ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Rameshwaram Cafe Blast | ತೀರ್ಥಹಳ್ಳಿಯ ಮಾಝ್‌ ಮುನೀರ್ ಬಂಧನ

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ * ಸಂಚಿನಲ್ಲಿ ಭಾಗಿಯಾಗಿದ್ದ ಪದವೀಧರ
Published 7 ಏಪ್ರಿಲ್ 2024, 0:30 IST
Last Updated 7 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆ ಚುರುಕುಗೊಳಿಸಿರುವ ಎನ್‌ಐಎ ಅಧಿಕಾರಿಗಳು, ಕೃತ್ಯದ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾದ ಮತ್ತೊಬ್ಬ ಶಂಕಿತ ಮಾಝ್‌ ಮುನೀರ್ ಅಹಮದ್‌ನನ್ನು (26) ಬಂಧಿಸಿದ್ದಾರೆ.

‘ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಫಿಶ್ ಮಾರ್ಕೆಟ್ ರಸ್ತೆಯ ಮಾಝ್, ಎಂಜಿನಿಯರಿಂಗ್ ಪದವೀಧರ. ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಚಿಕ್ಕಮಗಳೂರಿನ ಶಂಕಿತ ಮುಜಮೀಲ್ ಶರೀಫ್‌ನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈತ ನೀಡಿದ್ದ ಮಾಹಿತಿ ಆಧರಿಸಿ ಮಾಝ್ ಮುನೀರ್ ಅಹಮದ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ಭಯೋತ್ಪಾದನಾ ಸಂಘಟನೆಗಳ ಪರವಾಗಿ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದ ಪ್ರಕರಣ ಹಾಗೂ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಬಾಂಬ್‌ಗಳನ್ನು ಪರೀಕ್ಷಾರ್ಥವಾಗಿ ಸ್ಫೋಟಿಸಿದ್ದ ಪ್ರಕರಣದಲ್ಲಿ ಮಾಝ್‌ ಮುನೀರ್‌ ಅಹಮದ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಈತ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ.’

‘ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಈತನ ಪಾತ್ರವಿರುವ ಅನುಮಾನದ ಮೇರೆಗೆ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಆದರೆ, ಯಾವುದೇ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ, ಮಾಝ್‌ನನ್ನು ವಾಪಸು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ 18 ಕಡೆಗಳಲ್ಲಿ ದಾಳಿ ಮಾಡಿದಾಗ, ಮುಜಮೀಲ್ ಶರೀಫ್ ಬಗ್ಗೆ ಸುಳಿವು ಸಿಕ್ಕಿತ್ತು. ಮುಜಮೀಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮಾಝ್ ಹೆಸರು ಬಾಯ್ಬಿಟ್ಟಿದ್ದ. ಮುಜಮೀಲ್ ಹೇಳಿಕೆ ಹಾಗೂ ಲಭ್ಯವಿರುವ ಪುರಾವೆಗಳನ್ನು ಆಧರಿಸಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇದೀಗ ಮಾಝ್‌ನನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಮಾಝ್‌ ಮೊದಲ ಆರೋಪಿ: ‘ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಸಂಬಂಧ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಮಾಝ್ ಮುನೀರ್ ಅಹಮದ್‌ನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಬಾಂಬ್ ಇರಿಸಿದ್ದ ಎನ್ನಲಾದ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್‌ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಕ್ರಮವಾಗಿ ಎರಡು–ಮೂರನೇ ಆರೋಪಿಗಳಾಗಿದ್ದಾರೆ’ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.

‘ಮುಜಮೀಲ್‌ ಶರೀಫ್‌ನನ್ನು ನಾಲ್ಕನೇ ಆರೋಪಿಯನ್ನಾಗಿ ಮಾಡಲಾಗಿದೆ. ಬಾಂಬ್ ಸ್ಫೋಟದ ಸಂಚಿನಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಐಇಡಿ ತಯಾರಿಯಲ್ಲಿ ಪರಿಣಿತರು: ‘ಶಂಕಿತ ಮಾಝ್ ಹಾಗೂ ಅಬ್ದುಲ್ ಮಥೀನ್, ಇಬ್ಬರೂ ಕಚ್ಚಾ ಬಾಂಬ್ (ಐಇಡಿ) ತಯಾರಿಸುವಲ್ಲಿ ಪರಿಣಿತರು. ಇತರೆ ಶಂಕಿತರಿಗೆ ಇವರಿಬ್ಬರೂ ತರಬೇತಿ ನೀಡುತ್ತಿದ್ದರೆಂಬುದು ಗೊತ್ತಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಮಾತುಕತೆಗೆ ಆ್ಯಪ್ ಬಳಕೆ’

‘ಐಎಸ್‌ (ಇಸ್ಲಾಮಿಕ್ ಸ್ಟೇಟ್) ಉಗ್ರರ ಜೊತೆ ಒಡನಾಟವಿಟ್ಟುಕೊಂಡಿದ್ದ ಶಂಕಿತರ ಜೊತೆ ಮಾಝ್‌ ಮುನೀರ್ ಅಹ್ಮದ್ ಸಂಪರ್ಕದಲ್ಲಿದ್ದ. ಅವರ ಸೂಚನೆಯಂತೆ ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಮೊಹಮ್ಮದ್ ಶಾರೀಕ್ ಹಾಗೂ ಅರಾಫತ್ ಜೊತೆಯಲ್ಲೂ ಮಾಝ್ ಒಡನಾಟವಿಟ್ಟುಕೊಂಡಿದ್ದ. ರಾಮೇಶ್ವರಂ ಕೆಫೆ ಸ್ಫೋಟದ ಸಂಚಿನಲ್ಲಿ ಈತನೇ ಪ್ರಮುಖ ರೂವಾರಿಯೆಂಬ ಮಾಹಿತಿ ಇದೆ’ ಎಂದು ಮೂಲಗಳು ಹೇಳಿವೆ. ‘ಮಾಝ್ ಮುನೀರ್ ಹಾಗೂ ಇತರೆ ಶಂಕಿತರು ಪರಸ್ಪರ ಮಾತುಕತೆ ನಡೆಸಲು ಆ್ಯಪ್‌ ಬಳಸುತ್ತಿದ್ದರು. ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಲಿಂ ಸಮುದಾಯದ ಯುವಕರನ್ನು ಸಂಪರ್ಕಿಸಿ ಭಯೋತ್ಪಾದನಾ ಕೃತ್ಯ ಎಸಗಲು ಪ್ರಚೋದಿಸುತ್ತಿದ್ದರು’ ಎಂದು ತಿಳಿಸಿವೆ. ಮಾಝ್ ಬಂಧನದಿಂದ ಮಾನಸಿಕವಾಗಿ ನೊಂದಿದ್ದ ಅವರ ತಂದೆ ಮುನೀರ್‌ ಅಹಮದ್‌ ಹೃದಯಾಘಾತದಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT