ಶನಿವಾರ, ಜನವರಿ 18, 2020
19 °C

‘ಸ್ಮಾರ್ಟ್‌ಸಿಟಿಗಿಂತ ಜೀವವೈವಿಧ್ಯ ರಕ್ಷಣೆ ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜನಪ್ರತಿನಿಧಿಗಳು ಸ್ಮಾರ್ಟ್‌ಸಿಟಿಯಂತಹ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಈಗಿನ ಸಂದರ್ಭದಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಜೀವವೈವಿಧ್ಯದ ರಕ್ಷಣೆಗೆ ಆದ್ಯತೆ ನೀಡುವುದು ಮುಖ್ಯವಾಗಬೇಕಿದೆ’ ಎಂದು ಪರಿಸರವಾದಿ ಕ್ಷಿತಿಜ್‌ ಅರಸ್‌ ಹೇಳಿದರು. 

ಆ್ಯಕ್ಷನ್‌ ಏಯ್ಡ್‌ ಸಂಸ್ಥೆ ಮತ್ತು ಜೈನ್‌ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದಲ್ಲಿ ಶನಿವಾರ ನಡೆದ ‘ಕೆರೆಗಳ ಸಂರಕ್ಷಣೆ ಹಾಗೂ ಜೀವವೈವಿಧ್ಯತೆ’ ಕುರಿತು ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ವಿಶ್ವದ ಎಲ್ಲ ನಗರಗಳ ವಿಸ್ತೀರ್ಣ ಒಟ್ಟಾರೆ ಭೂಮಿಯ ಶೇ 2ಕ್ಕಿಂತ ಕಡಿಮೆ ಇದೆ. ಆದರೆ, ಈ ನಗರಗಳಿಂದ ಶೇ 75ರಷ್ಟು ವಾತಾವರಣ ಕಲುಷಿತವಾಗುತ್ತಿದೆ’ ಎಂದರು. 

‘ಸುತ್ತಮುತ್ತಲಿನ ಜೀವಸಂಕುಲವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಸಂವೇದನೆಯಿಂದ ವರ್ತಿ
ಸುತ್ತಿಲ್ಲ. ಸ್ಮಾರ್ಟ್‍ಸಿಟಿ, ಮೇಲ್ಸೇತುವೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಪರಿಸರದ ಬಗ್ಗೆ ಮಾತನಾಡುವುದಿಲ್ಲ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ವೈಟ್‍ಟಾಪಿಂಗ್ ಮಾಡುವುದರಲ್ಲಿ ಅರ್ಥವೇ ಇಲ್ಲ. ಆರು ಸಾವಿರ ಮಿ.ಮೀ ಮಳೆಯಾದರೆ ವೈಟ್‍ಟಾಪಿಂಗ್ ಮಾಡುವುದರಲ್ಲಿ ಅರ್ಥವಿದೆ. ಆದರೆ, ನಗರದಲ್ಲಿ 900 ಮಿ.ಮೀಗಿಂತ ಹೆಚ್ಚು ಮಳೆಯಾಗುವುದೇ ಇಲ್ಲ. ಈ ರೀತಿ ಅವೈಜ್ಞಾನಿಕ ಯೋಜನೆಗಳಿಂದ ಜೀವಸಂಕುಲಗಳು ನಶಿಸುತ್ತಿವೆ’ ಎಂದರು.

ಪರಿಸರವಾದಿ ಭಾರ್ಗವಿ ರಾವ್ ಮಾತನಾಡಿ, ‘ಉದ್ದೇಶಪೂರ್ವಕವಾಗಿ 195 ಪ್ರಭೇದದ ಮರಗಳನ್ನು ಅರಣ್ಯ ರಕ್ಷಣೆಯ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಈ ಮೂಲಕ ದೊಡ್ಡ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ’ ಎಂದು ದೂರಿದರು.

‘ದೊಡ್ಡಕಲ್ಲಸಂದ್ರ ಕೆರೆಯ ಸುತ್ತ 200ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಸ್ಥಳೀಯ ನಿವಾಸಿಗಳಿಗೆ ಕೆರೆಯ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದೂವರೆ ವರ್ಷದಲ್ಲಿ ಕೆರೆ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಪಕ್ಷಿ ವೀಕ್ಷಣೆ, ಚಿಟ್ಟೆ ವೀಕ್ಷಣೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳುವಷ್ಟು ವೈವಿಧ್ಯಮಯವಾಗಿದೆ’ ಎಂದು ಉಲ್ಲಾಸ್‌ ಆನಂದ್ ಹೇಳಿದರು. 

ದೊಡ್ಡಕಲ್ಲಸಂದ್ರ ಕೆರೆ ಅಭಿವೃದ್ಧಿ ವರದಿಯನ್ನು ಪರಿಸರವಾದಿ ಶುಭಾ ರಾಮಚಂದ್ರನ್‌ ಬಿಡುಗಡೆ ಮಾಡಲಾಯಿತು.

ಪಕ್ಷಿ–ಚಿಟ್ಟೆಗಳ ತಾಣ ದೊಡ್ಡಕಲ್ಲಸಂದ್ರ ಕೆರೆ

ಕನಕಪುರ ರಸ್ತೆಯಲ್ಲಿರುವ ದೊಡ್ಡಕಲ್ಲಸಂದ್ರ ಕೆರೆಯನ್ನು ಕೋಣನಕುಂಟೆ ಕೆರೆ ಎಂದೂ ಕರೆಯಲಾಗುತ್ತದೆ. 21 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೆರೆಯ ವಿವಿಧ ಬಗೆಯ ಪಕ್ಷಿಗಳನ್ನೂ ಆಕರ್ಷಿಸುತ್ತದೆ. ದೊಡ್ಡಕಲ್ಲಸಂದ್ರ ಕೆರೆಯ ಸುತ್ತಮುತ್ತಲಿನ ಪ್ರದೇಶದಲ್ಲಿ 43 ವಿವಿಧ ಜಾತಿಯ 354 ಮರಗಳು, 94 ಪ್ರಭೇದದ ಪಕ್ಷಿಗಳು ಹಾಗೂ 38 ಭಿನ್ನವಾದ ಚಿಟ್ಟೆಗಳಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು