ಗುರುವಾರ , ಆಗಸ್ಟ್ 18, 2022
23 °C
ಕೆ.ಆರ್‌.ಮಾರುಕಟ್ಟೆ: ಲಾಠಿ ಬೀಸಿದ ಪೊಲೀಸರು

ಅನಗತ್ಯ ಓಡಾಡಿದರೆ ಬಂಧನ: ಲಾಠಿ ಬೀಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH File

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಅಷ್ಟಾದರೂ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಅಂಥವರಿಗೆ ನಗರ ಪೊಲೀಸರು, ಲಾಠಿ ಏಟು ನೀಡಲಾರಂಭಿಸಿದ್ದಾರೆ.

ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಶನಿವಾರ ಅನಗತ್ಯವಾಗಿ ಸಂಚರಿಸುತ್ತಿದ್ದವರ ಮೇಲೆ ಸ್ಥಳೀಯ ಪೊಲೀಸರು ಲಾಠಿ ಬೀಸಿದ್ದಾರೆ. ‘ಇನ್ನೊಮ್ಮೆ ರಸ್ತೆಗೆ ಬಂದರೆ ಬಂಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದಾರೆ.

ಮಾರುಕಟ್ಟೆ ಬಳಿಯೇ ಪೊಲೀಸರು ತಪಾಸಣಾ ಕೇಂದ್ರ ನಿರ್ಮಿಸಿದ್ದಾರೆ. ರಸ್ತೆಯಲ್ಲಿ ಬರುವ ಪ್ರತಿಯೊಂದು ವಾಹನವನ್ನೂ ತಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವರು ಬೈಕ್‌ನಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದರು. ಆಟೊಗಳೂ ಸುತ್ತಾಡುತ್ತಿದ್ದವು. ಸ್ಥಳದಲ್ಲಿದ್ದ ಇನ್‌ಸ್ಪೆಕ್ಟರ್, ಲಾಠಿಯಿಂದ ಆಟೊ ದೀಪಗಳನ್ನು ಒಡೆದು ಹಾಕಿದ್ದಾರೆ. ಚಾಲಕನಿಗೆ ಲಾಠಿಯಿಂದ ಹೊಡೆದಿದ್ದಾರೆ.

ಪೊಲೀಸರು ಲಾಠಿ ಬೀಸುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ’ಸೋಮವಾರದಿಂದ ನಗರದಲ್ಲಿ ನಡೆಯುವ ಲಾಠಿ ಕಾರ್ಯಾಚರಣೆಯ ಟ್ರೇಲರ್ ಇದು’ ಎಂದು ವಿಡಿಯೊವನ್ನು ಹಲವರು ಹಂಚಿಕೊಂಡಿದ್ದಾರೆ.

ಅನಗತ್ಯವಾಗಿ ಓಡಾಡಿದರೆ ಬಂಧನ: ‘ಸೋಮವಾರದಿಂದ ನಗರದಲ್ಲಿ ಕರ್ಫ್ಯೂ ಜೊತೆಯಲ್ಲಿ ಕಠಿಣ ನಿಯಮಗಳು ಜಾರಿಯಾಗಲಿವೆ. ಸೂಕ್ತ ಕಾರಣವಿಲ್ಲದೇ ರಸ್ತೆಯಲ್ಲಿ ಓಡಾಡುವಂತಿಲ್ಲ. ಅನಗತ್ಯವಾಗಿ ಹೊರಗೆ ಬಂದರೆ ಸ್ಥಳದಲ್ಲೇ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಕಮಿಷನರ್ ಕಮಲ್ ಪಂತ್ ಎಚ್ಚರಿಕೆ ನೀಡಿದರು.

ನಗರದ ಹಲವೆಡೆ ಶನಿವಾರ ಸಂಚರಿಸಿದ ಅವರು, ಭದ್ರತೆ ಪರಿಶೀಲನೆ ನಡೆಸಿದರು. ಪೊಲೀಸರ ಜೊತೆ ಸೇರಿ ವಾಹನಗಳ ಪರಿಶೀಲನೆಯನ್ನೂ ಮಾಡಿದರು. ಅದಾದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೊರೊನಾ ಸೋಂಕು ಮುಕ್ತ ನಗರವಾಗಿಸಲು ಜನರೆಲ್ಲರೂ ಪೊಲೀಸರು ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕು’ ಎಂದು ಕೋರಿದರು.

‘ನಮ್ಮೆಲ್ಲರ ಆರೋಗ್ಯಕ್ಕಾಗಿ ಹಾಗೂ ಬೆಂಗಳೂರಿನ ಸುರಕ್ಷತೆಗಾಗಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದ ನಿಯಮಗಳ ಜಾರಿಗಾಗಿ ಪೊಲೀಸರಿಗೆ ಎಲ್ಲ ರೀತಿಯ ಅಧಿಕಾರ ನೀಡಲಾಗಿದೆ. ಜನರೆಲ್ಲರೂ ಅರ್ಥ ಮಾಡಿಕೊಂಡು ಮನೆಯಲ್ಲೇ ಇರಬೇಕು. ಅನಗತ್ಯವಾಗಿ ಹೊರಗೆ ಬಂದರೆ ಬಂಧನ ನಿಶ್ಚಿತ’ ಎಂದರು.

‘ಅನಗತ್ಯವಾಗಿ ವಾಹನ ಬಳಕೆಯನ್ನು ನಿರ್ಬಂಧಿಸಲಾಗಿದೆ. ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡು ಹೋಗಬೇಕು. ವಾಹನದಲ್ಲಿ ಹೋದರೆ, ಅದನ್ನೂ ಜಪ್ತಿ ಮಾಡಲಾಗುವುದು. ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಸರ್ಕಾರವೇ ಸದ್ಯಕ್ಕೆ ವಿನಾಯಿತಿ ನೀಡಿದೆ’ ಎಂದೂ ಕಮಲ್ ಪಂತ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು