ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ನಗರ ಜಿಲ್ಲಾ ಸಾಹಿತ್ಯ ಸಮ್ಮೇಳನ ಇಂದಿನಿಂದ

ಲೇಖಕಿ ಎಚ್.ಎಸ್. ಶ್ರೀಮತಿ ಸಮ್ಮೇಳನಾಧ್ಯಕ್ಷೆ * ಎರಡು ದಿನ ವಿವಿಧ ಕಾರ್ಯಕ್ರಮ
Last Updated 10 ಮಾರ್ಚ್ 2023, 20:43 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 16ನೇ ಸಾಹಿತ್ಯ ಸಮ್ಮೇಳನವನ್ನು ಇದೇ ಶನಿವಾರ ಮತ್ತು ಭಾನುವಾರ ವಸಂತನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದೆ.

ಲೇಖಕಿ ಎಚ್.ಎಸ್. ಶ್ರೀಮತಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.

‘ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಉಳಿದರೆ, ಇಡೀ ರಾಜ್ಯದಲ್ಲಿ ಕನ್ನಡ ಉಳಿದೀತು ಎಂಬ ಆಶಯದೊಂದಿಗೆ ಸಮ್ಮೇಳನ ನಡೆಸಲಾಗುತ್ತಿದೆ.‌ ಸಮ್ಮೇಳನದ ವೇದಿಕೆಗೆ ಬೆಂಗಳೂರು ನಗರ ಜಿಲ್ಲೆಯ ಮೊದಲ ಸಾಹಿತಿ ‘ಆನೇಕಲ್ ನಾಡಪ್ರಭು ಮುಮ್ಮಡಿ ತಮ್ಮೇಗೌಡರ ವೇದಿಕೆ’ ಎಂದೂ, ‌ಮುಖ್ಯದ್ವಾರಗಳಿಗೆ ‘ಶ್ರೀ ಸರ್ಪಭೂಷಣ ಶಿವಯೋಗಿಗಳ ಹೆಬ್ಬಾಗಿಲು’ ಮತ್ತು ‘ಶಾಸನಶಾಸ್ತ್ರ ಪಿತಾಮಹ ಬೆಂಜಮೀನ್ ಲೂಯಿ ರೈಸ್ ಹೆಬ್ಬಾಗಿಲು’ ಎಂದೂ ಹೆಸರಿಡಲಾಗಿದೆ.

ಶನಿವಾರ ಬೆಳಿಗ್ಗೆ 8 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಧ್ವಜಾರೋಹಣ ನೆರವೇರಲಿದೆ. 8.30ಕ್ಕೆ ವಿಧಾನಸೌಧದ ಮುಂಭಾಗದಲ್ಲಿರುವ ಶಾಂತವೇರಿ ಗೋಪಾಲಗೌಡ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಕನ್ನಡ ಜಾಗೃತಿ ಮೆರವಣಿಗೆ ನಡೆಯಲಿದೆ. ಕನ್ನಡ ಜಾಗೃತಿ ಜ್ಯೋತಿಯನ್ನು ಸಾಹಿತಿ ದೊಡ್ಡರಂಗೇಗೌಡ ಬೆಳಗಿಸಲಿದ್ದಾರೆ. ಮೆರವಣಿಗೆಗೆ ಸಂಸದ ಪಿ.ಸಿ. ಮೋಹನ್ ಚಾಲನೆ ನೀಡಲಿದ್ದಾರೆ. ವಿವಿಧ ಜಾನಪದ ಕಲಾತಂಡಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡ ಪ್ರೇಮಿಗಳು, ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ತಿಳಿಸಿದ್ದಾರೆ.

ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಸಾಹಿತಿ ಓ.ಎಲ್. ನಾಗಭೂಷಣಸ್ವಾಮಿ ಉದ್ಘಾಟಿಸಲಿದ್ದಾರೆ. ಈ ವೇಳೆ ವಿವಿಧ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ. ಸಮ್ಮೇಳನದಲ್ಲಿ ಮಹಿಳಾಭಿವೃದ್ಧಿ ಚಿಂತನೆಗಳು, ಬೆಂಗಳೂರು ಇತಿಹಾಸ ಹಾಗೂ ಸಂಸ್ಕೃತಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೇಂದ್ರಿತ ವಿದ್ವತ್‌ ಗೋಷ್ಠಿಗಳು ನಡೆಯಲಿವೆ. ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದವೂ ಇರಲಿದೆ. ಎರಡೂ ದಿನ ಕನ್ನಡ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಕವಿಗೋಷ್ಠಿ, ನಾಟಕಗಳ ಪ್ರದರ್ಶನ, ಸಾಧಕರಿಗೆ ಸನ್ಮಾನ ಹಾಗೂ ಜನಪ್ರಿಯ ಗಾಯಕರಿಂದ ಸಂಗೀತ ರಸದೌತಣ ಇರಲಿದೆ ಎಂದು ಹೇಳಿದ್ದಾರೆ.

ಭಾನುವಾರ ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಲಯದ ಐಜಿಪಿ ಬಿ.ಆರ್. ರವಿಕಾಂತೇಗೌಡ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಸಾಹಿತಿ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡೂ ದಿನ ಊಟದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT