ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಕ್ಷೆ ಬೇಡುತ್ತಿದ್ದ ಟೈಲರ್: ಬದುಕು ಕಟ್ಟಿಕೊಟ್ಟ ಪಿಎಸ್‌ಐ

Last Updated 14 ನವೆಂಬರ್ 2021, 20:56 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿ ಮೃತಪಟ್ಟಿದ್ದರಿಂದ ಮಾನಸಿಕವಾಗಿ ನೊಂದು ಭಿಕ್ಷೆ ಬೇಡುತ್ತ ತಿರುಗುತ್ತಿದ್ದ ಶಂಕರ್ (42) ಎಂಬುವರಿಗೆ ಮಡಿವಾಳ ಸಂಚಾರ ಠಾಣೆ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಶಿವರಾಜ್ ಅಂಗಡಿ ಹಾಗೂ ಸಿಬ್ಬಂದಿ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.

ಪಾವಗಡದ ಶಂಕರ್, ತಮ್ಮೂರಿನಲ್ಲಿ ಟೈಲರ್ ಕೆಲಸ ಮಾಡುತ್ತಿದ್ದರು. ಎರಡೂವರೆ ವರ್ಷದ ಹಿಂದೆ ಪತ್ನಿ ತೀರಿಕೊಂಡಿದ್ದರು. ಅದೇ ನೋವಿನಲ್ಲಿ ಊರು ಬಿಟ್ಟಿದ್ದ ಶಂಕರ್, ಬೆಂಗಳೂರಿಗೆ ಬಂದಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಭಿಕ್ಷೆ ಬೇಡುತ್ತ ತಿರುಗಾಡುತ್ತಿದ್ದರು.

ಮಡಿವಾಳ ಸಂಚಾರ ಠಾಣೆ ಎದುರು ಇತ್ತೀಚೆಗೆ ಬಂದಿದ್ದ ಶಂಕರ್, ಕೈಯಲ್ಲಿ ಅನ್ನದ ಪೊಟ್ಟಣ ಹಿಡಿದಿದ್ದರು. ‘ಕುಡಿಯಲು ನೀರು ಕೊಡಿ’ ಎಂದು ಜನರ ಬಳಿ ಅಲೆದಾಡುತ್ತಿದ್ದರು. ಅವರ ಸ್ಥಿತಿ ನೋಡಿ ಭಯಗೊಂಡಿದ್ದ ಜನ, ನೀರು ಕೊಡಲು ಹಿಂದೇಟು ಹಾಕಿದ್ದರು. ಸ್ಥಳದಲ್ಲೇ ಕರ್ತವ್ಯದಲ್ಲಿದ್ದ ಪಿಎಸ್ಐ ಶಿವರಾಜ್, ಶಂಕರ್‌ ಅವರಿಗೆ ನೀರು ಕೊಟ್ಟು ಪೂರ್ವಾಪರ ವಿಚಾರಿಸಿದ್ದರು. ಅವಾಗಲೇ ಅವರೊಬ್ಬ ಟೈಲರ್ ಎಂಬುದು ಗೊತ್ತಾಗಿತ್ತು.

‘ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದ ಶಂಕರ್, ಚೆನ್ನಾಗಿ ಮಾತನಾಡಿದ್ದರು. ತಾವು ಬರೆದಿದ್ದ ಕವನಗಳನ್ನೂ ವಾಚಿಸಿದ್ದರು. ಅವರ ಬುದ್ಧಿವಂತಿಕೆ ನೋಡಿ, ಹೊಸ ಬದುಕು ಕಟ್ಟಿಕೊಡಬೇಕೆಂದು ಅನಿಸಿತು. ತಲೆಗೂದಲು ಹಾಗೂ ಗಡ್ಡ ಬಿಟ್ಟಿದ್ದ ಶಂಕರ್ ಅವರನ್ನು ಸಲೂನ್‌ಗೆ ಕರೆದೊಯ್ದು ಹೇರ್ ಕಟಿಂಗ್ ಮಾಡಿಸಲಾಯಿತು. ಹೊಸ ಬಟ್ಟೆ ತೊಡಿಸಿ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಇದಕ್ಕೆಲ್ಲ ಇನ್‌ಸ್ಪೆಕ್ಟರ್ ನವೀನ್‌ಕುಮಾರ್ ಸಹಕಾರ ನೀಡಿದರು’ ಎಂದು ಪಿಎಸ್‌ಐ ಶಿವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳನ್ನು ನೋಡಬೇಕೆಂದು ಹೇಳಿ ಶಂಕರ್ ತಮ್ಮೂರಿಗೆ ಹೋಗಿದ್ದಾರೆ. ಅವರು ವಾಪಸು ಬಂದ ಕೂಡಲೇ, ಬೆಂಗಳೂರಿನ ಸಾಯಿ ಗಾರ್ಮೇಂಟ್ಸ್ ಕಾರ್ಖಾನೆಯಲ್ಲಿ ಟೈಲರ್ ಕೆಲಸಕ್ಕೆ ಸೇರಿಸಲಾಗುವುದು’ ಎಂದೂ ಹೇಳಿದರು.

ಭಿಕ್ಷುಕನಿಗೆ ಹೊಸ ಬದುಕು ಕಟ್ಟಿಕೊಡಲು ಪ್ರಯತ್ನಿಸುತ್ತಿರುವ ಪಿಎಸ್ಐ ಹಾಗೂ ಸಿಬ್ಬಂದಿ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT