ಭಾನುವಾರ, ಜುಲೈ 3, 2022
27 °C

‘ಮೆಜೆಸ್ಟಿಕ್’ ಇದು ನಿಲ್ದಾಣವಲ್ಲ, ಚಿತ್ರಮಂದಿರ!

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೆಜೆಸ್ಟಿಕ್ ಎಂಬುದು ಬೆಂಗಳೂರಿನ ಹೆಗ್ಗುರುತುಗಳಲ್ಲೊಂದು. ಕೆಂಪೇಗೌಡ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣಗಳನ್ನು ಹೊಂದಿರುವ ಬೆಂಗಳೂರಿನ ಕೇಂದ್ರ ಸ್ಥಾನವು ಜನಮಾನಸದಲ್ಲಿ ‘ಮೆಜೆಸ್ಟಿಕ್’ ಎಂದೇ ಪ್ರಸಿದ್ಧಿ. ಈ ಜಾಗಕ್ಕೆ ‘ಮೆಜೆಸ್ಟಿಕ್’ ಎಂಬ ಇಂಗ್ಲಿಷ್ ಪದ ಬಳಕೆಗೆ ಬಂದಿರುವುದೇ ಒಂದು ಕುತೂಹಲ.

‘ಮೆಜೆಸ್ಟಿಕ್’ ಎಂಬ ಪದಕ್ಕೆ ಕನ್ನಡದಲ್ಲಿ ‘ಭವ್ಯ’ ಎಂಬ ಅರ್ಥವಿದೆ. ಆದರೆ, ‘ಮೆಜೆಸ್ಟಿಕ್’ ಪ್ರದೇಶಕ್ಕೆ ಭವ್ಯವಾದ ಸ್ಥಳ ಎಂಬರ್ಥದಲ್ಲಿ ಆ ಹೆಸರು ಪಡೆದಿಲ್ಲ. 1920–25ರ ನಡುವೆ ನಿರ್ಮಾಣಗೊಂಡಿದ್ದ ‘ಮೆಜೆಸ್ಟಿಕ್’ ಎಂಬ ಚಿತ್ರಮಂದಿರ ಇಲ್ಲಿತ್ತು. ಈ ಪ್ರದೇಶವು ಈ ಹೆಸರಿನಿಂದ ಪರಿಚಿತವಾಗಲು ಈ ಚಿತ್ರಮಂದಿರವೇ ಕಾರಣ.

1920ರ ದಶಕದಲ್ಲಿ ಬೆಂಗಳೂರು ನಗರದಲ್ಲಿ ಸಾರ್ವಜನಿಕವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಜಾಗವೆಂದರೆ ದೊಡ್ಡಣ್ಣ ಹಾಲ್ ಮತ್ತು ಮೆಜೆಸ್ಟಿಕ್ ಚಿತ್ರಮಂದಿರ. ದೊಡ್ಡ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳು ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ‘ಮೆಜೆಸ್ಟಿಕ್’ ಚಿತ್ರಮಂದಿರವೂ ಒಂದು. 

ಅದು ಮೂಕಿ ಚಿತ್ರಗಳ ಕಾಲ. ಆಗೊಂದು, ಈಗೊಂದು ಚಿತ್ರಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದವು. ಉಳಿದ ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು ನಡೆಯುತ್ತಿದ್ದವು. ಬಸವನಗುಡಿ, ಚಾಮರಾಜಪೇಟೆ, ಮಲ್ಲೇಶ್ವರ ಹಾಗೂ ಇತರೆಡೆಗಳಿಂದ ಬರುತ್ತಿದ್ದ ಜನ ‘ಮೆಜೆಸ್ಟಿಕ್‌’ಗೆ (ಚಿತ್ರಮಂದಿರಕ್ಕೆ) ಹೋಗೋಣ’ ಎಂದು ಹೇಳುತ್ತಿದ್ದರು. ತಂಡೋಪತಂಡವಾಗಿ ಬಂದು ಚಲನಚಿತ್ರ ಮತ್ತು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು.

‘ಮೆಜೆಸ್ಟಿಕ್‌’ ಚಿತ್ರಮಂದಿರವನ್ನೇ ಇಲ್ಲಿನ ಸುತ್ತಮುತ್ತಲ ಪ್ರದೇಶದ ಹೆಗ್ಗುರುತನ್ನಾಗಿ ಜನ ಬಳಸುತ್ತಿದ್ದರು. ಕ್ರಮೇಣ ಬಹಳಷ್ಟು ಪ್ರಸಿದ್ಧ ಪಡೆದಿದ್ದ ಚಿತ್ರಮಂದಿರ ಸುತ್ತಮುತ್ತಲಿನ ಇಡೀ ಪ್ರದೇಶವೇ ‘ಮೆಜೆಸ್ಟಿಕ್‌’ ಎಂದು ಹೆಸರು ಪಡೆಯಿತು ಎಂದು ಮೆಜೆಸ್ಟಿಕ್ ಇತಿಹಾಸ ತಿಳಿದವರು ಹೇಳುತ್ತಾರೆ.

ಹೀಗೆ ಚಿತ್ರಮಂದಿರವೊಂದರ ಹೆಸರು ಬೆಂಗಳೂರಿನ ಕೇಂದ್ರ ಸ್ಥಾನದ ಹೆಸರಾಯಿತು. ಈಗ ಬೆಂಗಳೂರು ಮಾತ್ರವಲ್ಲ ರಾಜ್ಯ ಮತ್ತು ಹೊರ ರಾಜ್ಯಗಳ ಮೂಲೆ ಮೂಲೆಗೂ ಈ ಮೆಜೆಸ್ಟಿಕ್‌ ಹೆಸರುವಾಸಿ. ‘ಮೆಜೆಸ್ಟಿಕ್‌’ ಹೆಸರಿನಲ್ಲಿ ಕನ್ನಡದಲ್ಲಿ ಸಿನಿಮಾ ಕೂಡ ನಿರ್ಮಾಣವಾಗಿದೆ.

 

ಕೆರೆಯಲ್ಲಿ ನಿರ್ಮಾಣವಾದ ಬಸ್ ನಿಲ್ದಾಣ

ಧರ್ಮಾಂಬುಧಿ ಕೆರೆ ದಂಡೆಯ ಸುತ್ತ ನಗರ ಸಾರಿಗೆ ಬಸ್‌ಗಳನ್ನು ನಿಲ್ಲಿಸಲಾಗುತ್ತಿತ್ತು. ಹೀಗಾಗಿ 1964ರಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಕೆರೆ ಜಾಗವನ್ನು ಸಾರಿಗೆ ಇಲಾಖೆಗೆ ಹಸ್ತಾಂತರ ಮಾಡಲಾಯಿತು.

ಅಂದಿನ ಮೈಸೂರು ಸರ್ಕಾರವು 1969ರಲ್ಲಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿತ್ತು. 1980ರ ಹೊತ್ತಿಗೆ ಕೆಂಪೇಗೌಡ ಬಸ್‌ ನಿಲ್ದಾಣತಲೆ ಎತ್ತಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು