲುಗಳಿವೆ. ಈ ರೈಲುಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ’ ಎಂದು ವಿಷಾದ
ವ್ಯಕ್ತಪಡಿಸಿದರು.

‘1888ರ ಲೋಕೊಮೊಟಿವ್‌ ಎಂಜಿನ್‌ ರೈಲು ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯದ ಆವರಣದಲ್ಲಿದೆ. ನಗರ ರೈಲು ನಿಲ್ದಾಣದಲ್ಲಿ 1931ರ ರೈಲು ಮತ್ತು ಯಲಹಂಕದ ರೈಲು ಗಾಲಿ ಕಾರ್ಖಾನೆ ಆವರಣದಲ್ಲಿ 1954ರ ರೈಲುಗಳನ್ನು ಪ್ರದರ್ಶನಕ್ಕಿರಿಸಲಾಗಿದೆ. ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನದಲ್ಲಿ ಹಳೆಯ ಲೋಕೊಮೊಟಿವ್‌ ಎಂಜಿನ್‌ ರೈಲನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜಾಫರ್‌ ಷರೀಫ್‌ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಇದನ್ನು ತರಲಾಗಿತ್ತು. ಪ್ರತಿಯೊಂದು ಲೋಕೊಮೊಟಿವ್‌ ಎಂಜಿನ್‌ ವಿಶಿಷ್ಟವಾಗಿದೆ. ಈ ರೈಲುಗಳಿಗೆ ಹೊಸ ಸ್ಪರ್ಶ ನೀಡಿ ಸಂಚರಿಸುವಂತೆ ಮಾಡಲು ಸಾಧ್ಯವೇ ಎನ್ನುವ ಬಗ್ಗೆಯೂ ಯೋಚಿಸಬೇಕಾಗಿದೆ. ದಾರ್ಜಿಲಿಂಗ್‌ನಲ್ಲಿ ಲೋಕೊಮೊಟಿವ್‌ ಎಂಜಿನ್‌ ಸಂಚರಿಸುತ್ತಿದೆ. ಈ ಎಂಜಿನ್‌ಗಳಲ್ಲಿ ಬಾಯ್ಲರ್‌ ಪ್ರಮುಖ ಪಾತ್ರವಹಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ನಗರ ಅಂದು ಹೇಗಿತ್ತು, ಈಗ ಏನಾಗುತ್ತಿದೆ ಎಂಬು ದನ್ನು ತುಲನಾತ್ಮಕವಾಗಿ ವಿಶ್ಲೇಷಿಸುವ ಕಿರುಚಿತ್ರಗಳು ಸಹ ಗಮನಸೆಳೆದವು.

ಇತ್ತೀಚೆಗೆ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ನಂತರ ಜನರು ಅನುಭವಿಸಿದ ಸಂಕಷ್ಟಗಳ ಕುರಿತಾದ ಕಿರುಚಿತ್ರವು ಅಭಿವೃದ್ಧಿಯ ಪಥ ಹೇಗಿರಬೇಕು ಎನ್ನುವುದನ್ನು ವಿಶ್ಲೇಷಣೆಗೆ ಒಳಪಡಿಸಿತ್ತು.

‘ಮನೆಯಲ್ಲಿ ಸೊಂಟದ ಮಟ್ಟ ನೀರು. ಆಹಾರ ಧಾನ್ಯಗಳು ಸಹ ನೀರಲ್ಲಿ ಮುಳುಗಿದ್ದವು. ವಾಷ್‌ರೂಮ್‌ನಲ್ಲಿಯೂ ನೀರು ಇರಲಿಲ್ಲ’ ಎಂದು ನಾಗರಿಕರು ಅಳಲು ತೋಡಿ ಕೊಂಡ ದೃಶ್ಯಗಳನ್ನು ಸೆರೆಹಿಡಿದು, ಅದನ್ನು ಕಿರುಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈಗಿರುವ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಪರಿಹಾರ ರೂಪಿಸದಿದ್ದರೆ ಮತ್ತೊಮ್ಮೆ ಸಂಕಷ್ಟಗಳು ಎದುರಾಗಲಿವೆ ಎನ್ನುವ ಸಂದೇಶವನ್ನು ಸಹ ಕಿರುಚಿತ್ರದ ಮೂಲಕ ನೀಡಲಾಯಿತು.

ವನ್ಯಜೀವಿ ಛಾಯಾಗ್ರಾಹಕ 16 ವರ್ಷದ ಆಹಾನ್‌ ದೇಸಾಯಿ ಪ್ರದರ್ಶಿಸಿದ ಕಿರುಚಿತ್ರ ಸಹ ವಿಭಿನ್ನವಾಗಿತ್ತು. ಜಕ್ಕೂರು, ತಿಮ್ಮಸಂದ್ರ ಸೇರಿ ನಗರದ ವಿವಿಧ ಕೆರೆಗಳ ಆವರಣದಲ್ಲಿ ಪಕ್ಷಿಗಳನ್ನು ಇವರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ಕಿರುಚಿತ್ರಗಳ ಪ್ರದರ್ಶನಕ್ಕೆ 60 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 20 ಅರ್ಜಿಗಳನ್ನು ಆಯ್ಕೆ ಮಾಡಲಾಗಿತ್ತು.

ಬಿಐಸಿ ಹಬ್ಬದಲ್ಲಿ ಪುಟಾಣಿಗಳ ಲೋಕವೂ ತೆರೆದುಕೊಂಡಿತ್ತು. ಮಕ್ಕಳ ಕೂಟ ಗ್ಯಾಲರಿಯಲ್ಲಿ ಮಣ್ಣಿನ ಮೂರ್ತಿಗಳ ತಯಾರಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಹಬ್ಬದಲ್ಲಿ ವೈವಿಧ್ಯಮಯ ವಿಷಯಗಳ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು.

‘ಅಂಚೆಪೇಟೆ, ಅಂಚೆಪಾಳ್ಯ, ಅಂಚೆಕೆರೆ...’

ಬೆಂಗಳೂರು ಸೇರಿದಂತೆ ಕರ್ನಾಟಕದ ಅಂಚೆ ಇತಿಹಾಸವನ್ನು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತೆರೆದಿಟ್ಟರು.

‘ಚಿಕ್ಕಪೇಟೆಯಲ್ಲಿ ಅಂಚೆಪೇಟೆ ಇದೆ. ಕೆಂಗೇರಿಯಲ್ಲಿ ಅಂಚೆ ಕೆರೆ ಇದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಅಂಚೆಬೆಟ್ಟನಹಳ್ಳಿ, ನೆಲಮಂಗಲದ ಬಳಿ ಅಂಚೆಪಾಳ್ಯ ಹೆಸರಿನ ಪ್ರದೇಶಗಳಿವೆ. ಇದೇ ರೀತಿ ಅಂಚೆ ಹೆಸರು ಹೊಂದಿರುವ 15 ಸ್ಥಳಗಳು ಕರ್ನಾಟಕದಲ್ಲಿವೆ’ ಎಂದು ವಿವರಿಸಿದರು.

‘ನಗರದ ಪ್ರಧಾನ ಅಂಚೆ ಕಚೇರಿ (ಜಿಪಿಒ) ಕಟ್ಟಡವನ್ನು 1831ರಲ್ಲಿ ನಿರ್ಮಿಸಲಾಗಿದೆ. ಬಳ್ಳಾರಿಯಲ್ಲಿ ವಿಭಾಗೀಯ ಕಚೇರಿಯನ್ನು 1870ರಲ್ಲಿ ನಿರ್ಮಿಸಿದ್ದು, ಈಗಲೂ ಸುಸಜ್ಜಿತವಾಗಿದೆ. ಈ ಕಟ್ಟಡದಲ್ಲಿ 30 ಕಮಾನುಗಳಿವೆ. ಮೂಲ ಸ್ವರೂಪದಲ್ಲೇ ಈ ಕಟ್ಟಡವನ್ನು ಉಳಿಸಿಕೊಳ್ಳಲಾಗಿದ್ದು, ಅಲ್ಲಿ ಈಗಲೂ ಅಂಚೆ ಕಚೇರಿ ಕಾರ್ಯನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

‘ಪೋಕ್ಸೊ: ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿ’

‘ಪೋಕ್ಸೊಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ದಾಖಲಾದ ಒಂದು ವರ್ಷದ ಒಳಗೆ ಪೂರ್ಣಗೊಳಿಸಬೇಕು ಎಂದು ಕಾಯ್ದೆ ರೂಪಿಸಲಾಗಿದ್ದು, ಇನ್ನೂ ಶೇಕಡ 92.6ರಷ್ಟು ಪ್ರಕರಣಗಳು ಬಾಕಿ ಉಳಿದಿವೆ’ ಎಂದು ಹಿರಿಯ ಕಾನೂನು ಸಂಶೋಧಕಿ ಶ್ರುತಿ ರಾಮಕೃಷ್ಣನ್‌ ತಿಳಿಸಿದರು.

ಬಿಐಸಿ ಹಬ್ಬದಲ್ಲಿ ನೀತಿಗಳ ಕುರಿತಾದ ಗೋಷ್ಠಿಯಲ್ಲಿ ‘ಮಕ್ಕಳ ಸ್ನೇಹಿಯಾಗಿ ಪೋಕ್ಸೊ ಕಾಯ್ದೆಯ ಅನುಷ್ಠಾನಗೊಳಿಸುವಲ್ಲಿ ನ್ಯಾಯಾಂಗದ ಪಾತ್ರ’ ಕುರಿತು ಮಾತನಾಡಿದ ಅವರು, ‘ಸಂತ್ರಸ್ತ ಮಕ್ಕಳಿಗೆ ಮತ್ತು ಕುಟುಂಬಕ್ಕೆ ನ್ಯಾಯಾಲಯ ವ್ಯವಸ್ಥೆಯ ಬಗ್ಗೆ ವಿಚಾರಣೆಗೂ ಮುನ್ನವೇ ಮಾರ್ಗದರ್ಶನ ನೀಡಬೇಕು. ಬಹುತೇಕ ಸಂದರ್ಭಗಳಲ್ಲಿ ಸಂತ್ರಸ್ತ ಮಕ್ಕಳು ನ್ಯಾಯಾಲಯದಲ್ಲೇ ಸಾಕ್ಷಿ ಹೇಳುವಾಗ ಸರ್ಕಾರಿ ವಕೀಲರನ್ನು ಮೊದಲ ಬಾರಿ ಭೇಟಿಯಾಗುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT