ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಉತ್ಸವದಲ್ಲಿ ಭಕ್ತ ಸಾಗರ: ರಾತ್ರಿಯಿಡೀ ಗೋವಿಂದ ಜಪ, ಬೆಳಿಗ್ಗೆ ರಥಗಳ ಸೊಬಗು

Last Updated 7 ಏಪ್ರಿಲ್ 2023, 20:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ಗುರುವಾರ ರಾತ್ರಿಯಿಡೀ ಹಾಗೂ ಶುಕ್ರವಾರ ಸಂಜೆಯವರೆಗೆ ಜನಜಂಗುಳಿ. ಬೆಳಗಿನ ಜಾವದವರೆಗೆ ಕರಗ ಉತ್ಸವದ ಸಂಭ್ರಮ, ಸಡಗರ. ನಂತರ ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ತೇರು–ರಥಗಳಿಗೆ ಭಕ್ತಿಭಾವ.

ಬೆಂಗಳೂರಿನ ಸಾಂಪ್ರದಾಯಿಕ ಹಾಗೂ ಪ್ರಸಿದ್ಧ ಕರಗ ಉತ್ಸವದ ಚಿತ್ರಣ ಇದು. ಕೋವಿಡ್‌ ನಂತರ ಅತ್ಯಂತ ವಿಜೃಂಭಣೆಯಿಂದ ಉತ್ಸವ ನಡೆಯಿತು. ತಿಗಳರಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ತಡರಾತ್ರಿ 2.30ರ ವೇಳೆಗೆ ಕರಗ ಉತ್ಸವ ಆರಂಭವಾಯಿತು. ಅರ್ಚಕ ಜ್ಞಾನೇಂದ್ರ ಅವರು ಪೂರ್ವ ಪೂಜಾಕ್ರಮಗಳನ್ನು ಪೂರೈಸಿ 12.30ರ ವೇಳೆಗೆ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದರು.

ದೇವಸ್ಥಾನದ ಒಳಗೆ ಹಸಿ ಕರಗವನ್ನು ಸ್ಥಾಪಿಸಿದ್ದ ಸ್ಥಳದಲ್ಲಿ ಧಾರ್ಮಿಕ ವಿಧಿ–ವಿಧಾನಗಳು ಸುಮಾರು ಒಂದೂವರೆ ತಾಸು ನಡೆದವು. ಹೊರಭಾಗದಲ್ಲಿ ಧರ್ಮರಾಯಸ್ವಾಮಿ ರಥದ ಸಿದ್ಧತೆ ನಡೆದಿತ್ತು. ಉತ್ಸವ ಮೂರ್ತಿಗಳನ್ನು ತಂದು ಸಿಂಗರಿಸಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿದ್ದ ವೀರಕುಮಾರರು ದೀ ಧಿತ್ತಿ... ಎಂಬ ಉದ್ಗಾರದೊಂದಿಗೆ ಕತ್ತಿಯನ್ನು ಎದೆಗೆ ಬಡಿದುಕೊಂಡು ನಮಸ್ಕರಿಸುತ್ತಿದ್ದರು. ಗೋವಿಂದ... ಗೋವಿಂದಾ.. ಎಂಬ ಘೋಷಣೆ ಮೊಳಗುತ್ತಿತ್ತು.

ಸಾವಿರಾರು ಕಣ್ಣುಗಳು ಕರಗ ಉತ್ಸವ ದೇವಸ್ಥಾನದಿಂದ ಹೊರ ಬರುವುದನ್ನೇ ದಿಟ್ಟಿಸಿ ಕಾಯುತ್ತಿದ್ದವು. ಎಲ್ಲ ಪೇಟೆಗಳ ಗಲ್ಲಿಗಳಲ್ಲಿ ಜನ ಕಾಯುತ್ತಿದ್ದರು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಮ್ಮ ಸೋದರ ಹಾಗೂ ಪುತ್ರಿಯೊಂದಿಗೆ 12.30ರ ವೇಳೆಗೆ ಬಂದು, ದೇವಸ್ಥಾನದ ಬಳಿ ಕರಗ ಉತ್ಸವ ನೋಡಲು ಕಾದಿದ್ದರು.

ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ದೇವಸ್ಥಾನದ ದ್ವಾರದಲ್ಲಿ ಕರಗ ಒಂದು ಬಾರಿ ಕಾಣಿಸಿತು. ನಂತರದ ಅರ್ಧ ಗಂಟೆ ದೇವಸ್ಥಾನದ ಗರ್ಭಗುಡಿಯಲ್ಲಿ ಸುತ್ತ ವಿಧಿಗಳನ್ನು ಪೂರೈಸಿದ ನಂತರ ಕರಗ ಧರ್ಮರಾಯ ಸ್ವಾಮಿ ಗುಡಿಯ ಹೊರಗೆ ಬಂದಿತು. ಭಕ್ತರು ಮಲ್ಲಿಗೆ ಹೂವಿನ ಅಭಿಷೇಕ ಮಾಡಿದರು. ಮೂರ್ನಾಲ್ಕು ಸುತ್ತು ಹಾಕಿದ ಮೇಲೆ, ಹಲಸೂರು ಪೇಟೆಯ ಆಂಜನೇಯಸ್ವಾಮಿ, ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿತು. ವಿಶೇಷ ಆಹ್ವಾನಿತರಾಗಿದ್ದ ವೀರೇಂದ್ರ ಹೆಗ್ಗೆಡೆ ಅವರು ಇರುವಲ್ಲಿಗೆ ಕರಗ ಬಂದಿತು. ಹೆಗ್ಗಡೆ ಕುಟುಂಬ ಮಲ್ಲಿಗೆ ಹೂವನ್ನು ಸಮರ್ಪಿಸಿತು. ಅರ್ಚಕ ಜ್ಞಾನೇಂದ್ರ ನಿಂಬೆಹಣ್ಣು ನೀಡಿದರು. ವಿಧಾನಪರಿಷತ್‌ ಸದಸ್ಯ ಪಿ.ಆರ್‌. ರಮೇಶ್‌ ಇದ್ದರು.

ನಂತರ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಿ, ಮಸ್ತಾನ್ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು.. ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಿದ ಕರಗ ಮುಂಜಾನೆ ಧರ್ಮರಾಯಸ್ವಾಮಿ ದೇವಸ್ಥಾನ ತಲುಪಿತು. ಈ ಎಲ್ಲ ರಸ್ತೆ–ಗಲ್ಲಿಗಳಲ್ಲಿ ಜನಜಂಗುಳಿಯಿತ್ತು.

ಕರಗ ಉತ್ಸವ ಹೊರಟ ನಂತರ ಧರ್ಮರಾಯಸ್ವಾಮಿ ರಥೋತ್ಸವ ಮುಖ್ಯ ರಸ್ತೆಗಳಲ್ಲಿ ಸಾಗಿತು. ಭಕ್ತರು ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು. ಈ ರಥದ ಹಿಂದೆ ನಗರದ ಹಲವು ಭಾಗಗಳಿಂದ ಆಗಮಿಸಿದ್ದ ನೂರಾರು ತೇರು–ರಥಗಳು ಸಾಗಿದವು. ಶುಕ್ರವಾರ ಬೆಳಿಗ್ಗೆಯಿಂದ ಈ ತೇರು–ರಥಗಳು ಅವೆನ್ಯೂ ರಸ್ತೆ, ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ನಿಂತಿದ್ದವು. ಬೆಳಿಗ್ಗೆಯಿಂದ ಸಂಜೆಯವರೆಗೂ ತಂಡೋಪತಂಡವಾಗಿ ಬಂದ ನಾಗರಿಕರು, ತೇರು–ರಥಗಳಿಗೆ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT