ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟ್‌ ಕಾಯಿನ್ ಹಗರಣ: ಆರೋಪಿ ಸುನೀಶ್‌ ಹೆಗ್ಡೆ ವಿರುದ್ದ ಶ್ರೀಕಿ ದೂರು

Published : 19 ಸೆಪ್ಟೆಂಬರ್ 2024, 23:59 IST
Last Updated : 19 ಸೆಪ್ಟೆಂಬರ್ 2024, 23:59 IST
ಫಾಲೋ ಮಾಡಿ
Comments

ಬೆಂಗಳೂರು: ಬಿಟ್‌ ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ, ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಸುನೀಶ್‌ ಹೆಗ್ಡೆ ವಿರುದ್ಧ ಸಿಐಡಿ ಡಿಜಿಪಿ ಹಾಗೂ ಗೃಹ ಇಲಾಖೆಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೂರು ತಲುಪಿದ ಬೆನ್ನಲ್ಲೇ ವಿಚಾರಣೆ ನಡೆಸುವಂತೆ ಗೃಹ ಇಲಾಖೆ ಸಂಬಂಧಪಟ್ಟವರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.‌

‘2020ರಲ್ಲಿ ಕೆಂಪೇಗೌಡ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್‌ ಪ್ರಕರಣ ಹಾಗೂ ಅದೇ ವರ್ಷ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಬಿಟ್‌ ಕಾಯಿನ್‌ ಅಕ್ರಮ ಪ್ರಕರಣದ ಆರೋಪಿಯಾಗಿರುವ ಸುನೀಶ್‌ ಹೆಗ್ಡೆ ವಿರುದ್ಧ ಶ್ರೀಕಿ ದೂರು ನೀಡಿದ್ದಾರೆ. ಸೆಪ್ಟೆಂಬರ್ 3ರಂದು ಇ–ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ’ ಎಂದು ಗೊತ್ತಾಗಿದೆ.

ಈ ಪ್ರಕರಣದಲ್ಲಿ ಬಂಧತರಾಗಿದ್ದ ಶ್ರೀಕಿ ಹಾಗೂ ಸುನೀಶ್ ಹೆಗ್ಡೆ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಆಗಿದ್ದರು. ಅನುಮತಿ ಇಲ್ಲದೇ ವಿದೇಶ ಪ್ರವಾಸ ಮಾಡಬಾರದು ಎಂದು ಕೋರ್ಟ್‌ ಷರತ್ತು ವಿಧಿಸಿತ್ತು. ಆದರೆ, ಸುನೀಶ್‌ ಹೆಗ್ಡೆ ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ಶ್ರೀಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆಯೂ ಹಗರಣಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಸಂಜಯನಗರದ ನಿವಾಸಿ ಸುನೀಶ್ ಹೆಗ್ಡೆ ಅವರ ಮನೆಯ ಮೇಲೆ ಎಸ್‌ಐಟಿ ದಾಳಿ ನಡೆಸಿತ್ತು. ಪ್ರಕರಣ ಸಂಬಂಧ ಕೆಲವು ದಾಖಲೆಗಳನ್ನೂ ಅಂದು ಜಪ್ತಿ ಮಾಡಿಕೊಳ್ಳಲಾಗಿತ್ತು.

ಶ್ರೀಕಿ ವಿದೇಶದಲ್ಲಿ ವ್ಯಾಸಂಗ ಮಾಡಿದ್ದರು. ಅಲ್ಲಿಂದ ವಾಪಸ್‌ ಬಂದ ಬಳಿಕ, ಸುನೀಶ್‌ ಹೆಗ್ಡೆ ಹಾಗೂ ಇತರರು ಪರಿಚಯ ಆಗಿದ್ದರು. ಶ್ರೀಕಿ ಹಾಗೂ ಸುನೀಶ್‌ ಸೇರಿಕೊಂಡು ಐದು ವರ್ಷಗಳ ಹಿಂದೆ ಸರ್ಕಾರದ ಇ– ಸಂಗ್ರಹಣಾ ವಿಭಾಗದ ವೆಬ್‌ಸೈಟ್‌ ಹ್ಯಾಕ್‌ ಮಾಡಿದ್ದರು. ಹಣ ವರ್ಗಾವಣೆ ಮಾಡಿಕೊಂಡಿದ್ದರು. ಆ ಪ್ರಕರಣದಲ್ಲಿ ಸಿಐಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು ಎಂದು ಸಿಐಡಿ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT