ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪುರ ವ್ಯಾಪ್ತಿಯ ಮಳೆಹಾನಿ ಪ್ರದೇಶಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ

ರೈಲ್ವೆ ಸೇತುವೆ ಅಗಲಕ್ಕೆ ವಾರದಲ್ಲೆ ಟೆಂಡರ್
Last Updated 20 ಮೇ 2022, 8:25 IST
ಅಕ್ಷರ ಗಾತ್ರ

ಬೆಂಗಳೂರು: ಹೊರಮಾವು ವಡ್ಡರಪಾಳ್ಯ ಸುತ್ತಮುತ್ತಲ ಬಡಾವಣೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲು ರೈಲ್ವೆ ಸೇತುವೆ ಹಿಗ್ಗಿಸುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದ್ದು, ಮುಂದಿನ ವಾರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಶ್ರೀಸಾಯಿ ಬಡಾವಣೆ, ರಾಮಮೂರ್ತಿನಗರದ ನಾಗಪ್ಪ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೆಬ್ಬಾಳ ಕಡೆಯಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುವ ರಾಜಕಾಲುವೆಗೆ ಅಡ್ಡಲಾಗಿರುವ ರೈಲ್ವೆ ಸೇತುವೆ ಕಿರಿದಾಗಿರುವುದರಿಂದ ನಾಲ್ಕೈದು ಬಡಾವಣೆಗಳಿಗೆ ನೀರು ನುಗ್ಗುತ್ತಿದೆ’ ಎಂದರು.

‘ಸೇತುವೆ ಅಗಲ ಮಾಡಲು ₹42 ಕೋಟಿ ಮೊತ್ತದ ಯೋಜನೆ ಸಿದ್ಧವಾಗಿದ್ದು, ವಿನ್ಯಾಸಕ್ಕೆ ರೈಲ್ವೆ ಇಲಾಖೆಯೂ ಒಪ್ಪಿಗೆ ನೀಡಿದೆ. ಕೂಡಲೇ ಕಾಮಗಾರಿ ಆರಂಭಿಸಿ ಫೆಬ್ರುವರಿ ವೇಳೆಗೆ ಪೂರ್ಣಗೊಳಿಸಲಾಗುವುದು. ಸೇತುವೆ ದಾಟಿದ ನಂತರ ಇರುವ ರಾಜಕಾಲುವೆಯನ್ನೂ ಹಿಗ್ಗಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

‘ರಾಜಕಾಲುವೆ ಮೇಲೆ ನಿರ್ಮಾಣ ಆಗಿರುವ ಮನೆಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದೇನೆ. ರಾಜಕಾಲುವೆಗಳು ಸರಿಯಾದರೆ ಇಲ್ಲಿನ ಮೂರ್ನಾಲ್ಕು ಬಡಾವಣೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ’ ಎಂದರು.

‘ಕೆರೆ ಪ್ರದೇಶದಲ್ಲಿ ಮನೆಗಳನ್ನು ಕಟ್ಟಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ದೊಡ್ಡಬೆಟ್ಟಹಳ್ಳಿ ಕೆರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಲಾಗಿದೆ’ ಎಂದೂ ಅವರು ಹೇಳಿದರು.

ವಲಯಕ್ಕೊಂದು ಕಾರ್ಯಪಡೆ:ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ವಲಯಗಳಿದ್ದು, ತಲಾ ಒಂದೊಂದು ಕಾರ್ಯಪಡೆ ರಚಿಸಲಾಗುವುದು. ಅವುಗಳಿಗೆ ಮಂತ್ರಿಗಳನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ಎಂಜಿನಿಯರ್‌ಗಳು ಕಾರ್ಯಪಡೆಯ ಸದಸ್ಯರಾಗಿರುತ್ತಾರೆ. ಅಭಿವೃದ್ಧಿ ಕಾಮಗಾರಿ ಮತ್ತು ಪ್ರವಾಹ ಪರಿಹಾರ ಕಾಮಗಾರಿಗಳ ಬಗ್ಗೆ ಈ ಕಾರ್ಯಪಡೆಯೇ ನಿರ್ಧಾರ ಕೈಗೊಳ್ಳಲಿದೆ. ಎಲ್ಲಾ ರೀತಿಯ ಅಧಿಕಾರವನ್ನೂ ಈ ಕಾರ್ಯಪಡೆಗೆ ನೀಡಲಾಗುವುದು. ಈ ಸಂಬಂಧ ಇಂದೇ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT