ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭುಂಗ್ರೂ ಪದ್ಧತಿಯಿಂದ ನೀರಿನ ಸದ್ಬಳಕೆ: ಸಂಶೋಧಕ ಕೇತನ್ ಪಾಲ್ ಅಭಿಮತ

Last Updated 25 ಮಾರ್ಚ್ 2021, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಮಳೆನೀರು ಸಂಗ್ರಹ ವಿಧಾನ ಅಳವಡಿಕೆಯಿಂದ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವ ಜತೆಗೆ ಅಂತರ್ಜಲದ ಮಟ್ಟವು ಹೆಚ್ಚಲಿದೆ’ ಎಂದು ಸಂಶೋಧಕ ಬಿಪ್ಲಬ್ ಕೇತನ್ ಪಾಲ್ ತಿಳಿಸಿದರು.

ಯೂನಿವರ್ಸಲ್ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಷನ್ಸ್‌ ನಗರದಲ್ಲಿ ಆಯೋಜಿಸಿದ ‘ಭುಂಗ್ರೂ ನೀರು ಕೊಯ್ಲು ತಂತ್ರಗಾರಿಕೆ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ‘ಗುಜರಾತ್‌ನಲ್ಲಿ ಪರಿಚಯಿಸಲಾಗಿರುವ ಭುಂಗ್ರೂ ಪದ್ಧತಿಯು ನೀರಿನ ಸಮಸ್ಯೆಯನ್ನು ನಿವಾರಿಸಲು ಸಹಕಾರಿಯಾಗಿದೆ. ಈ ಪದ್ಧತಿಯನ್ನು ಕರ್ನಾಟಕದಲ್ಲಿ ಕೂಡ ಅಳವಡಿಸುವ ಕೆಲಸವಾಗಬೇಕು. ಹರಿದು ಹೋಗುವ ಮಳೆ ನೀರನ್ನು ಭೂಗರ್ಭದಲ್ಲಿ ಸಂಗ್ರಹಿಸುವ ಕೆಲಸವಾಗಬೇಕು. ಆಗ ನೀರಿನ ಸದ್ಭಳಕೆ ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಶೋಕ್ ಡಿ. ಹಂಜಗಿ ಮಾತನಾಡಿ, ‘ಹವಾಮಾನ ಬದಲಾವಣೆಯಿಂದ ಗಂಭೀರ ಅಪಾಯಗಳನ್ನು ಎದುರಿಸುತ್ತಿದ್ದೇವೆ. ನಿಸರ್ಗ ಕೇಂದ್ರಿತವಾದ ಬದುಕನ್ನು ಕಟ್ಟಿಕೊಳ್ಳುವುದು ಅನಿವಾರ್ಯ. ಭವಿಷ್ಯದ ಜನಾಂಗವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದರು.

ಯೂನಿವರ್ಸಲ್ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ‘ಸುಸ್ಥಿರ ಅಭಿವೃದ್ಧಿಯಿಂದ ಮಾತ್ರ ಈ ನಿಸರ್ಗದಲ್ಲಿರುವ ಜನವನ್ನು ಕಾಪಾಡಲು ಸಾಧ್ಯ. ಇಲ್ಲದಿದ್ದಲ್ಲಿ ನೀರಿಗಾಗಿ ಮಹಾಯುದ್ಧಗಳು ನಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಳೆ ನೀರನ್ನು ಸಂಗ್ರಹಿಸಲು ಮುಂದಾಗದಿದ್ದಲ್ಲಿ ಅಪಾಯವನ್ನು ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT