ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಸುಂಕದಕಟ್ಟೆ ರಸ್ತೆ ಸಮಸ್ಯೆ ಪರಿಹಾರ

ಭೂಮಾಲೀಕರ ಮನವೊಲಿಸಿದ ಶಾಸಕ ಮಂಜುನಾಥ್
Last Updated 28 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ಸುಂಕದಕಟ್ಟೆಯಿಂದ ಹೆಗ್ಗನಹಳ್ಳಿ ಮೂಲಕ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಖಾಸಗಿ ಜಾಗ ಬಿಡಿಸಿಕೊಳ್ಳಲು ಭೂಮಾಲೀಕರೊಂದಿಗೆ ಶಾಸಕ ಆರ್. ಮಂಜುನಾಥ್ ಶುಕ್ರವಾರ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, 30 ವರ್ಷಗಳಿಂದ ಇದ್ದ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ.

ಮಾಗಡಿ ರಸ್ತೆಯಿಂದ ಹೆಗ್ಗನಹಳ್ಳಿ ಕ್ರಾಸ್ ಕಡೆಗೆ ಹೋಗುವ ರಸ್ತೆ ಕಾಲುದಾರಿ ರೀತಿಯಲ್ಲಿದ್ದು, ಖಾಸಗಿ ರಸ್ತೆಯಲ್ಲೇ ದಿನಕ್ಕೆ 500ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಸಂಚರಿಸಬೇಕಿತ್ತು. ಈ ರಸ್ತೆಯಲ್ಲಿ ಸಂಚರಿಸಲಾಗದೆ ಚಾಲಕರು ಮತ್ತು ಪ್ರಯಾಣಿಕರು ಹೈರಾಣಾಗಿದ್ದಾರೆ.

ಸುಂಕದಕಟ್ಟೆಯಿಂದ ಹೆಗ್ಗನಹಳ್ಳಿ ಕ್ರಾಸ್‌, ನಾಗರಹೊಳೆ ವೃತ್ತ, ಪೀಣ್ಯ ಎರಡನೇ ಹಂತ, ರಾಜಗೋಪಾಲನಗರದ ಮೂಲಕ ಜಾಲಹಳ್ಳಿ ಕ್ರಾಸ್‌ಗೆ ಸಂಪರ್ಕ ಕಲ್ಪಿಸಲು ಇರುವ ಪ್ರಮುಖ ರಸ್ತೆ ಇದಾಗಿದೆ. ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ಅದರಲ್ಲೂ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಈ ರಸ್ತೆಯೇ ಸಂಪರ್ಕ ಕೊಂಡಿ. ಮಾಗಡಿ ರಸ್ತೆಯಿಂದ ಹೆಗ್ಗನಹಳ್ಳಿ ಕ್ರಾಸ್‌ಗೆ ಸಂಪರ್ಕಿಸಲು ಇರುವುದು ಇದೊಂದೇ ರಸ್ತೆ.ಸೊಲ್ಲಾಪುರದಮ್ಮ ದೇವಸ್ಥಾನದ ಬಳಿಯಿಂದ ಹಾದು ಹೋಗುತ್ತಿದ್ದ ರಸ್ತೆಯೂ ಈಗ ಇಲ್ಲ. ಈಗ ಉಳಿದಿರುವುದು ಈ ಖಾಸಗಿ ರಸ್ತೆಯೊಂದೇ. ಕಿರಿದಾದ ರಸ್ತೆಯಲ್ಲೇ ಎರಡು ಕಡೆಯ ವಾಹನಗಳು ಕಷ್ಟದಲ್ಲಿ ಸಂಚರಿಸಬೇಕಾಗಿತ್ತು.

ಸಮರ್ಪಕ ಭೂಪರಿಹಾರ ಸಿಗದಿರುವುದರಿಂದ ರಸ್ತೆ ಅಭಿವೃದ್ಧಿಗೆ ಖಾಸಗಿ ರಸ್ತೆಯ ಮಾಲೀಕರು ಅವಕಾಶ ನೀಡಲು ಒಪ್ಪಿರಲಿಲ್ಲ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ಮಂಜುನಾಥ್, ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದರು. ‘ಪ್ರತಿ ಸೆಕೆಂಡ್‌ಗೆ ಒಂದರಂತೆ ಬಿಎಂಟಿಸಿ ಬಸ್‌ಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ರಸ್ತೆಯೇ ಇಲ್ಲವಾಗಿದ್ದರಿಂದ ಸಮಸ್ಯೆ ತೀವ್ರಗೊಂಡಿತ್ತು. ಟಿಡಿಆರ್ ಮೂಲಕ ಭೂಪರಿಹಾರ ಕೊಡಿಸುವ ಭರವಸೆ ನೀಡಿದ್ದರಿಂದ ಭೂಮಾಲೀಕರು ಒಪ್ಪಿದ್ದಾರೆ. ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ಐವರು ಎಂಜಿನಿಯರ್‌ಗಳ ಬದಲಾವಣೆ: ಧರಣಿ ಎಚ್ಚರಿಕೆ

‘ದಾಸರಹಳ್ಳಿ ವಲಯದಲ್ಲಿ ಕಳೆದ ಆರು ದಿನಗಳಿಂದ ಐವರು ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಬದಲಿಸಲಾಗಿದೆ. ಹೀಗೆ ಮಾಡಿದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಮಂಜುನಾಥ್ ಪ್ರಶ್ನಿಸಿದರು.

‘ಹೈಕೋರ್ಟ್‌ ಆದೇಶ ನೀಡಿದರೂ ₹110 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅಡ್ಡಿಪಡಿಸುತ್ತಿದೆ. ಇದರ ವಿರುದ್ಧ ಪಾಲಿಕೆ ಕಚೇರಿ ಅಥವಾ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸಲಾಗುವುದು. ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಜತೆ ಮಾತುಕತೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT