ಭಾನುವಾರ, ಅಕ್ಟೋಬರ್ 25, 2020
28 °C
ಆದೇಶ ವಾಪಸ್‌ ಪಡೆಯುವಂತೆ ಆಗ್ರಹ

ಬೆಂಗಳೂರು ವಿ.ವಿ ಜಮೀನು ಹಸ್ತಾಂತರಕ್ಕೆ ಎಚ್‌.ಡಿ. ಕುಮಾರಸ್ವಾಮಿ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯೋಗ ವಿಶ್ವವಿದ್ಯಾಲಯ ಮತ್ತು ಇತರ ಸಂಸ್ಥೆಗಳ ಸ್ಥಾಪನೆಗೆ ಬೆಂಗಳೂರು ವಿಶ್ವವಿದ್ಯಾಲಯದ 32 ಎಕರೆಯನ್ನು ನೀಡುವ ಆದೇಶ ವಾಪಸ್‌ ಪಡೆಯುವಂತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಅವರು, ‘ಎರಡು ದಶಕಗಳಿಂದ ಪರಿಸರ ತಜ್ಞರು ಶ್ರಮವಹಿಸಿ ಬೆಳೆಸಿದ ತಾಣವನ್ನು ಸರ್ಕಾರ ಯಾವುದೇ ಸಮಾಲೋಚನೆ ನಡೆಸದೆ ಹಸ್ತಾಂತರಿಸುತ್ತಿರುವುದು ಜೀವವೈವಿಧ್ಯ ತಾಣಕ್ಕೆ ಕುತ್ತು ತರುವ ನಿರ್ಧಾರ. ಯೋಗ ವಿಶ್ವವಿದ್ಯಾಲಯಕ್ಕೆ 15 ಎಕರೆ, ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 15 ಎಕರೆ ಮತ್ತು ಸಿಬಿಎಸ್‌ಇ ಪ್ರಾದೇಶಿಕ ಕಚೇರಿಗೆ ಎರಡು ಎಕರೆ ಜಮೀನು ನೀಡಲಾಗುತ್ತಿದೆ. ಇದರಿಂದ ಬೆಂಗಳೂರು ವಿಶ್ವವಿದ್ಯಾಲಯದ ಆವರಣ ಕಾಂಕ್ರೀಟ್‌ ಕಾಡಾಗಲಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು 20 ವರ್ಷಗಳ ಕಾಲ ಶ್ರಮಿಸಿ ಈ ಜೀವವೈವಿಧ್ಯ ತಾಣವನ್ನು ನಿರ್ಮಿಸಿದ್ದಾರೆ. ಹಿಂದೆ ಕುಲಪತಿಗಳಾಗಿದ್ದ ಡಾ.ಕೆ. ಸಿದ್ದಪ್ಪ ಅವರು, ‘ಇದು ಒಂದು ಬಯಲು ಪ್ರಯೋಗಾಲಯವಾಗಲಿದೆ’ ಎಂದು ನಿರೀಕ್ಷಿಸಿ ಉದ್ಯಾನಕ್ಕೆ ಚಾಲನೆ ನೀಡಿದ್ದರು. ಅದರಂತೆ, ಜೀವವಿಜ್ಞಾನ, ಪ್ರಾಣಿವಿಜ್ಞಾನ, ಪರಿಸರ ವಿಜ್ಞಾನ ಸೇರಿದಂತೆ ಹಲವು ವಿಭಾಗಗಳಿಗೆ ಅದು ಬಯಲು ಪ್ರಯೋಗಾಲಯವಾಗಿದೆ. ಈ ಜಮೀನನ್ನು ಬೇರೆ ಸಂಸ್ಥೆಗಳಿಗೆ ನೀಡುತ್ತಿರುವುದು ಖಂಡನೀಯ. ಸರ್ಕಾರದ ನಿರ್ಧಾರ, ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬಂತಾಗಿದೆ ಎಂದು ಟೀಕಿಸಿದ್ದಾರೆ.

‘ಪರಿಸರ ತಜ್ಞ ಎ.ಎನ್‌. ಯಲ್ಲಪ್ಪ ರೆಡ್ಡಿ ಅವರು ಗೌರವ ಡಾಕ್ಟರೇಟ್‌ ಹಿಂದಿರುಗಿಸುವ ಮೂಲಕ ಸಾತ್ವಿಕ ಸಿಟ್ಟು ಪ್ರದರ್ಶಿಸಿದ್ದಾರೆ. ಪರಿಸರ ಪ್ರೇಮಿಗಳು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಇಂತಹ ತಾಣವನ್ನು ಧ್ವಂಸ ಮಾಡಬಾರದು. ಮುಂದಿನ ಪೀಳಿಗೆಗೆ ಉಳಿಸಬೇಕು. ಅದಕ್ಕಾಗಿ ನಿರ್ಧಾರ ವಾಪಸ್‌ ಪಡೆಯಬೇಕು’ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು