ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಪೇಟೆಗಳಲ್ಲಿ ‘ಬೆಂಗಳೂರು ಕರಗ’ದ ಸಂಭ್ರಮ

ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ಮಂಗಳವಾರ ರಾತ್ರಿಯಿಡೀ ಹಾಗೂ ಬುಧವಾರ ಸಂಜೆಯವರೆಗೆ ಜನಜಂಗುಳಿಯಿತ್ತು.
Published 24 ಏಪ್ರಿಲ್ 2024, 15:49 IST
Last Updated 24 ಏಪ್ರಿಲ್ 2024, 15:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪೇಟೆಗಳಲ್ಲಿ ಮಂಗಳವಾರ ತಡರಾತ್ರಿ ನಡೆದ ಬೆಂಗಳೂರಿನ ಸಾಂಪ್ರದಾಯಿಕ, ಪ್ರಸಿದ್ಧ ಕರಗ ಉತ್ಸವದ ಸಂಭ್ರಮ, ರಥಗಳ ಮೆರವಣಿಗೆ ವೈಭವವನ್ನು ಸಾವಿರಾರು ನಾಗರಿಕರು ಬುಧವಾರ ಸಂಜೆಯವರೆಗೂ ಕಣ್ತುಂಬಿಕೊಂಡರು. ಎಲ್ಲೆಲ್ಲೂ ಗೋವಿಂದ... ಗೋವಿಂದಾ.. ಘೋಷಣೆ ಮೊಳಗಿತ್ತು.

ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ಮಂಗಳವಾರ ರಾತ್ರಿಯಿಡೀ ಹಾಗೂ ಬುಧವಾರ ಸಂಜೆಯವರೆಗೆ ಜನಜಂಗುಳಿಯಿತ್ತು. ಚೈತ್ರ ಪೌರ್ಣಮಿಯಂದು ಅರ್ಚಕ ಎ. ಜ್ಞಾನೇಂದ್ರ ಅವರು ಪೂರ್ವ ಪೂಜಾಕ್ರಮಗಳನ್ನು ಪೂರೈಸಿ, ತಿಗಳರಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಬಂದರು. ಹಸಿ ಕರಗವನ್ನು ಸ್ಥಾಪಿಸಿದ್ದ ಸ್ಥಳದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ನಂತರ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ದ್ರೌಪದಿದೇವಿ ಕರಗ ಉತ್ಸವ ಧರ್ಮರಾಯಸ್ವಾಮಿ ದೇವಸ್ಥಾನದಿಂದ ತಡರಾತ್ರಿ 2.15ರ ವೇಳೆಗೆ ಆರಂಭವಾಯಿತು.

ಸಹಸ್ರಾರು ಸಂಖ್ಯೆಯಲ್ಲಿದ್ದ ವೀರಕುಮಾರರು ದೀ ಧಿತ್ತಿ... ಎಂಬ ಉದ್ಗಾರದೊಂದಿಗೆ ಕತ್ತಿಯನ್ನು ಎದೆಗೆ ಬಡಿಕೊಂಡು ನಮಸ್ಕರಿಸಿದರು. ಗೋವಿಂದ... ಗೋವಿಂದಾ.. ಎಂಬ ಘೋಷಣೆ ಮೊಳಗುತ್ತಿತ್ತು. ಭಕ್ತರು ಕರಗದ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿ ಭಕ್ತಿಭಾವ ಮೆರೆದರು. ಹಲವೆಡೆ ಗಲ್ಲಿಗಳಲ್ಲಿ ಮನೆಯ ಮೇಲೆನಿಂತಿದ್ದ ನಾಗರಿಕರು ಅಲ್ಲಿಂದಲೇ ಮಲ್ಲಿಗೆಯನ್ನು ಎರಚಿ, ಮಲ್ಲಿಗೆಯ ಅಭಿಷೇಕವನ್ನೂ ಮಾಡಿದರು.

ಕರಗ ಸಾಗಿದ ಹಾದಿ: ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಎರಡು ತಾಸು ನಡೆದ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ, ದೇವಸ್ಥಾನದ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಕರಗ ಗಣಪತಿ ದೇವಾಲಯ ಮತ್ತು ಮುತ್ಯಾಲಮ್ಮ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ಪೇಟೆಗಳತ್ತ ಹೆಜ್ಜೆ ಹಾಕಿತು. ಹಲಸೂರುಪೇಟೆ ಆಂಜನೇಯಸ್ವಾಮಿ, ಶ್ರೀರಾಮದೇವಾಲಯ, ಪ್ರಸನ್ನ ಗಂಗಾಧರೇಶ್ವರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು. ನಗರ್ತಪೇಟೆಯ ವೇಣುಗೋಪಾಲ ಕೃಷ್ಣಸ್ವಾಮಿ, ನಗರೇಶ್ವರಸ್ವಾಮಿ, ಸಿದ್ದಣ್ಣ ಗಲ್ಲಿ ಭೈರದೇವರ ದೇವಾಲಯದ ಮಾರ್ಗವಾಗಿ ಸಾಗಿದ ಕರಗಕ್ಕೆ, ಕಬ್ಬನ್‌ಪೇಟೆ 14ನೇ ಅಡ್ಡರಸ್ತೆಯಲ್ಲಿರುವ ರಾಮಸೇವಾಮಂದಿರ, 15ನೇ ಗಲ್ಲಿ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.

ಮಕ್ಕಳ ಬಸವಣ್ಣ ಗುಡಿ, ಗಾಣಿಗರಪೇಟೆ ಚೆನ್ನರಾಯಸ್ವಾಮಿ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನದಿಂದ ಅವಿನ್ಯೂ ರಸ್ತೆಯ ಈಶ್ವರ ದೇವಾಲಯ, ದೊಡ್ಡಪೇಟೆಯಿಂದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಕೃಷ್ಣರಾಜೇಂದ್ರ ಮಾರುಕಟ್ಟೆಯ ಉದ್ಭವ ಗಣಪತಿಯಲ್ಲಿ ಪೂಜೆ ಸಲ್ಲಿಸಲಾಯಿತು. ಪೊಲೀಸ್‌ ರಸ್ತೆ ಮೂಲಕ ಮುರಹರಿಸ್ವಾಮಿ ಮಠ, ಬೀರದೇವರಗುಡಿ, ಅರಳೇಪೇಟೆ ಮುಖ್ಯರಸ್ತೆಯಲ್ಲಿ ಸಾಗಿದ ಕರಗ, ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದಲ್ಲಿ ಪೂಜೆ ಸ್ವೀಕರಿಸಿತು. ಬಳೇಪೇಟೆ ಬಳೇಗರಡಿ ಮಾರ್ಗವಾಗಿ ಸಾಗಿ, ಮಸ್ತಾನ್‌ ಸಾಹೇಬರ ದರ್ಗಾಕ್ಕೆ ತೆರಳಿದ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಿಮಿಷಾಂಬ ದೇವಾಲಯ, ನಗರದೇವತೆ ಅಣ್ಣಮ್ಮ ದೇವಾಲಯ, ಕಿಲಾರಿ ರಸ್ತೆಯಲ್ಲಿರುವ ಚಿಕ್ಕ ಧರ್ಮರಾಯಸ್ವಾಮಿ ದೇವಾಲಯ, ಯಲಹಂಕ ಗೇಟ್‌ ಆಂಜನೇಯಸ್ವಾಮಿ, ತುಪ್ಪದಾಂಜನೇಯ ಸ್ವಾಮಿಗುಡಿ, ರಂಗನಾಥಸ್ವಾಮಿ, ಚೌಡೇಶ್ವರಿ ಗುಡಿಗಳಲ್ಲಿ ಪೂಜೆ ಸ್ವೀಕರಿಸಿ, ಸಿ.ಟಿ. ರಸ್ತೆಯ ಮೂಲಕ ಕುಂಬಾರಪೇಟೆ ಮುಖ್ಯರಸ್ತೆ, ಗೊಲ್ಲರಪೇಟೆ, ತಿಗಳರಪೇಟೆಯ ಸಮುದಾಯ ಮನೆಗಳು ಹಾಗೂ ಭಕ್ತರಿಂದ ಪೂಜೆ ಸ್ವೀಕರಿಸಿತು. ಹಾಲುಬೀದಿ, ಕಬ್ಬನ್‌ಪೇಟೆ, ಸುಣ್ಣಕಲ್‌ ಪೇಟೆ, ನರಸಿಂಹ ಜೋಯಿಸ್‌ ಗಲ್ಲಿಗಳ ಮೂಲಕ ಹಾದು ಕೊನೆಗೆ ಬುಧವಾರ ಮುಂಜಾನೆ ಕರಗ ಧರ್ಮರಾಯಸ್ವಾಮಿ ದೇವಾಲಯ ಸೇರಿಕೊಂಡಿತು.

ರಥೋತ್ಸವ: ದೇವಸ್ಥಾನದ ಹೊರಭಾಗದಲ್ಲಿ ಧರ್ಮರಾಯಸ್ವಾಮಿ ಮಹಾರಥೋತ್ಸವ ಕರಗದ ಹಿಂದೆ ಹೊರಟಿತು. ಮುಖ್ಯ ರಸ್ತೆಗಳಲ್ಲಿ ಸಾಗಿದ ರಥಕ್ಕೆ ಭಕ್ತರು ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು. ಈ ರಥದ ಹಿಂದೆ ನಗರದ ಹಲವು ಭಾಗಗಳಿಂದ ಬಂದಿದ್ದ ನೂರಾರು ರಥಗಳು ಸಾಗಿದವು. ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಈ ರಥಗಳು ಅವೆನ್ಯೂ ರಸ್ತೆ, ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತ ನಿಂತಿದ್ದವು. ತಂಡೋಪತಂಡವಾಗಿ ಬಂದ ನಾಗರಿಕರು, ರಥಗಳಿಗೆ ಪೂಜೆ ಸಲ್ಲಿಸಿದರು. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಮಹಾಪೂಜೆಯೊಂದಿಗೆ ಬುಧವಾರ ರಾತ್ರಿ ಕರಗ ಉತ್ಸವ ಸಂಪನ್ನಗೊಂಡಿತು.

ಬೆಂಗಳೂರು ಕರಗವನ್ನು ಅರ್ಚಕ ಜ್ಞಾನೇಂದ್ರ ಹೊತ್ತು ಸಾಗಿದದರು –ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಬೆಂಗಳೂರು ಕರಗವನ್ನು ಅರ್ಚಕ ಜ್ಞಾನೇಂದ್ರ ಹೊತ್ತು ಸಾಗಿದದರು –ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಅವಿನ್ಯೂ ರಸ್ತೆಯಲ್ಲಿ ಬುಧವಾರ ಸಾಲುಗಟ್ಟಿ ನಿಂತಿದ್ದ ವಿವಿಧ ದೇವರ ರಥಗಳು
ಅವಿನ್ಯೂ ರಸ್ತೆಯಲ್ಲಿ ಬುಧವಾರ ಸಾಲುಗಟ್ಟಿ ನಿಂತಿದ್ದ ವಿವಿಧ ದೇವರ ರಥಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT