ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂನಿಂದ ರೆಂಬೆಗಳಿಗೆ ಬೇಕಾಬಿಟ್ಟಿ ಕತ್ತರಿ

Last Updated 4 ಸೆಪ್ಟೆಂಬರ್ 2020, 20:52 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುತ್‌ ಲೈನ್‌ಗಳಿಗೆ ತೊಂದರೆಯಾಗಬಾರದು ಎಂಬ ನೆಪದಲ್ಲಿ ಬೆಸ್ಕಾಂ ಸಿಬ್ಬಂದಿ ಮರದ ರೆಂಬೆ–ಕೊಂಬೆಗಳನ್ನು ಬೇಕಾಬಿಟ್ಟಿಯಾಗಿ ಕತ್ತರಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

‘ವಿದ್ಯಾರಣ್ಯಪುರದ ಬಾಲಾಜಿ ಲೇಔಟ್‌ನಲ್ಲಿ ಯಾವ ಮರವೂ 10 ಅಡಿಯಿಂದ 12 ಅಡಿ ಎತ್ತರದವರೆಗೆ ಇರಲು ಬಿಡುವುದೇ ಇಲ್ಲ. ವಿದ್ಯುತ್‌ ಮಾರ್ಗಗಳಿಗೆ ತೊಂದರೆಯಾಗಿದೆ ಎಂದು ಯಾರೂ ದೂರು ನೀಡಿದಿದ್ದರೂ ಸುಮ್ಮನೆ ಕೊಂಬೆಗಳನ್ನು ಕತ್ತರಿಸಲಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ನಿಶಂದ್‌ ನಾಯರ್‌ ದೂರಿದರು.

‘ಸುಮಾರು ಅರ್ಧ ಕಿ.ಮೀ.ವರೆಗೆ ಯಾವ ಮರವೂ ಹತ್ತು ಅಡಿಗಿಂತ ಎತ್ತರವಾಗಿಲ್ಲ. ವಿದ್ಯುತ್‌ ವೈಯರ್‌ಗಳು ಸಾಕಷ್ಟು ಎತ್ತರದಲ್ಲೇ ಇವೆ. ಆದರೂ ಕತ್ತರಿಸುತ್ತಾರೆ. ಅಲ್ಲದೆ, ರಸ್ತೆಯ ಎರಡೂ ಕಡೆಗಳಲ್ಲಿಯೂ ವಿದ್ಯುತ್‌ ಮಾರ್ಗ ಹಾದು ಹೋಗಿರುವುದರಿಂದ ಮರಗಳನ್ನು ಕತ್ತರಿಸಲಾಗುತ್ತಿದೆ. ನೆರಳೇ ಇಲ್ಲದಂತಾಗಿದೆ’ ಎಂದೂ ಅವರು ಹೇಳಿದರು.

‘ಬೆಸ್ಕಾಂನವರು ಹೀಗೆ ರೆಂಬೆಗಳನ್ನು ಕತ್ತರಿಸಿ ಹೋಗುತ್ತಾರೆ. ನಾಲ್ಕೈದು ದಿನಗಳ ನಂತರ ಬಿಬಿಎಂಪಿ ಸಿಬ್ಬಂದಿ ಬಂದು ಅವುಗಳನ್ನು ತೆರವು ಮಾಡುತ್ತಾರೆ. ಆದರೆ, ಯಾವುದೂ ನಿಯಮದ ಪ್ರಕಾರ ನಡೆಯುತ್ತಿಲ್ಲ. ಮರದ ಕೊಂಬೆಗಳನ್ನು ಕತ್ತರಿಸುವುದಕ್ಕೆ ಮುನ್ನ ಫೋಟೊ ತೆಗೆಯಬೇಕು. ಅದನ್ನು ಸಂಬಂಧಪಟ್ಟವರಿಗೆ ಕಳುಹಿಸಬೇಕು. ಇದ್ಯಾವ ಕಾರ್ಯವೂ ನಡೆಯುತ್ತಿಲ್ಲ’ ಎಂದು ಅವರು ದೂರಿದರು.

‘ಇನ್ಸುಲೇಟೆಡ್‌ ಎಚ್‌ಟಿ (ಐಎಚ್‌ಟಿ) ಕೇಬಲ್‌ ಹಾಕಿದರೆ, ಮರಗಳ ಮೂಲಕವೇ ಅದು ಹಾದು ಹೋದರೂ ಏನೂ ಆಗುವುದಿಲ್ಲ. ರೆಂಬೆಗಳನ್ನು ಕತ್ತರಿಸುವ ಅಗತ್ಯ ಬೀಳುವುದಿಲ್ಲ. ಬೆಸ್ಕಾಂ ಇತ್ತ ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಬೀಳಬಹುದು. ವಿದ್ಯುತ್‌ ವೈರ್‌ಗಳಿಗೆ ಹಾನಿಯಾಗಬಾರದು, ವಿದ್ಯುತ್‌ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ರೆಂಬೆಗಳನ್ನು ಕತ್ತರಿಸಲಾಗುತ್ತಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ತಿಳಿಸಿದರು.

‘ಐಎಚ್‌ಟಿ ಅಥವಾ ಎಚ್‌ವಿ ಕೇಬಲ್‌ ಹಾಕಿದರೂ ಜೋರಾಗಿ ಗಾಳಿ ಬೀಸಿದರೆ ಅದೂ ತಡೆಯುವುದಿಲ್ಲ’ ಎಂದ ಅವರು, ‘ಬೇಕಾಬಿಟ್ಟಿಯಾಗಿ ರೆಂಬೆ–ಕೊಂಬೆಗಳನ್ನು ಕಡಿಯಲು ಸಾಧ್ಯವಿಲ್ಲ. ಆದರೂ ಈ ಕುರಿತು ಪರಿಶೀಲನೆ ನಡೆಸಲು ಸಂಬಂಧಪಟ್ಟ ಎಂಜಿನಿಯರ್‌ಗೆ ಸೂಚನೆ ನೀಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT