ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮಳೆ ನಿಂತು ಎರಡು ದಿನ ಆದರೂ ಇಳಿದು ಹೋಗಿಲ್ಲ ನೀರು

Last Updated 23 ನವೆಂಬರ್ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ನಿಂತು ಎರಡು ದಿನಗಳು ಉರುಳಿದ ಬಳಿಕವೂ ಯಲಹಂಕ ಪ್ರದೇಶದ ಕೆಲವೆಡೆ ನೀರು ಸಂಪೂರ್ಣ ಇಳಿದು ಹೋಗಿಲ್ಲ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ ಸಮುಚ್ಚಯವೂ ಸೇರಿದಂತೆ ರಾಜಕಾಲುವೆ ಆಸುಪಾಸಿನ ಅನೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಪ್ರಾಂಗಣಗಳಲ್ಲಿ ಮಂಗಳವಾರವೂ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು.

ಕೆಂಪೇಗೌಡ ವಾರ್ಡ್‌ನ ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದಾಗಲೂ ಪ್ರಾಂಗಣ ಜಲಾವೃತವಾಗಿತ್ತು. ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ತೆರೆದ ಜೀಪಿನಲ್ಲೇ ಅಪಾರ್ಟ್‌ಮೆಂಟ್‌ ಸಮುಚ್ಚಯವನ್ನು ತಲುಪಿ, ನಿವಾಸಿಗಳ ಸಂಕಷ್ಟ ಆಲಿಸಿದರು. ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಕ್ರಮ ಕೈಗೊಳ್ಳುವಂತೆ ಬೊಮ್ಮಾಯಿ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸೋಮವಾರ ನಾಲ್ಕು ಅಡಿಗಳಷ್ಟು ನೀರು ನಿಂತಿತ್ತು. ಮಂಗಳವಾರ ಒಂದು ಭಾಗದಲ್ಲಿ ಆವರಣ ಗೋಡೆಯನ್ನು ಒಡೆದು ನೀರು ಹೊರಹೋಗಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನೀರಿನ ಮಟ್ಟ 1 ಅಡಿಗೆ ಇಳಿದಿದೆ. ನಿವಾಸಿಗಳು ಮನೆಯಿಂದ ಹೊರಗೆ ಹೋಗಲು ಟ್ರ್ಯಾಕ್ಟರ್‌ ಅಥವಾ ಜೀ‍ಪನ್ನು ಬಳಸುತ್ತಿದ್ದಾರೆ. ಕಟ್ಟಡದ ಮೆಟ್ಟಿಲಿನವರೆಗೆ ವಾಹನವನ್ನು ಕೊಂಡೊಯ್ದು ನಿವಾಸಿಗಳನ್ನು ಹತ್ತಿಸಿಕೊಳ್ಳುತ್ತಿದ್ದುದು ಕಂಡು ಬಂತು.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವಿವಿಧ ಭಾಷಿಕರು ನೆಲೆಸಿದ್ದಾರೆ. ಈಗ ಶೇ 30ರಷ್ಟು ಜನರನ್ನು ಮಾತ್ರ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇನ್ನೂ ಶೇ 70ರಷ್ಟು ಜನರು ಇಲ್ಲಿಯೇ ಉಳಿದಿದ್ದಾರೆ. ಮೂರು ದಿನಗಳಿಂದ ವಿದ್ಯುತ್, ಜನರೇಟರ್ ಮತ್ತು ಲಿಫ್ಟ್ ಮೊದಲಾದ ಮೂಲಸೌಕರ್ಯಗಳಿಲ್ಲದೆ ತೊಂದರೆಯಾಗಿದೆ.ನೀರು ಮತ್ತು ಆಹಾರ ಸಾಮಗ್ರಿ ಪೂರೈಕೆಯೂ ದುಸ್ತರವಾಗಿದೆ.

‘ಸ್ವಯಂಸೇವಕರು ಸೋಮವಾರ ದಿಂದ ಹಾಲು, ಬ್ರೆಡ್, ಬಿಸ್ಕೆಟ್, ಉಪಾಹಾರ ಹಾಗೂ ಊಟ ನೀಡುತ್ತಿದ್ದಾರೆ’ ಎಂದು ಅಪಾರ್ಟ್‌ ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಆರ್.ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ತಳ ಮಹಡಿಯಲ್ಲಿ ನಿಲ್ಲಿಸಿದ ದ್ವಿಚಕ್ರವಾಹನಗಳು ನೀರಿನಲ್ಲಿ ತೇಲುತ್ತಿವೆ. ಇಲ್ಲಿ ನಿಲ್ಲಿಸಿದ್ದ ಅನೇಕ ಕಾರುಗಳ ಎಂಜಿನ್‌ ಒಳಗೆ ನೀರು ನುಗ್ಗಿದ್ದು, ಹಾನಿಗೊಳಗಾಗಿವೆ.ಕೆಲವರು ದುರಸ್ತಿ ಮಾಡಿಸಲು ದ್ವಿಚಕ್ರವಾಹನಗಳನ್ನು ನೀರಿನಲ್ಲೇ ತಳ್ಳಿಕೊಂಡು ಗ್ಯಾರೇಜ್‌ಗೆ ಸಾಗಿಸುತ್ತಿದ್ದರು.

ನೀರು ನುಗ್ಗಿದ್ದ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಂಗಳವಾರವೂ ಮುಂದುವರಿದಿದೆ. ನೀರು ನುಗ್ಗಿ ರೆಫ್ರಿಜರೇಟರ್‌, ಟಿ.ವಿ. ಮತ್ತಿತರ ಉಪಕರಣಗಳು ಹಾನಿಗೊಳಗಾಗಿವೆ. ಅವುಗಳನ್ನು ದುರಸ್ತಿಗೆ ಕೊಂಡೊಯ್ಯಲು ಸಾಧ್ಯವಾಗದೇ ಚಡಪಡಿಸಿದರು. ಮನೆಗಳಿಗೆ ನುಗ್ಗಿದ ನೀರನ್ನು ತೆರವುಗೊಳಿಸಿದ ಬಳಿಕವೂ ಕೆಸರಿನ ವಾಸನೆ ಹಾಗೆಯೇ ಉಳಿದಿದೆ.

ಜಕ್ಕೂರಿನ ಜವಾಹರ ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಸಿಎಎಸ್‌ಆರ್‌) ಪ್ರಾಂಗಣದಲ್ಲೂ ಮಂಗಳವಾರವೂ ಸುಮಾರು ಒಂದು ಅಡಿಯಷ್ಟು ನೀರು ನಿಂತಿತ್ತು. ನೀರಿನಲ್ಲಿ ಮುಳುಗಿ ಹಾನಿಗೊಳಗಾದ ಉಪಕರಣಗಳನ್ನು ಇಲ್ಲಿನ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದುದು ಕಂಡು ಬಂತು. ಮಾನ್ಯತಾ ಟೆಕ್‌ಪಾರ್ಕ್‌ನಲ್ಲೂ ನೀರು ಸಂಪೂರ್ಣ ಇಳಿದುಹೋಗಿಲ್ಲ.

‘175 ಮನೆಗಳಿಗೆ ಹಾನಿ’

‘ನೀರು ನುಗ್ಗಿ 175 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ‍ಪ್ರಾಥಮಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಯಾವ ಮನೆಗೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ನಮ್ಮ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಹಾಯಕ ಎಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಪರಿಹಾರದ ಮೊತ್ತ ಪಾವತಿ ಆಗಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಆದಷ್ಟು ಬೇಗ ಪರಿಹಾರದ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ಹಾಕುತ್ತೇವೆ’ ಎಂದು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಯಲಹಂಕದ ಸುರಭಿ ಬಡಾವಣೆಯಲ್ಲಿ 40 ಮಂದಿ ಕಾರ್ಮಿಕರು ಧವಸ ಧಾನ್ಯವಿಲ್ಲದೇ ಸಮಸ್ಯೆಗೆ ಸಿಲುಕಿದ್ದರು. ಅವರಿಗೆ ಬಿಬಿಎಂಪಿಯಿಂದ ಆಹಾರ ಧಾನ್ಯಗಳನ್ನು ಪೂರೈಸಿದ್ದೇವೆ’ ಎಂದರು.


‘ಒತ್ತುವರಿ ತೆರವುಗೊಳಿಸಿ’

ಜಲಾವೃತವಾಗಿರುವ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಕಾಂಗ್ರೆಸ್‌ ಮುಖಂಡ ಎಂ.ವೀರಪ್ಪ ಮೊಯಿಲಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

‘ಯಲಹಂಕ ಪ್ರದೇಶದ ನಿವಾಸಿಗಳು ರಾಜಕಾಲುವೆಗಳನ್ನು ಆಕ್ರಮಿಸಿಕೊಂಡಿದ್ದಾರೆ. ಕೆಲವರು ಕಾಲುವೆಗಳನ್ನೇ ಮುಚ್ಚಿ ಅದರ ಮೇಲೆಯೇ ಮನೆ ಮತ್ತು ಅಪಾರ್ಟ್‌ಮೆಂಟ್‌ ಸಮುಚ್ಚಯ ನಿರ್ಮಿಸಿಕೊಂಡಿದ್ದಾರೆ. ಅದರ ಪರಿಣಾಮ, ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಈ ಸಮಸ್ಯೆ ಉಲ್ಬಣಿಸಿದೆ. ಭಾರಿ ಮಳೆಯಾದಾಗ ನಿವಾಸಿಗಳು ತೊಂದರೆ ಅನುಭವಿಸಬೇಕಾಗಿದೆ’ ಎಂದರು.

‘ಈಗ ಸಂಗ್ರಹವಾಗಿರುವ ನೀರನ್ನು ಹೊರಹಾಕಿದರೆ ಸಾಲದು, ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡರಾದ ಎಂ.ಎನ್.ಗೋಪಾಲಕೃಷ್ಣ, ವೈ.ಆರ್.ಶ್ರೀಧರ್, ಎ.ಎನ್.ಸಂತೋಷ್ ಕುಮಾರ್, ಪದ್ಮಾವತಿ ಅಮರನಾಥ್, ಲಾವಣ್ಯ ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT