ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೊಳವೆ ಬಾವಿ, ನೀರಿಗಾಗಿ ಕಾಯುವ ಜನ

Last Updated 16 ಮಾರ್ಚ್ 2019, 20:10 IST
ಅಕ್ಷರ ಗಾತ್ರ

ನೆಲಮಂಗಲ: ಬಿಸಿಲ ಬೇಗೆ ಹೆಚ್ಚಾದಂತೆ ನೀರಿನ ಸಮಸ್ಯೆ ತಾಲ್ಲೂಕಿನಾದ್ಯಂತ ಉಲ್ಬಣಿಸುತ್ತಿದೆ.

ಪಟ್ಟಣದಲ್ಲಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿತ್ತು. ಪ್ರಸ್ತುತ ಮೂರು, ನಾಲ್ಕು ದಿನಗಳಿಗೆ ವಿಸ್ತರಿಸಿದೆ. ಕೊಳವೆಬಾವಿ ಸುಸ್ಥಿತಿಯಲ್ಲಿರುವ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿರುವ ಪ್ರದೇಶಗಳಲ್ಲಿ ಸಮಸ್ಯೆ ಇದೆ. ನೀರು ಖಾಲಿಯಾದರೆ ಏನು ಮಾಡಬೇಕು ಎಂಬ ಆತಂಕದಲ್ಲಿ ಜನರಿದ್ದಾರೆ.

ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ವಾರಕ್ಕೆ ಎರಡು ಬಾರಿ ನೀರು ಬಿಡುತ್ತಿದ್ದರು. ಪ್ರಸ್ತುತ ವಾರಕ್ಕೆ ಒಂದು ಬಾರಿ ಬಿಡುವುದೂ ಕಷ್ಟವಾಗಿದೆ. ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ದುಡ್ಡು ಇರುವವರು ಟ್ಯಾಂಕರ್‌ ನೀರನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಬಡವರು ನೀರಿಗಾಗಿ ಅಲೆಯುವಂತಾಗಿದೆ.

ಗ್ರಾಮಸ್ಥರಾದ ಮಂಜಮ್ಮ, ‘ನಾವು ನೀರಿಗಾಗಿ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಬೇಕು. ವಾಹನಗಳು ವೇಗವಾಗಿ ಬರುತ್ತಿರುತ್ತವೆ. ಅನಾಹುತ ಸಂಭವಿಸುವ ಭಯದಲ್ಲೆ ನೀರು ತರುತ್ತಿದ್ದೇವೆ. ನೀರು ಸಂಗ್ರಹ ಟ್ಯಾಂಕ್‌ ಕಟ್ಟಿಸಿಕೊಡಿ ಎಂದು ಪಂಚಾಯಿತಿ ಸದಸ್ಯರಿಗೆ ಹೇಳಿ ಸಾಕಾಯಿತು. ಖಾಸಗಿ ಕೊಳವೆಬಾವಿಗಳ ಮಾಲೀಕರ ಬಳಿ ನೀರಿಗಾಗಿ ಬೇಡುವ ಸ್ಥಿತಿ ಎದುರಾಗಿದೆ’ ಎಂದು ಅಳಲು ತೋಡಿಕೊಂಡರು.

‘ನೀರಿನ ಸಮಸ್ಯೆ ಬಗ್ಗೆ ಗ್ರಾಮಸಭೆಯಲ್ಲಿ, ತಹಶೀಲ್ದಾರ್‌ ಹಾಗೂ ಎಇಇ ಅವರಿಗೂ ಮನವಿ ಸಲ್ಲಿಸಲಾಗಿದೆ. ಈವರೆಗೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಹಿಂದೆಲ್ಲ ಕೈ–ಪಂಪುಗಳಿದ್ದವು. ಈಗ ಅವೂ ಇಲ್ಲ. ಇಡೀ ಗ್ರಾಮಕ್ಕೆ ಒಂದೇ ಕೊಳವೆಬಾವಿ ಇದೆ’ ಎಂದು ಸ್ಥಳೀಯರಾದ ಡಿ.ಜಿ.ರೇಖಾ ಹೇಳಿದರು.

‘ಕಳಪೆ ಕೊಳವೆಗಳನ್ನು ಅಳವಡಿಸಿದ್ದು, ಅವೂ ಅಲ್ಲಲ್ಲಿ ಒಡೆದು ನೀರು ಸೋರಿಕೆಯಾಗುತ್ತಿದೆ. ಯಾರೂ ದುರಸ್ತಿಗೊಳಿಸಿಲ್ಲ. ಪ್ರಭಾವಿಗಳು ದೊಡ್ಡ ಕೊಳವೆಗಳ ನೀರಿನ ಸಂಪರ್ಕ ಪಡೆದಿದ್ದಾರೆ’ ಎಂದು ಸ್ಥಳೀಯರೊಬ್ಬರು ದೂರಿದರು.

‘ಟ್ಯಾಂಕರ್‌ ಕೊಡಿ ಎಂದು ಕೇಳಿದರೆ, ನೀತಿ ಸಂಹಿತೆ ಜಾರಿಯಲ್ಲಿದೆ ಎಂದು ಪಿಡಿಒ ಉತ್ತರ ನೀಡುತ್ತಿದ್ದಾರೆ’ ಎಂದು ಹೇಳಿದರು.

*

ಎಲ್ಲೆಲ್ಲಿದೆ ನೀರಿನ ಸಮಸ್ಯೆ?

ದೊಡ್ಡಬೊಮ್ಮಸಂದ್ರ
ವಿದ್ಯಾರಣ್ಯಪುರ ಅಂಚೆಯ ಪ್ರದೇಶಗಳಲ್ಲಿ ಕಾವೇರಿ ಮತ್ತು ಕೊಳವೆಬಾವಿ ನೀರನ್ನು ಸರಬರಾಜು ಮಾಡಲು ಕೊಳವೆ ಮಾರ್ಗಗಳನ್ನು ಅಳವಡಿಸಿದ್ದಾರೆ. ನೀರೇ ಬರುತ್ತಿಲ್ಲ. ಆದರೆ, ನೀರಿನ ಶುಲ್ಕದ ಚೀಟಿಗಳು ಪ್ರತಿ ತಿಂಗಳು ಮನೆಗೆ ಬರುತ್ತಿವೆ.
–ಲೀಲಾಕೃಷ್ಣಾ

*

ದೊಡ್ಡಬಿದರಕಲ್ಲು
ದೊಡ್ಡಬಿದರಕಲ್ಲಿನ ಬಸವೇಶ್ವರ ಬಡಾವಣೆಯಲ್ಲಿನ 600 ಮನೆಗಳಿಗೆ 1 ತಿಂಗಳಿನಿಂದ ನೀರು ಬರುತ್ತಿಲ್ಲ. ಟ್ಯಾಂಕರ್‌ ನೀರನ್ನೆ ಅವಲಂಬಿಸಿದ್ದೇವೆ.
–ಮಂಜುನಾಥ್‌ ಆಚಾರಿ

*
ಸರಾಯಿಪಾಳ್ಯ
ನಾಗವಾರ ಸಮೀಪದ ಸರಾಯಿಪಾಳ್ಯದಲ್ಲಿನ ಸುಮಾರು 500 ಮನೆಗಳಿಗೆ ಕೊಳವೆಬಾವಿ ನೀರನ್ನು ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಕೇಳಿದರೆ, ‘ಕೊಳವೆಬಾವಿ ರಿಪೇರಿ’ಯ ನೆಪ ಹೇಳುತ್ತಾರೆ. ಟ್ಯಾಂಕರ್‌ ನೀರನ್ನೆ ಅವಲಂಬಿಸಿದ್ದೇವೆ.
–ಅರುಣಾ ಸಾಗರ್‌

*
ಸಿಂಗಸಂದ್ರ
ಬೇಗೂರು ಕೆರೆಯಲ್ಲಿ ನೀರಿಲ್ಲದ ಕಾರಣ ಅಂತರ್ಜಲ ಬತ್ತಿದೆ. ಎಇಸಿಎಸ್‌ ಬಡಾವಣೆಯ ಅಂದಾಜು 300 ಮನೆಗಳಿಗೆ ಕೊಳವೆಬಾವಿ ನೀರೂ ದಕ್ಕುತ್ತಿಲ್ಲ. ಟ್ಯಾಂಕರ್‌ ನೀರಿನ ದರ ಪ್ರತಿದಿನವೂ ಏರಿಕೆಯಾಗುತ್ತಿದೆ. ಸದ್ಯ 6,000 ಲೀ. ಸಾಮರ್ಥ್ಯದ ಟ್ಯಾಂಕರ್‌ ನೀರಿಗೆ ₹ 1,200 ಪಾವತಿಸುತ್ತಿದ್ದೇವೆ.
–ಸೋಮಶೇಖರ್‌

*
ನಾಗಸಂದ್ರ
ನಾಗಸಂದ್ರ ಅಂಚೆಯ ತೋಟಗುಡ್ಡದಹಳ್ಳಿಯಲ್ಲಿ ನೀರು ಕೊರತೆ ಇದೆ. ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಿ.
–ಶೀಲಾ ಕೇಶವ

*
ಕೊಟ್ಟಿಗೆಹಳ್ಳಿ
ಯಲಹಂಕದ ಕೊಟ್ಟಿಗೆಹಳ್ಳಿಯ ಆಂಜನೇಯ ದೇವಸ್ಥಾನದ ರಸ್ತೆಯ ಸುಮಾರು 100 ಮನೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. 10 ದಿನಗಳಿಂದ ಸಮಸ್ಯೆ ಹೆಚ್ಚಿದೆ.
–ವೀರಭದ್ರ

*
ಆರ್‌.ಆರ್‌.ನಗರ
ರಾಜರಾಜೇಶ್ವರಿ ನಗರದ ಬಿಇಎಂಎಲ್‌ 3ನೇ ಹಂತದಲ್ಲಿ ನೀರಿನ ಸಮಸ್ಯೆ ಪ್ರತಿದಿನ ಹೆಚ್ಚುತ್ತಿದೆ. 4 ದಿನಗಳಿಗೆ ಒಮ್ಮೆ ನೀರು ಬರುತ್ತಿದೆ. ಅಗತ್ಯವಿರುವಷ್ಟು ನೀರನ್ನು ಕೊಡಿ.
–ಸಿ.ರೋಹಿದಾಸ್‌

*
ಕತ್ರಿಗುಪ್ಪೆ
ಬನಶಂಕರಿ 3ನೇ ಹಂತದ ಪೂರ್ಣಪ್ರಜ್ಞ ಬಡಾವಣೆಯಲ್ಲಿನ ಕೊಳವೆಬಾವಿಗಳು ಬತ್ತಿವೆ. ಸಂಬಂಧಪಟ್ಟವರು ಬೇಗ ಸಮಸ್ಯೆ ಬಗೆಹರಿಸಿ.
–ಎ.ವೇಣುಗೋಪಾಲ್‌

*
ಚಿಕ್ಕಪೇಟೆ
ಚಿಕ್ಕಪೇಟೆ ವಾರ್ಡ್‌ನ ಕಿಲ್ಲಾರಿ ರಸ್ತೆಯ 26 ಮತ್ತು 27ನೇ ಅಡ್ಡರಸ್ತೆಯ ಮನೆಗಳಿಗೆ ನೀರೇ ಬರುತ್ತಿಲ್ಲ. ಜಲಮಂಡಳಿಯ ಎಂಜಿನಿಯರ್‌ಗಳಿಗೆ ಮನವಿ ಸಲ್ಲಿಸಿದರು ಸ್ಪಂದಿಸುತ್ತಿಲ್ಲ.
–ಕಿಲ್ಲಾರಿ ರಸ್ತೆ ಪ್ರದೇಶದ ನಿವಾಸಿಗಳು

*
ತ್ಯಾಗರಾಜನಗರ
ಮಹಾದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ತಿಗಳರಪಾಳ್ಯದಲ್ಲಿ 10 ದಿನಗಳಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಜನರು ಟ್ಯಾಂಕರ್‌ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ಕೊಳವೆಗಳಿಂದ ನೀರು ಸಹ ಸೋರಿಕೆ ಆಗುತ್ತಿದೆ.
–ರಾಜು

*
ಬೇಗೂರು
ಬೇಗೂರು ರಸ್ತೆಯ ವಿಶ್ವಪ್ರಿಯಾ ಬಡಾವಣೆಯಲ್ಲಿ ನೀರಿನ ಸಮಸ್ಯೆ ಜಾಸ್ತಿಯಿದೆ. ದುಬಾರಿಯಾಗಿರುವ ಟ್ಯಾಂಕರ್‌ ನೀರೂ ಸಿಗುತ್ತಿಲ್ಲ.
–ಭವ್ಯಾ

*
ಸಿಗೇಹಳ್ಳಿ
ಮಲ್ಲಪ್ಪ ಬಡಾವಣೆಯಲ್ಲಿ ಪ್ರತಿ 15 ದಿನಗಳಿಗೆ ಒಮ್ಮೆಯಾದರೂ ಸರಿಯಾಗಿ ನೀಡು ಕೊಡುತ್ತಿಲ್ಲ.
–ಎಂ.ಜಿ.ವೆಂಕಟೇಶ

*
ಆರ್‌ಪಿಸಿ ಬಡಾವಣೆ
ನೀರನ್ನು ನಿಯಮಿತವಾಗಿ ಸರಬರಾಜು ಮಾಡುತ್ತಿಲ್ಲ. ರಾತ್ರಿ 10ರ ನಂತರ ನೀರನ್ನು ಬಿಡುತ್ತಾರೆ. ನಿದ್ದೆಗೆಟ್ಟು ನೀರು ತುಂಬಿಸಿಕೊಳ್ಳಬೇಕು.
–ಗೋವಿಂದದಾಸ ಮಗಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT