ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Water Crisis | ಜುಲೈ 1ರೊಳಗೆ ನಗರಕ್ಕೆ ಅಗತ್ಯದಷ್ಟು ನೀರು

2026ರ ವೇಳೆಗೆ ‘ಸರ್‌ಪ್ಲಸ್‌ ನೀರು’: ಜಲಮಂಡಳಿ ಅಧ್ಯಕ್ಷ
Published 21 ಮಾರ್ಚ್ 2024, 15:37 IST
Last Updated 21 ಮಾರ್ಚ್ 2024, 15:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅಗತ್ಯವನ್ನು ಪೂರೈಸುವಷ್ಟು ನೀರು ಜುಲೈ 1ರೊಳಗೆ ಲಭ್ಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

2026ರ ವೇಳೆಗೆ ನಗರದ ಅಗತ್ಯವನ್ನೂ ಮೀರಿ ನೀರು (ಸರ್‌ಪ್ಲಸ್‌ ನೀರು) ಲಭ್ಯವಾಗಲಿದೆ. ಇದಕ್ಕಾಗಿ ಜಲಮಂಡಳಿ ಹಲವು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ನೀರಿನ ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಹಾಗೂ ಮಳೆ ನೀರು ಮರುಪೂರಣದ ಮೂರು ಪ್ರಮುಖ ಯೋಜನೆಗಳ ಅಡಿಯಲ್ಲಿ ಅಭಿಯಾನ ಪ್ರಾರಂಭಿಸಿದ್ದೇವೆ ಎಂದರು.

ಕಾವೇರಿ ನೀರು ಹಾಗೂ ಕೊಳವೆಬಾವಿಗಳ ಮೂಲಕ ಲಭ್ಯವಾಗುತ್ತಿರುವ ಶುದ್ಧ ನೀರಿನ ಸಮರ್ಪಕ ಬಳಕೆ ಹಾಗೂ ಅದರ ದುರ್ಬಳಕೆಯನ್ನು ತಪ್ಪಿಸಿ ‘ಉಳಿತಾಯಕ್ಕೆ’ ಒತ್ತು ನೀಡುವುದು ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕರಿಗೆ ಹಲವಾರು ಸೂಚನೆಗಳನ್ನು ನೀಡಲಾಗಿದೆ ಎಂದರು.

ಅಂತರ್ಜಲ ಕುಸಿತದ ಕಾರಣ ಎದುರಾಗಿರುವ ಅಭಾವವನ್ನು ಸರಿದೂಗಿಸಲು, ಹೆಚ್ಚಿನ ಪ್ರಮಾಣದ ನೀರಿನ ಬಳಕೆದಾರರಿಗೆ (ಬಲ್ಕ್‌ ಯೂಸರ್ಸ್‌) ಶೇ 20ರಷ್ಟು ನೀರು ಕಡಿತಗೊಳಿಸಲಾಗುತ್ತದೆ. ಸ್ವಚ್ಛತೆ ಹಾಗೂ ಇನ್ನಿತರ ಅಗತ್ಯಕ್ಕೆ ರಿಯಾಯಿತಿ ದರದಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರನ್ನು ಒದಗಿಸಲಾಗುತ್ತಿದೆ. 49 ಸಂಸ್ಥೆಗಳು ಸಂಸ್ಕರಿಸಿದ ನೀರನ್ನು ಈಗಾಗಲೇ ಬಳಸುತ್ತಿವೆ. 1,300 ಎಂಎಲ್‌ಡಿ ಅಷ್ಟು ಸಂಸ್ಕರಿಸಿದ ನೀರು ಲಭ್ಯವಿದ್ದು ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳೂ ಉಪಯೋಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಂಸ್ಕರಿಸಿದ ನೀರನ್ನು 14ಕ್ಕೂ ಹೆಚ್ಚು ಕೆರೆಗಳಿಗೆ ತುಂಬಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಕೆರೆಗಳನ್ನು ತುಂಬಿಸುವುದು ಆದ್ಯತೆಯಾಗಿದೆ. ಅಲ್ಲದೆ, ಬತ್ತಿಹೋಗಿರುವ ಕೊಳವೆಬಾವಿಗಳನ್ನು ಬಳಸಿಕೊಂಡು ಅಂತರ್ಜಲ ಮತ್ತು ಮಳೆ ನೀರು ಮರುಪೂರಣ ಮಾಡಲಾಗುತ್ತದೆ. ಪ್ರತಿಯೊಂದು ಹೊಸ ಕೊಳವೆಬಾವಿ ಕೊರೆಯುವ ಸಂದರ್ಭದಲ್ಲಿ ಎರಡು ಇಂಗುಗುಂಡಿಗಳನ್ನು ನಿರ್ಮಿಸುವುದನ್ನು ಕಡ್ಡಾಯಗೊಳಿಸಲಿದ್ದೇವೆ. ಜಲಮಂಡಳಿಯಿಂದಲೇ ಈ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ ಎಂದರು.

ಉಳಿತಾಯ, ಸಂಸ್ಕರಿಸಿದ ನೀರಿನ ಬಳಕೆ ಅಂತರ್ಜಲ ಹೆಚ್ಚಳದ ‘ಥ್ರೀ ಪ್ಲಾನ್‌ ಸ್ಟ್ರಾಟೆಜಿ’ ಜನರಲ್ಲಿ ಜಾಗೃತಿ ಮೂಡಿಸುವ ಆಂದೋಲನ

ದುರ್ಬಳಕೆಗೆ ‘ದಂಡ ಅಭಿಯಾನ’

‘ನೀರಿನ ದುರ್ಬಳಕೆ ಮಾಡುತ್ತಿರುವವರಿಗೆ ದಂಡ ವಿಧಿಸುವ ಅಭಿಯಾನವನ್ನು ಆರಂಭಿಸಲಾಗುತ್ತದೆ. ಈ ಎಲ್ಲಾ ಕ್ರಮಗಳು ಜಲಮಂಡಳಿಯನ್ನು ಶ್ರೀಮಂತಗೊಳಿಸುವುದಕ್ಕೆ ಅಲ್ಲ ನಗರವನ್ನು ನೀರಿನ ಲಭ್ಯತೆಯಲ್ಲಿ ಶ್ರೀಮಂತಗೊಳಿಸುವುದಾಗಿದೆ. ಸಾರ್ವಜನಿಕರು ಇಂತಹ ಸಂಕಷ್ಟ ಕಾಲದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ಜಲಮಂಡಳಿ ಜೊತೆ ಕೈಜೋಡಿಸಬೇಕು’ ಎಂದು ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT