ಮಂಗಳವಾರ, ಜುಲೈ 27, 2021
23 °C
ರೈಲ್ವೆ ಇಲಾಖೆಯ 14 ಎಕರೆ ಜಾಗದಲ್ಲಿ ಮಿವಾಯಾಕಿ ಪದ್ಧತಿಯಡಿ ಕಿರುಅರಣ್ಯ ಅಭಿವೃದ್ಧಿ

ಬೆಂಗಳೂರು | ಯಶವಂತಪುರದಲ್ಲಿ ತಲೆ ಎತ್ತಲಿದೆ ಜೀವವೈವಿಧ್ಯ ಉದ್ಯಾನ

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯಶವಂತಪುರದಲ್ಲಿರುವ ರೈಲ್ವೆ ಇಲಾಖೆಯ 14 ಎಕರೆ ಜಾಗದಲ್ಲಿ ಜೀವವೈವಿಧ್ಯ ಉದ್ಯಾನದ ವಾತಾವರಣ ರೂಪುಗೊಳ್ಳಲಿದೆ. ಬಿಬಿಎಂಪಿ ಮತ್ತು ಕೆಲವು ಸರ್ಕಾರೇತರ ಸಂಸ್ಥೆಗಳ ನೇತೃತ್ವದಲ್ಲಿ ಈ ಪ್ರದೇಶದಲ್ಲಿ ಕಿರುಅರಣ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 

‘ಸಸಿಗಳನ್ನು ನೆಟ್ಟು ಕಿರುಅರಣ್ಯ ಪ್ರದೇಶವನ್ನು ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆಯು 14 ಎಕರೆ ನೀಡಿದೆ. ಇಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗಿದೆ. ಸಸಿ–ಗಿಡಗಳು ಮತ್ತು ಇದಕ್ಕೆ ಬೇಕಾದ ಉಪಕರಣಗಳನ್ನು ಬಿಬಿಎಂಪಿ ಒದಗಿಸಲಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಿವಾಯಾಕಿ ಪದ್ಧತಿಯಡಿ ಇಲ್ಲಿ ಗಿಡಗಳನ್ನು ನೆಡಲಾಗುವುದು. ಜಪಾನಿನ ಸಸ್ಯವಿಜ್ಞಾನಿ ಅಕಿರ ಮಿವಾಯಾಕಿ ಪ್ರತಿಪಾದಿಸಿರುವ ಈ ಪದ್ಧತಿಯಡಿ ಗಿಡ–ಸಸಿಗಳನ್ನು ನೆಟ್ಟರೆ, ಈ ಪ್ರದೇಶದಲ್ಲಿ ಮೂರು–ನಾಲ್ಕು ತಿಂಗಳಲ್ಲಿಯೇ ಕಿರುಅರಣ್ಯ ರೂಪುಗೊಳ್ಳಲಿದೆ. ಸ್ಥಳೀಯ ಪ್ರಭೇದಗಳ ಸಸ್ಯ–ಗಿಡಗಳನ್ನು ಇಲ್ಲಿ ನೆಡಲಾಗುತ್ತದೆ’ ಎಂದು ಅವರು ತಿಳಿಸಿದರು. 

‘ಬಿಬಿಎಂಪಿ ಬಳಿ ಹತ್ತು ಲಕ್ಷಕ್ಕೂ ಹೆಚ್ಚು ಸಸಿಗಳು ಇವೆ. ಕೆಲವು ಸರ್ಕಾರೇತರ ಸಂಸ್ಥೆಗಳೂ ಸಸಿಗಳನ್ನು ಒದಗಿಸಲು ಸಿದ್ಧ ಇವೆ. ಇವುಗಳನ್ನು ನೆಟ್ಟು, ಪೋಷಿಸಲು ಸ್ಥಳವಿಲ್ಲ ಎಂದು ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ಕುಮಾರ್‌ ವರ್ಮಾ ಅವರ ಗಮನಕ್ಕೆ ತಂದಾಗ, ಅವರು ಜಾಗ ನೀಡಲು ಒಪ್ಪಿದರು’ ಎಂದು ಕೋಟಿವೃಕ್ಷ ಸೈನ್ಯದ ಸ್ಥಾಪಕ ರಾಜಕುಮಾರ್‌ ದುಗರ್‌ ತಿಳಿಸಿದರು. 

ಯಶವಂತಪುರದಿಂದ ತುಮಕೂರಿಗೆ ಹೋಗುವ ರೈಲು ಮಾರ್ಗದ ಪಕ್ಕ, ಲೊಟ್ಟೆಗೊಳ್ಳಹಳ್ಳಿ ತಿರುವಿನ ಬಳಿಯಲ್ಲಿ ಇರುವ ಜಾಗದಲ್ಲಿ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. 

‘ಒಂದು ಎಕರೆಯಲ್ಲಿ 200ಕ್ಕಿಂತ ಹೆಚ್ಚು ದೊಡ್ಡ ಮರಗಳನ್ನು ಬೆಳೆಯಬಹುದು. 15 ಅಡಿಗೆ ಒಂದರಂತೆ ಗಿಡ ನೆಡಲು ಮುಂದಾಗಿದ್ದೇವೆ. ಜೀವವೈವಿಧ್ಯ ಉದ್ಯಾನದ ಮಾದರಿಯಲ್ಲಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಉದ್ದೇಶ ನಮ್ಮದು’ ಎಂದರು. 

ನಿರ್ವಹಣೆಗೆ ಆ್ಯಪ್‌: ‘ಒಂದು ವರ್ಷದಿಂದ ಕೋಟಿವೃಕ್ಷ ಸೈನ್ಯ ಕೆಲಸ ಮಾಡುತ್ತಿದೆ. ಬಿಬಿಎಂಪಿಯು ಕಸ ಹಾಕುವ ಜಾಗದಲ್ಲಿ ಗಿಡ ನೆಡಲು ಅವಕಾಶ ಕೊಡುತ್ತಿತ್ತು. ಆದರೆ, ಇಲ್ಲಿ ಸಸಿಗಳ ನಿರ್ವಹಣೆ ಕಷ್ಟವಾಗುತ್ತಿತ್ತು. ರೈಲ್ವೆ ಇಲಾಖೆ ಜಾಗ ನೀಡಿರುವುದರಿಂದ ಗಿಡಗಳ ನಿರ್ವಹಣೆಗೆ ಅನುಕೂಲವಾಗಲಿದೆ. ನಮ್ಮ ಬಳಿ ಸಾವಿರಾರು ಜನ ಸ್ವಯಂಸೇವಕರಿದ್ದಾರೆ. ಇವರ ಮೂಲಕ ಸಸ್ಯಗಳನ್ನು ನೆಡಲಾಗುವುದು’ ಎಂದು ಕೋಟಿವೃಕ್ಷ ಸೈನ್ಯದ ಸಹಸ್ಥಾಪಕಿ ಸುರಭಿ ತೋಮರ್‌ ಹೇಳಿದರು. 

‘ಸಸಿ ನೆಟ್ಟು ಅದನ್ನು ಎರಡು ವರ್ಷಗಳವರೆಗೆ ಪೋಷಿಸುವ ಕೆಲಸವನ್ನು ಮಾಡಲಾಗುವುದು.. ಯಾರು, ಯಾವ ಸಸಿ ನೆಟ್ಟರು, ಅದರ ಪರಿಸ್ಥಿತಿಯನ್ನು ಎಂಬ ಮಾಹಿತಿ ದಾಖಲಿಸಲು ಆ್ಯಪ್‌ ಒಂದನ್ನು ಅಭಿವೃದ್ಧಿ ಮಾಡಲಾಗಿದೆ. ಎಲ್ಲರ ಮಾಹಿತಿಯನ್ನೂ ಇದರಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ ಕರೆ ಮಾಡಿ, ನೀವು ನೆಟ್ಟಿರುವ ಸಸ್ಯದ ಪೋಷಣೆ ಹೇಗೆ ನಡೆಯುತ್ತಿದೆ ಎಂದು ಕೇಳಲಾಗುವುದು’ ಎಂದು ಅವರು ತಿಳಿಸಿದರು.

ನೆಡಲು ಉದ್ದೇಶಿಸಲಾಗಿರುವ ಗಿಡಗಳು
ಅಶ್ವತ್ಥ, ಅತ್ತಿ, ಅರ್ಜುನ, ಹೊನ್ನೆ, ಇಪ್ಪೆ, ಸಪ್ತಪರ್ಣಿ, ಬೀಟೆ, ನೇರಳೆ, ಹಲಸು, ನೆಲ್ಲಿಕಾಯಿ, ಮಾವು, ಸೀತಾಫಲ ಮತ್ತಿತರ ಸ್ಥಳೀಯ ಪ್ರಭೇದದ ಗಿಡಗಳು

**

ಸಸಿಗಳನ್ನು ನೆಟ್ಟು, ಪೋಷಿಸಲು ಇಲಾಖೆಯ ಜಾಗ ನೀಡಲಾಗಿದೆ. ಇಳಿಜಾರು ಪ್ರದೇಶದಲ್ಲಿ ಒಂದು ಕೊಳ ಅಥವಾ ಕೆರೆ ನಿರ್ಮಿಸುವ ಯೋಜನೆಯೂ ನಮ್ಮ ಮುಂದಿದೆ.
-ಅಶೋಕ್‌ಕುಮಾರ್‌ ವರ್ಮಾ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು