ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮ್ರಾನ್‌–ರಾಹುಲ್‌ ಒಂದೇ: ಪೌರತ್ವ ಕಾಯ್ದೆ ಬೆಂಬಲಿಸಿ ರ‍್ಯಾಲಿಯಲ್ಲಿ ತೇಜಸ್ವಿ

Last Updated 23 ಡಿಸೆಂಬರ್ 2019, 1:57 IST
ಅಕ್ಷರ ಗಾತ್ರ

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ವಂದೇ ಮಾತರಂ ಸಂಘಟನೆ ಹಾಗೂ ಬಂಗಾಳಿ ಸಂಘಟನೆಗಳ ಸದಸ್ಯರು ಸೇರಿದಂತೆ ನೂರಾರು ಜನ ನಗರದ ಪುರಭವನದ ಮುಂಭಾಗದಲ್ಲಿ ಭಾನುವಾರ ರ‍್ಯಾಲಿ ನಡೆಸಿ, ಕಾಯ್ದೆಯ ಪರ ಘೋಷಣೆ ಕೂಗಿದರು.

ಈ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ, ಇದು ಭಾರತೀಯರಿಗೆ ಪೂರಕವಾಗಿದೆ ಎಂದು ಬೆಂಬಲಿಗರು ಪ್ರತಿಪಾದಿಸಿದರು.

ಸಂಸದ ತೇಜಸ್ವಿ ಸೂರ್ಯ, ‘ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದೇ ಮಾತುಗಳನ್ನು ಆಡುತ್ತಾರೆ. ಈ ಇಬ್ಬರಲ್ಲಿ ಯಾವುದೇ ವ್ಯತ್ಯಾಸ ಇಲ್ಲ’ ಎಂದು ಅವರು ವಾಗ್ದಾಳಿ ನಡೆಸಿದರು.

ಯುವ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ತೀರ್ಪು ಬಂದಾಗ ನಾವ್ಯಾರೂ ಪಟಾಕಿ ಹೊಡೆಯಲಿಲ್ಲ. ಗಲಾಟೆ ಮಾಡಲಿಲ್ಲ. ಆದರೆ, ಇವರು ಪ್ರತಿಭಟನೆ ಹೆಸರಲ್ಲಿ ನಮ್ಮ ಮಕ್ಕಳು ಶಾಲೆಗೆ ಹೋಗುವ ಬಸ್‌ಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಪ್ರತಿಭಟನೆ ಹೇಗೆ ಮಾಡಬೇಕು ಎಂಬುದನ್ನು ಹಿಂದೂಗಳನ್ನು ನೋಡಿ ತಿಳಿದುಕೊಳ್ಳಿ’ ಎಂದು ಅವರು ಹೇಳಿದರು.

ರ‍್ಯಾಲಿ ಹಿನ್ನೆಲೆಯಲ್ಲಿ ಪುರಭವನ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪುರಭವನ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಂಕ್‌ ನೌಕರರ ವಾರ್ಷಿಕ ಸಮ್ಮೇಳನ ಆಯೋಜಿಸಲಾಗಿತ್ತು.

ಪುರ ಭವನದ ಎದುರು ಕಾಯ್ದೆ ಪರ ಘೋಷಣೆ, ಧ್ವನಿವರ್ಧಕ ಬಳಕೆ ಮಾಡಿದ್ದರಿಂದ ಸಮ್ಮೇಳನಕ್ಕೆ ತೊಂದರೆ ಯಾಯಿತು ಎಂದು ಬ್ಯಾಂಕ್‌ ನೌಕರರು ಬೇಸರ ವ್ಯಕ್ತಪಡಿಸಿದರು.

ಬೆಂಬಲಿಗನ ಮೇಲೆ ಹಲ್ಲೆ: ಆರೋಪ

‘ರ‍್ಯಾಲಿಯಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಬಿಜೆಪಿ ಕಾರ್ಯಕರ್ತ ವರುಣ್‌ ಮೇಲೆ ಕೊಲೆ ಯತ್ನ ನಡೆಸಲಾಗಿದೆ’ ಎಂದು ಬಿಜೆಪಿ ಆರೋಪಿಸಿದೆ.

‘ವರುಣ್‌ ಜೆ.ಪಿ ನಗರದ ತಮ್ಮ ನಿವಾಸಕ್ಕೆ ದ್ವಿಚಕ್ರದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಜೆ.ಸಿ. ರಸ್ತೆಯಲ್ಲಿ ಇಬ್ಬರು ಅಪರಿಚಿತರು ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರ ನೆರವಿನಿಂದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಹೇಳಿದೆ.ಆಸ್ಪತ್ರೆಗೆ ಭೇಟಿಕೊಟ್ಟ ಸಂಸದ ತೇಜಸ್ವಿ ಸೂರ್ಯ, ವರುಣ್ ಆರೋಗ್ಯ ವಿಚಾರಿಸಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT