ಬೆಂಗಳೂರು: ‘ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದಿರುವ ಗಲಭೆ ಕುರಿತು ಸತ್ಯಾಂಶ ಅರಿಯಲು ಬಿಜೆಪಿ ರಾಜ್ಯ ಘಟಕ ರಚಿಸಿರುವ ತಮ್ಮ ನೇತೃತ್ವದ ಸತ್ಯಶೋಧನಾ ಸಮಿತಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಲಿದೆ’ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದರು.
ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಶಾಸಕ ಬೈರತಿ ಬಸವರಾಜ, ಮಾಜಿ ಸಚಿವ ಕೆ.ಸಿ.ನಾರಾಯಣ ಗೌಡ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲಕ್ಷ್ಮೀ ಅಶ್ವಿನ್ ಗೌಡ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಸಮಿತಿಯಲ್ಲಿದ್ದಾರೆ‘ ಎಂದರು.
‘ನಾಗಮಂಗಲ ಘಟನೆಗೆ ಪೊಲೀಸರ ವೈಫಲ್ಯ ಕಾರಣ ಎಂದು ಸಾಬೀತಾಗಿದೆ. ಆರಂಭದಲ್ಲಿ ಘಟನೆ ಕುರಿತು ಸರ್ಕಾರ ಹಗುರವಾಗಿ ಪ್ರತಿಕ್ರಿಯಿಸಿತ್ತು. ಗುಪ್ತಚರ ವಿಭಾಗದ ಮುಖ್ಯಸ್ಥರ ವರ್ಗಾವಣೆ ಮೂಲಕ ವೈಫಲ್ಯ ಒಪ್ಪಿಕೊಂಡಿದೆ’ ಎಂದು ಹೇಳಿದರು.
‘ಕಾಂಗ್ರೆಸ್ ಸರ್ಕಾರ ಒಂದು ಧರ್ಮದ ಜನರ ಪರ ಕೆಲಸ ಮಾಡುತ್ತಿದೆ. ಒಂದು ಕೋಮಿನವರ ಪ್ರಚೋದನೆಯೇ ನಾಗಮಂಗಲದಲ್ಲಿ ಗಲಭೆಗೆ ಕಾರಣ’ ಎಂದು ಆರೋಪಿಸಿದರು.