ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ವೆಬ್‌ ಪೋರ್ಟಲ್‌: 24 ಗಂಟೆ ಸೇವೆ

ಪ್ರಜಾವಾಣಿ ವರದಿ ಪರಿಣಾಮ
Last Updated 1 ಡಿಸೆಂಬರ್ 2022, 19:10 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವಿದ್ಯುತ್‌ ಸಂಪರ್ಕ ನೋಂದಣಿ, ಜನಸ್ನೇಹಿ ವಿದ್ಯುತ್‌ ಸೇವೆಗಳು ಸೇರಿ ಹಲವು ವಿದ್ಯುತ್‌ ಸೇವೆಗಳಿಗಾಗಿ ರೂಪಿಸಲಾಗಿರುವ ಆರ್-ಎಪಿಡಿಆರ್‌ಪಿ ತಂತ್ರಾಂಶದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲಾಗಿದ್ದು, ಎಲ್ಲಾ 5 ಎಸ್ಕಾಂಗಳ ಗ್ರಾಹಕರಿಗೆ 24 ಗಂಟೆಗಳ ಸೇವೆಯನ್ನು ಒದಗಿಸಲಾಗುತ್ತಿದೆ.

ಜುಲೈ 2022ರಲ್ಲಿ ಹಾರ್ಡ್‌ವೇರ್‌ನಲ್ಲಿ ಕಂಡುಬಂದ ದೋಷದಿಂದಾಗಿ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ಸಾಫ್ಟ್‌ವೇರ್‌ ನಿರ್ವಹಣೆಗೆ ಅಡಚಣೆ ಉಂಟಾಗಿತ್ತು.

ಆ ಸಂದರ್ಭದಲ್ಲಿ ಗ್ರಾಹಕರು ವೆಬ್‌ ಪೋರ್ಟಲ್‌ಗೆ ಲಾಗ್‌ಇನ್‌ ಆಗಲು, ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1.30ರವರೆಗೆ ಮತ್ತು ಇತರ ಎಸ್ಕಾಂಗಳಿಗೆ ಮಧ್ಯಾಹ್ನ 1.30 ರಿಂದ ಸಂಜೆ 7ರವರೆಗೆ ಸಮಯ ನಿಗದಿ ಪಡಿಸಲಾಗಿತ್ತು. ಇದೀಗ ಕೆಲವು ಹೆಚ್ಚುವರಿ ಸರ್ವರ್‌ಗಳು ಮತ್ತು ತಂತ್ರಾಂಶಗಳ ಉನ್ನತೀಕರಣದೊಂದಿಗೆ 24 ಗಂಟೆಗಳ ನಿರಂತರ ಸೇವೆಗೆ ಆರ್-ಎಪಿಡಿಆರ್‌ ವೆಬ್‌ ಅಪ್ಲಿಕೇಷನ್‌ ಸಿದ್ಧಪಡಿಸಲಾಗಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

‘ಪ್ರಜಾವಾಣಿ’ಯ ಡಿ. 1ರ ಸಂಚಿಕೆಯಲ್ಲಿ ‘ಎಸ್ಕಾಂ ಪೋರ್ಟಲ್‌ ಸಮಸ್ಯೆ: ಗ್ರಾಹಕರ ಪರದಾಟ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಬೆಸ್ಕಾಂ ಪ್ರತಿಕ್ರಿಯಿಸಿದೆ.

ಆರ್-ಎಪಿಡಿಆರ್‌ಪಿ (ಪುನರ್‌ ರಚಿಸಿದ ವೇಗವರ್ಧಿತ ವಿದ್ಯುತ್‌ ಅಭಿವೃದ್ಧಿ ಮತ್ತು ಸುಧಾರಣಾ ಕ್ರಮಗಳು) ತಂತ್ರಾಂಶ 12 ವರ್ಷಗಳ ಹಳೆಯದಾಗಿರುವುದರಿಂದ ಗ್ರಾಹಕರು ಸರ್ವರ್‌ಗೆ ಒಮ್ಮಲೇ ಲಾಗ್‌ಇನ್‌ ಆದ ಸಂದರ್ಭದಲ್ಲಿ ಮಾತ್ರ ಅಡಚಣೆ ಉಂಟಾಗುತ್ತಿದ್ದು, ಅದನ್ನು ಸರಿಪಡಿಸಲು ಬೆಸ್ಕಾಂ ಕ್ರಮವಹಿಸುತ್ತಿದೆ ಎಂದು ಮಹಾಂತೇಶ ಬೀಳಗಿ ತಿಳಿಸಿದರು.

2 ವರ್ಷಗಳಿಂದ ಇನ್ಫೊಸಿಸ್‌ ಸಂಸ್ಥೆ ಈ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದು, ಕಾರಣಾಂತರಗಳಿಂದ ಹಿಂದೆ ಸರಿದಿರುವುದರಿಂದ ಹೊಸದಾಗಿ ಕೆಟಿಪಿಪಿ ಕಾಯ್ದೆ ಅನ್ವಯ ಟೆಂಡರ್‌ ಕರೆದು ಆಯ್ಕೆಯಾದ ಇನ್‌ಫೈನೈಟ್‌ ಕಂಪ್ಯೂಟರ್‌ ಸಲ್ಯೂಷನ್ಸ್‌ ಕಂಪನಿಗೆ ಕಾರ್ಯಾದೇಶ ನೀಡಿ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಸದ್ಯ ಕಾರ್ಯನಿರ್ವಹಿಸುತ್ತಿರುವ ತಂತ್ರಾಂಶದ ಲೋಪದೋಷಗಳನ್ನು ಶಾಶ್ವತವಾಗಿ ಬಗೆಹರಿಸಲು ಹೊಸ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದ್ದು, ಇನ್ನು 4-5 ತಿಂಗಳಲ್ಲಿ ಹೊಸ ತಂತ್ರಾಂಶ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT