ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣ ಪ್ರಯಾಸ | ‘ಅವೆನ್ಯೂ’: ಫುಟ್‌ಪಾತ್‌ ಮಾಯ, ಕಿರಿಕಿರಿ

ನಿಧಾನಗತಿಯಲ್ಲಿ ಕಾಮಗಾರಿ l ಅತಿಕ್ರಮಣ ಜಾಗದಲ್ಲಿ ವ್ಯಾಪಾರ l ದೂರು ನೀಡಿದರೂ ಸಿಗದ ಸ್ಪಂದನೆ
Last Updated 18 ಫೆಬ್ರುವರಿ 2022, 20:38 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಅವೆನ್ಯೂ ರಸ್ತೆಯಲ್ಲಿ ‘ಸ್ಮಾರ್ಟ್‌ ಸಿಟಿ’ ಹಾಗೂ ‘ಟೆಂಡರ್‌ ಶ್ಯೂರ್’ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಜನ ಹಾಗೂ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ. ರಸ್ತೆ ಜಾಗವನ್ನು ಕೆಲವರು ಅತಿಕ್ರಮಣ ಮಾಡಿಕೊಂಡು ವ್ಯಾಪಾರ ಮಳಿಗೆಗಳನ್ನು ತೆರೆದಿದ್ದು, ಜನರ ಸಂಚಾರಕ್ಕೆ ಕಿರಿಕಿರಿ ಆಗುತ್ತಿದೆ.

ಕೆ.ಆರ್‌. ಮಾರುಕಟ್ಟೆಯಿಂದ ಚಿಕ್ಕಪೇಟೆ ವೃತ್ತದ ಮೂಲಕ ಮೈಸೂರು ಬ್ಯಾಂಕ್‌ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಅವೆನ್ಯೂ ರಸ್ತೆಯಲ್ಲಿ ನಿತ್ಯವೂ ಸಾವಿರಾರು ಮಂದಿ ಓಡಾಡುತ್ತಾರೆ. ಏಕಮುಖ ರಸ್ತೆಯಲ್ಲಿ ದ್ವಿಚಕ್ರ ವಾಹನ, ಗೂಡ್ಸ್ ವಾಹನ ಹಾಗೂ ಕಾರುಗಳ ಓಡಾಟವೂ ಇರುತ್ತದೆ.

ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಮೂಲಕ ಬರುವ ವಾಹನಗಳು, ಆಸ್ಪತ್ರೆ ರಸ್ತೆಯಲ್ಲಿ ತಿರುವು ಪಡೆದುಕೊಂಡು ಅವೆನ್ಯೂ ರಸ್ತೆಗೆ ಸೇರುತ್ತದೆ. ನಂತರ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಕೆಂಪೇಗೌಡ ರಸ್ತೆಗೆ ಸೇರಿ ಗಾಂಧಿನಗರ ಹಾಗೂ ಮೆಜೆಸ್ಟಿಕ್‌ನತ್ತ ತೆರಳುತ್ತವೆ. ವಾಹನದ ಜೊತೆಯಲ್ಲಿ ಜನರ ಸುತ್ತಾಟವೂ ಹೆಚ್ಚಿರುವ ರಸ್ತೆ ಇದಾಗಿದೆ.

ಹೆಚ್ಚು ಪುಸ್ತಕಗಳ ಮಾರಾಟ ಮಳಿಗೆಗಳನ್ನು ಹೊಂದಿರುವ ರಸ್ತೆಯಲ್ಲಿ ಇದೀಗ ತರಹೇವಾರಿ ವ್ಯಾಪಾರ ಆರಂಭವಾಗಿದೆ. ರಸ್ತೆ ಅಕ್ಕ– ಪಕ್ಕದ ಖಾಸಗಿ ಜಾಗಗಳಲ್ಲಿ ಅಂಗಡಿಗಳನ್ನು ನಿರ್ಮಿಸಲಾಗಿದ್ದು, ವ್ಯಾಪಾರ ಜೋರಾಗಿದೆ. ಇದರ ನಡುವೆ ಹಲವರು, ರಸ್ತೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಶೆಡ್ ಹಾಗೂ ಮಳಿಗೆ ನಿರ್ಮಿಸಿದ್ದಾರೆ. ಅವರಿಂದ ‘ಮಾಮೂಲಿ’ ‍ಪಡೆದುಕೊಂಡು ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಮೌನವಾಗಿರುವ ಆರೋಪಗಳೂ ಕೇಳಿಬರುತ್ತಿವೆ.

ಫುಟ್‌ಪಾತ್‌ ಮಾಯ:
‘ರಸ್ತೆಯ ಅಕ್ಕ–ಪಕ್ಕದಲ್ಲಿ ಜನರ ಓಡಾಟಕ್ಕೆ ಮೀಸಲಿದ್ದ ಪಾದಚಾರಿ ಮಾರ್ಗ (ಫುಟ್‌ಪಾತ್) ಇದೀಗ ಮಾಯವಾಗಿದೆ. ಈ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವ ಹಲವರು, ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಪುಸ್ತಕ ಮಳಿಗೆಯೊಂದರ ಉದ್ಯೋಗಿ ಗಿರೀಶ್ ಹೇಳಿದರು.

‘ಪಾದಚಾರಿ ಮಾರ್ಗದಲ್ಲೇ ಪುಸ್ತಕ, ತರಕಾರಿ, ಹಣ್ಣು, ಹೂವು, ತಿಂಡಿ–ತಿನಿಸು, ಬಟ್ಟೆ ಹಾಗೂ ಇತರೆ ವಸ್ತುಗಳನ್ನು ಇರಿಸಿಕೊಂಡು ಮಾರುತ್ತಿದ್ದಾರೆ. ಇಲ್ಲೆಲ್ಲ ಜನರ ಓಡಾಟಕ್ಕೂ ಜಾಗವಿಲ್ಲದಂತಾಗಿದೆ. ಕಾಮಗಾರಿಗಾಗಿ ರಸ್ತೆಯನ್ನು ಎಲ್ಲೆಂ– ದರಲ್ಲಿ ಅಗೆಯಲಾಗಿದ್ದು, ಇದರಿಂದ ಪಾದಚಾರಿಗಳಿಗೆ ಮತ್ತಷ್ಟು ತೊಂದರೆ ಆಗುತ್ತಿದೆ’ ಎಂದೂ ತಿಳಿಸಿದರು.

‘ಕೆಲ ಆಟೊ ಹಾಗೂ ಗೂಡ್ಸ್ ವಾಹನಗಳನ್ನು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದ್ದು, ದಟ್ಟಣೆಯೂ ಉಂಟಾಗುತ್ತಿದೆ. ಜಾಗ ಅತಿಕ್ರಮಣದಿಂದ ರಸ್ತೆ ಇಕ್ಕಟ್ಟಾಗುತ್ತಿದ್ದು, ಕೆಲ ಪಾದಚಾರಿಗಳು ನಡೆದಾಡುವ ವೇಳೆ ಆಯತಪ್ಪಿ ಬಿದ್ದ ಘಟನೆಗಳೂ ನಡೆದಿವೆ’ ಎಂದೂ ಹೇಳಿದರು.

ದೂರು ನೀಡಿದರೂ ಸಿಗದ ಸ್ಪಂದನೆ:
‘ಅವೆನ್ಯೂ ರಸ್ತೆಯಲ್ಲಿ ಆರಂಭವಾಗಿರುವ ಕಾಮಗಾರಿ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ದಾರಿಹೋಕರಿಗೆ ನಿತ್ಯವೂ ದೂಳಿನ ಮಜ್ಜನವಾಗುತ್ತಿದ್ದು, ರಸ್ತೆಗೆ ನೀರು ಸಿಂಪಡಿಸಬೇಕೆಂಬ ಸಣ್ಣ ಕಾಳಜಿಯೂ ಗುತ್ತಿಗೆದಾರನಿಗೆ ಇಲ್ಲ’ ಎಂದು ಅವೆನ್ಯೂ ರಸ್ತೆ ವ್ಯಾಪಾರಿಗಳ ಒಕ್ಕೂಟದ ಉಪಾಧ್ಯಕ್ಷ ಕಿಶೋರ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

‘ಸಾರ್ವಜನಿಕ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡು ಕೆಲವರು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಜಾಗ ಇಕ್ಕಟ್ಟಾಗಿ, ಜನರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆ ಆಗಿದೆ. ಅವೆನ್ಯೂ ರಸ್ತೆಯಲ್ಲಿ ನಾನಾ ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಸೂಚಿಸುವಂತೆ ಕೋರಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಸಲ್ಲಿಸಲಾಗುತ್ತಿದೆ. ಯಾವುದೇ ಸ್ಪಂದನೆ ಸಿಗುತ್ತಿಲ್ಲ’ ಎಂದೂ ಬೇಸರ ವ್ಯಕ್ತಪಡಿಸಿದರು.

‘ಅತಿಕ್ರಮಣ ಪ್ರಶ್ನಿಸಿದರೆ ಗಲಾಟೆ’

‘ರಸ್ತೆ ಅತಿಕ್ರಮಣ ಪ್ರಶ್ನಿಸುವವರೊಂದಿಗೆ ಗಲಾಟೆ ಮಾಡುವ ಗುಂಪು ಅವೆನ್ಯೂ ರಸ್ತೆಯಲ್ಲಿದೆ. ಇದಕ್ಕೆ ಕೆಲ ಜನಪ್ರತಿನಿಧಿಗಳು ಹಾಗೂ ಕೆಲ ಪೊಲೀಸರ ಸಹಕಾರವೂ ಇದೆ’ ಎಂದು ಕಿಶೋರ್ ಕುಮಾರ್ ಆರೋಪಿಸಿದರು.

‘ಅವೆನ್ಯೂ ರಸ್ತೆ ರಾಜಧಾನಿಯ ಕಿರೀಟದಂತೆ. ಕಾಮಗಾರಿಗಾಗಿ ರಸ್ತೆ ಅಗೆದಿದ್ದರಿಂದ, ಕಿರೀಟಕ್ಕೆ ರಂಧ್ರಗಳು ಬಿದ್ದಂತಾಗಿದೆ. ಇನ್ನಾದರೂ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಅತಿಕ್ರಮಣ ಮಾಡಿರುವವರನ್ನು ತೆರವು ಮಾಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ತಳ್ಳುಗಾಡಿ ವ್ಯಾಪಾರ ಜೋರು’

ಅವೆನ್ಯೂ ರಸ್ತೆಯಲ್ಲಿ ತಳ್ಳುಗಾಡಿ ವ್ಯಾಪಾರವೂ ಇತ್ತೀಚಿನ ದಿನಗಳಲ್ಲಿ ಜೋರಾಗಿದೆ. ತರಕಾರಿ, ಹಣ್ಣು, ಮೊಬೈಲ್ ಬಿಡಿಭಾಗ, ಪುಸ್ತಕ ಹಾಗೂ ಇತರೆ ವಸ್ತುಗಳನ್ನು ತಳ್ಳುಗಾಡಿಯಲ್ಲಿ ಮಾರುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಿದೆ. ಎಲ್ಲೆಂದರಲ್ಲಿ ತಳ್ಳುಗಾಡಿಗಳನ್ನು ನಿಲ್ಲಿಸಿ, ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಾರೆಂಬ ಆರೋಪವು ಇದೆ.

ತಳ್ಳುಗಾಡಿ ವ್ಯಾಪಾರಿಯೊಬ್ಬರು, ‘ದಿನದ ದುಡಿಮೆ ನಂಬಿ ಬದುಕುತ್ತಿದ್ದೇವೆ. ಒಂದು ಕಡೆ ತಳ್ಳುಗಾಡಿ ನಿಲ್ಲಿಸಿ ವ್ಯಾಪಾರ ಶುರು ಮಾಡಿದರೆ, ಬೇರೆ ಕಡೆ ಹೋಗಿ ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲೀಗೆ ಹೋದರೆ, ಮತ್ತೊಂದು ಕಡೆ ಹೋಗಿ ಎನ್ನುತ್ತಾರೆ. ಇದರಿಂದ ನಿತ್ಯವೂ ಅಲೆಯುತ್ತಲೇ ವ್ಯಾಪಾರ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT