ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಭೂಸ್ವಾಧೀನ ಬಿಕ್ಕಟ್ಟು ಪಕ್ಕಟ್ಟಿಟ್ಟು ಡಾಂಬರೀಕರಣ

ಭೂಮಿ ಬಿಟ್ಟುಕೊಡಲು ರೈತರ ಹಿಂದೇಟು l ಜಾಗ ಲಭ್ಯ ಇರುವಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತಿರುವ ಬಿಡಿಎ l ಎನ್‌ಪಿಕೆಎಲ್‌ ಪ್ರಮುಖ ರಸ್ತೆ
Last Updated 17 ಜನವರಿ 2022, 19:08 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನೈರುತ್ಯ ದಿಕ್ಕಿನ ಹೊರವಲಯದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯು ರಾಜಧಾನಿಯ ವಸತಿ ಕೊರತೆಯನ್ನು ನೀಗಿಸುವುದರ ಜೊತೆಗೆ ಈ ಪ್ರದೇಶದ ಬೆಳವಣಿಗೆಗೆ ತಳಹದಿಯಾಗಬೇಕು ಎಂಬುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಶಯ. ಇಲ್ಲಿನ ವಾಣಿಜ್ಯ ಅಭಿವೃದ್ಧಿಗೆ ಹೊಸ ದಿಸೆ ತೋರಿಸುವ ಸಲುವಾಗಿಯೇ 100 ಮೀ ಅಗಲದ ಪ್ರಮುಖ ರಸ್ತೆಯು (ಎಂಎಆರ್‌) ಈ ಬಡಾವಣೆಯ ಮೂಲಕ ಹಾದುಹೋಗುವಂತೆ ಯೋಜನೆ ರೂಪಿಸಲಾಗಿದೆ.

ಈ ಬಡಾವಣೆಯ ಇತರ ಕಾಮಗಾರಿಗಳಂತೆಯೇ ಈ ಪ್ರಮುಖ ರಸ್ತೆಯ ನಿರ್ಮಾಣ ಕಾರ್ಯವೂ ಐದು ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಪ್ರಮುಖ ರಸ್ತೆ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲದಿರುವುದು ಕೂಡ ಇದಕ್ಕೆ ಕಾರಣವಾಗಿತ್ತು. ಈ ರಸ್ತೆಗೆ ಜಾಗ ಬಿಟ್ಟುಕೊಡಲು ರೈತರು ಮೀನಮೇಷ ಎಣಿಸುತ್ತಿದ್ದರು. ಭೂಸ್ವಾಧೀನ ಬಿಕ್ಕಟ್ಟನ್ನು ಪಕ್ಕಕ್ಕಿಟ್ಟ ಬಿಡಿಎ ಸಾಧ್ಯವಿರುವ ಕಡೆಯಲ್ಲೆಲ್ಲ ರಸ್ತೆ ಅಭಿವೃದ್ಧಿ ಕಾರ್ಯವನ್ನು ಇತ್ತೀಚೆಗೆ ಚುರುಕುಗೊಳಿಸಿದೆ. ಕೆಲವೆಡೆ ಡಾಂಬರೀಕರಣವನ್ನೂ ಪೂರ್ಣಗೊಳಿಸಿದೆ. ಸೀಗೆಹಳ್ಳಿ– ಮಾಚೋಹಳ್ಳಿ ರಸ್ತೆಗೆ ಸಮಾನಾಂತರವಾಗಿ ಸಾಗುವ ಪ್ರಮುಖ ರಸ್ತೆಯಲ್ಲಿ ಸುಮಾರು 2 ಕಿ.ಮೀಗಳಷ್ಟು ಡಾಂಬರೀಕರಣ (ಬ್ಲಾಕ್–1 ಎಚ್‌ ಸೆಕ್ಟರ್‌ನಲ್ಲಿ ) ನಡೆದಿದೆ.

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ನಡುವೆ ಪ್ರಮುಖ ರಸ್ತೆ ನಿರ್ಮಾಣಕ್ಕೆ ಒಟ್ಟು 321 ಎಕರೆ 10 ಗುಂಟೆ ಭೂಸ್ವಾಧೀನ ನಡೆಸಲು ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ 252 ಎಕರೆ 35 ಗುಂಟೆಯನ್ನು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಈ ಕಾಮಗಾರಿಗೆ ಜಾಗ ಬಿಟ್ಟುಕೊಡಬೇಕಾದ ಕೆಲವು ಭೂಮಾಲೀಕರು, ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಹಾಗಾಗಿ 145 ಎಕರೆ 6 ಗುಂಟೆ ಜಾಗದಲ್ಲಿ ಮಾತ್ರ ರಸ್ತೆ ಕಾಮಗಾರಿ ನಡೆದಿದೆ. 176 ಎಕರೆ 4 ಗುಂಟೆಗಳಷ್ಟು ಜಾಗದಲ್ಲಿ ಕಾಮಗಾರಿ ಬಾಕಿ ಇದೆ.

‘ಪೂರ್ತಿ ಭೂಸ್ವಾಧೀನ ಮುಗಿಯುವವರೆಗೆ ಕಾದರೆ ಕಾಮಗಾರಿಯಲ್ಲಿ ಪ್ರಗತಿ ಸಾಧಿಸಲಾಗದು. ಹಾಗಾಗಿ, ಜಾಗ ಲಭ್ಯ ಇರುವ ಕಡೆಗಳಲ್ಲೆಲ್ಲ ಕಾಮಗಾರಿಯನ್ನು ತ್ವರಿತವಾಗಿ ನಡೆಸಿದ್ದೇವೆ. ಕೆಲವು ಕಡೆ ಡಾಂಬರೀಕರಣವೂ ಪ್ರಗತಿಯಲ್ಲಿದೆ. ಜೊತೆಗೆ ರೈತರ ಮನವೊಲಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಪ್ರಯತ್ನವೂ ಸಾಗಿದೆ’ ಎಂದು ಬಿಡಿಎ ಆಯುಕ್ತ ಎಂ.ಬಿ.ರಾಜೇಶ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. ‘10 ಕಿ.ಮೀ ಉದ್ದದ ರಸ್ತೆ ಇದು. ಸುಮಾರು 2.5 ಕಿ.ಮೀ.ಗಳಷ್ಟು ರಸ್ತೆ ನಿರ್ಮಾಣಕ್ಕೆ ಅಲ್ಲಲ್ಲಿ ಭೂಸ್ವಾಧೀನ ಸಮಸ್ಯೆ ಇದೆ. ಇನ್ನುಳಿದ 7.5 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಅಂತಹ ಅಡ್ಡಿಗಳೇನಿಲ್ಲ. ಅಲ್ಲೆಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ತಿಳಿಸಿದರು.

‘ಬುಲೇವಾರ್ಡ್‌ ಕೈಬಿಡದಿರಿ’

‘ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ 27.5 ಮೀ ಅಗಲದ ಬುಲೇವಾರ್ಡ್‌ ನಿರ್ಮಿಸಲು ಬಿಡಿಎ ಉದ್ದೇಶಿಸಿತ್ತು. ಅದನ್ನು ಕೈಬಿಟ್ಟು ಅಲ್ಲಿ ನಿವೇಶನ ನಿರ್ಮಿಸುವ ಪ್ರಸ್ತಾವವನ್ನು ಬಿಡಿಎ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿದೆ. ಯಾವುದೇ ಕಾರಣಕ್ಕೂ ಬುಲೇವಾರ್ಡ್‌ ನಿರ್ಮಾಣ ಕೈಬಿಡಬಾರದು’ ಎಂಬುದು ಈ ಬಡಾವಣೆಯ ನಿವೇಶನದಾರರ ಒತ್ತಾಯ.

‘ಈ ಬಡಾವಣೆಯ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಇಲ್ಲಿ ಬುಲೇವಾರ್ಡ್‌ ಹಾಗೂ ಸರ್ವಿಸ್‌ ರಸ್ತೆಗಳನ್ನು ಒಳಗೊಂಡ 100 ಮೀ ಅಗಲದ ರಸ್ತೆಯನ್ನು ನಿರ್ಮಿಸಲು ತೀರ್ಮಾನಿಸಿತ್ತು. ಈಗ ಅದರಲ್ಲಿ ಬುಲೇವಾರ್ಡ್‌ ನಿರ್ಮಿಸುವುದನ್ನು ಕೈಬಿಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರ ಮೂಲ ಯೋಜನೆಯಲ್ಲಿ ಮಾರ್ಪಾಡು ಮಾಡಬಾರದು. ಯೋಜನೆ ಪ್ರಕಾರವೇ ರಸ್ತೆ ನಿರ್ಮಿಸಿದ್ದೇ ಆದರೆ ಬಿಡಿಎಗೂ ಭವಿಷ್ಯದಲ್ಲಿ ಪ್ರಯೋಜನವಾಗಲಿದೆ ಹಾಗೂ ಒಳ್ಳೆಯ ಹೆಸರೂ ಬರಲಿದೆ’ ಎಂದು ಎನ್‌ಪಿಕೆಲ್‌ ನಿವೇಶನದಾರರ ಮುಕ್ತ ವೇದಿಕೆಯ ಅಧ್ಯಕ್ಷ ಎನ್‌.ಶ್ರೀಧರ್‌ ಅಭಿಪ್ರಾಯ‍ಪಟ್ಟರು.

***

‘ಬಡಾವಣೆಯ ಕಿರೀಟದ ಗರಿ ಈ ಪ್ರಮುಖ ರಸ್ತೆ’

100 ಮೀ ಅಗಲದ ಪ್ರಮುಖ ರಸ್ತೆಯು ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಿರೀಟದ ಗರಿ ಇದ್ದಂತೆ. ಪ್ರಮುಖ ರಸ್ತೆಯಲ್ಲಿ ಕೆಲವೆಡೆ ಡಾಂಬರೀಕರಣವನ್ನು ಕೈಗೆತ್ತಿಕೊಂಡಿರುವುದು ಉತ್ತಮ ಬೆಳವಣಿಗೆ. ಭೂಮಾಲೀಕರ ಜೊತೆ ಮಾತುಕತೆ ನಡೆಸಿ ಭೂಸ್ವಾಧೀನ ಬಿಕ್ಕಟ್ಟು ಬಗೆಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಇಷ್ಟು ಮಾಡಿಯೂ ಅದರ ಪ್ರಯೋಜನ ಸಿಗದು

-ಎನ್.ಶ್ರೀಧರ್‌,ಎನ್‌ಪಿಕೆಎಲ್‌ ಮುಕ್ತ ವೇದಿಕೆ ಅಧ್ಯಕ್ಷ

***
‘ರಸ್ತೆಗೆ ಅನುದಾನ ಹೊಂದಿಸುವುದೂ ಮುಖ್ಯ’

ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಬುಲೇವಾರ್ಡ್‌ಗಳನ್ನು ನಿರ್ಮಿಸುವ ಅಂಶ ಮೂಲ ಯೋಜನೆಯಲ್ಲಿ ಇರುವುದು ನಿಜ. ಆದರೆ, ಈ ರಸ್ತೆ ಕಾಮಗಾರಿಗೆ ತಗಲುವ ವೆಚ್ಚವನ್ನು ಯಾವ ಮೂಲದಿಂದ ಭರಿಸಬೇಕು ಎಂಬುದು ನಮ್ಮ ಮುಂದಿರುವ ಪ್ರಶ್ನೆ. ಹಾಗಾಗಿ, ಬುಲೇವಾರ್ಡ್ ನಿರ್ಮಾಣಕ್ಕೆ ಬಳಸುವ ಜಾಗದಲ್ಲಿ ವಾಣಿಜ್ಯ ನಿವೇಶನಗಳನ್ನು ನಿರ್ಮಿಸಿ ಅದರಿಂದ ಹಣಕಾಸು ಹೊಂದಿಕೆ ಮಾಡುವ ಪ್ರಸ್ತಾವ ಬಿಡಿಎ ಮುಂದೆ ಇರುವುದು ನಿಜ. ಆದರೆ, ಇದಕ್ಕೆ ಇನ್ನೂ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ. ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ಬಿಡಿಎ
ಬದ್ಧವಾಗಿರಲಿದೆ’

-ಎಂ.ಬಿ.ರಾಜೇಶ ಗೌಡ,ಬಿಡಿಎ ಆಯುಕ್ತ

***

‘ಬುಲೇವಾರ್ಡ್‌ ಕೈಬಿಟ್ಟರೆ ದೂರಗಾಮಿ ಪರಿಣಾಮ’

ನಗರದಲ್ಲಿ ಮೊದಲೇ ಹಸಿರು ಪಟ್ಟಿ ಕಡಿಮೆ ಆಗುತ್ತಿದೆ. ಕೆಂಪೇಗೌಡ ಬಡಾವಣೆಯಲ್ಲಿ ಎಲ್ಲೂ ದೊಡ್ಡ ಉದ್ಯಾನಗಳಿಲ್ಲ. ಬುಲೇವಾರ್ಡ್‌ಗಳನ್ನೂ ಕೈಬಿಟ್ಟರೆ ಅದರಿಂದ ದೂರಗಾಮಿ ಪರಿಣಾಮಗಳನ್ನು ಇಲ್ಲಿನ ನಿವಾಸಿಗಳು ಎದುರಿಸಬೇಕಾಗುತ್ತದೆ

-ಎ.ಎಸ್.ಸೂರ್ಯಕಿರಣ್‌, ಎನ್‌ಪಿಕೆಎಲ್‌ ಮುಕ್ತ ವೇದಿಕೆ

***

‘ಟ್ರಕ್‌ ಟರ್ಮಿನಲ್‌ಗೆ ಮೀಸಲಿಟ್ಟ ಜಾಗ ರೈತರಿಗೆ ಕೊಡಿ’

‘ಹೊರ ವರ್ತುಲ ರಸ್ತೆ (ಪಿಆರ್‌ಆರ್‌) ಪಕ್ಕ ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸೂಲಿಕೆರೆ ಗ್ರಾಮದಲ್ಲಿ ಭೂಸ್ವಾಧೀನ ನಡೆಸಿತ್ತು. ನೈಸ್‌ ರಸ್ತೆ ನಿರ್ಮಾಣವಾಗಿರುವುದರಿಂದ ಈ ಟ್ರಕ್‌ ಟರ್ಮಿನಲ್‌ ನಿರ್ಮಿಸುವ ಅವಶ್ಯಕತೆ ಇಲ್ಲ. ರೈತರಿಗೆ ಅಭಿವೃದ್ಧಿ ಪಡಿಸಿದ ನಿವೇಶನ ನೀಡಲು ಈ ಜಾಗವನ್ನು ಬಳಸಬಹುದು ಎಂದು ಕೋರಿದ್ದೆವು. ಇದಕ್ಕೆ ಬಿಡಿಎ ಸ್ಪಂದಿಸಿಲ್ಲ’ ಎಂದು ಎನ್‍ಪಿಕೆ ಬಡಾವಣೆಯ ರೈತ ನಿವೇಶನದಾರರ ಸಂಘದ ಅಧ್ಯಕ್ಷ ಚನ್ನಪ್ಪ ತಿಳಿಸಿದರು.

‘ಮಾಗಡಿ ರಸ್ತೆ ಬಳಿ ಪ್ರಮುಖ ರಸ್ತೆಗೆ 16 ಎಕರೆಗಳಷ್ಟು ಜಾಗ ಬೇಕಿದೆ. ಕೆಲವು ಮಾರ್ಬಲ್‌ ವ್ಯಾಪಾರಿಗಳು ಭೂಸ್ವಾಧೀನ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರಿಗೆ ಬದಲಿ ಜಾಗದ ವ್ಯವಸ್ಥೆ ಮಾಡಿ, ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ದೂರಿದರು.

***

ಭೂಸ್ವಾಧೀನ ಬಿಕ್ಕಟ್ಟು ಏಕೆ?

ಪ್ರಮುಖ ರಸ್ತೆಗೆ ಜಾಗ ಬಿಟ್ಟುಕೊಡುವ ರೈತರಿಗೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲು ಬಿಡಿಎ ಆಡಳಿತ ಮಂಡಳಿ ಒಪ್ಪಿದೆ. 1 ಎಕರೆ ಜಾಗ ಬಿಟ್ಟುಕೊಡುವ ರೈತರಿಗೆ ಸುಮಾರು 11,500 ಚದರ ಅಡಿಗಳಷ್ಟು ವಿಸ್ತೀರ್ಣದ ನಿವೇಶನ ಸಿಗಲಿದೆ. ಆದರೆ, ಪ್ರಮುಖ ರಸ್ತೆಯ ಅಕ್ಕ ಪಕ್ಕದ ನಿವೇಶನಗಳನ್ನೇ ತಮಗೆ ನೀಡಬೇಕು ಎಂಬುದು ರೈತರ ಒತ್ತಾಯ.

‘ಈ ಪ್ರಮುಖ ರಸ್ತೆ ಹಾದು ಹೋಗುವ ಅಕ್ಕಪಕ್ಕದ ನಿವೇಶನಗಳನ್ನು ಪ್ರಭಾವಿ ವ್ಯಕ್ತಿಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ. ಜಮೀನು ಬಿಟ್ಟುಕೊಟ್ಟವರಿಗೆ ಹಳ್ಳ–ಕೊಳ್ಳದ ಜಾಗದಲ್ಲಿ ನಿವೇಶನ ನೀಡಿದರೆ ಒಪ್ಪಲಾದೀತೇ’ ಎನ್ನುವುದು ರೈತರ ಪ್ರಶ್ನೆ.

‘ರಸ್ತೆ ನಿರ್ಮಾಣವಾಗಬೇಕಾಗಿರುವ ಜಾಗದಲ್ಲಿ ಕೆಲವು ಕಡೆ ತೆಂಗು, ಅಡಿಕೆ ಮರಗಳಿದ್ದು, ಅವುಗಳಿಗೆ ಪ್ರತ್ಯೇಕ ಪರಿಹಾರ ನೀಡಬೇಕು ಎಂಬುದು ರೈತರ ಒತ್ತಾಯ. ಬಿಟ್ಟು ಕೊಟ್ಟವರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡುತ್ತಿರುವ ಕಾರಣ ಮರಗಳಿಗೆ ಪ್ರತ್ಯೇಕ ಪರಿಹಾರ ನೀಡಲಾಗದು ಎಂಬುದು ಬಿಡಿಎ ವಾದ. ಇದನ್ನು ಪ್ರಶ್ನಿಸಿ ಕೆಲವು ರೈತರು ನ್ಯಾಯಾಲಯದ ಮೊರೆ ಹೋಗಿರುವುದು ನಿಜ. ಮಾತುಕತೆ ಮೂಲಕ ಈ ಬಿಕ್ಕಟ್ಟು ಬಗೆಹರಿಸಬಹುದು. ಆದರೆ, ಆ ಇಚ್ಛಾಶಕ್ತಿ ಪ್ರಾಧಿಕಾರಕ್ಕೆ ಇಲ್ಲ’ ಎಂದು ಚನ್ನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT